Commonwealth Games: ಹೈಜಂಪ್‌ನಲ್ಲಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ ತೇಜಸ್ವಿನ್ ಶಂಕರ್
* ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಹೈಜಂಪ್‌ನಲ್ಲಿ ಪದಕ ಗೆದ್ದ ಭಾರತ
* 23 ವರ್ಷದ ತೇಜಸ್ವಿನ್ ಶಂಕರ್‌ಗೆ ಒಲಿದ ಕಂಚಿನ ಪದಕ
* ಹೈಜಂಪ್ ಫೈನಲ್‌ನಲ್ಲಿ 2.22 ಮೀಟರ್ ಎತ್ತರ ಜಿಗಿಯುವ ಮೂಲಕ ಪದಕ ಗೆದ್ದ ತೇಜಸ್ವಿನ್
ಬರ್ಮಿಂಗ್‌ಹ್ಯಾಮ್(ಆ.04): ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಯುವ ಹೈಜಂಪ್ ಪಟು ತೇಜಸ್ವಿನ್ ಶಂಕರ್ ಪದಕ ಗೆಲ್ಲುವ ಮೂಲಕ ಭಾರತದ ಅಥ್ಲೆಟಿಕ್ಸ್‌ನ ಟ್ರ್ಯಾಕ್ ಅಂಡ್ ಫೀಲ್ಡ್ ವಿಭಾಗದಲ್ಲಿ ಪದಕದ ಖಾತೆ ತೆರೆದಿದ್ದಾರೆ. ಆಗಸ್ಟ್ 03ರ ತಡರಾತ್ರಿ ನಡೆದ ಹೈಜಂಪ್ ಫೈನಲ್ ಸ್ಪರ್ಧೆಯಲ್ಲಿ 23 ವರ್ಷದ ತೇಜಸ್ವಿನ್ ಶಂಕರ್ ಅತ್ಯದ್ಭುತ ಪ್ರದರ್ಶನ ತೋರುವ ಮೂಲಕ ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತದ ರಾಷ್ಟ್ರೀಯ ದಾಖಲೆ ವೀರ ತೇಜಸ್ವಿನ್ ಶಂಕರ್, ಹೈಜಂಪ್ ಫೈನಲ್‌ನಲ್ಲಿ 2.22 ಮೀಟರ್ ಎತ್ತರ ಜಿಗಿಯುವ ಮೂಲಕ ಕಂಚಿನ ಪದಕ ಜಯಿಸಿದರೇ, 2.25 ಮೀಟರ್ ಎತ್ತರ ಜಿಗಿದ ನ್ಯೂಜಿಲೆಂಡ್‌ನ ಹಮಿಶ್ ಕೆರ್ ಚಿನ್ನ ಹಾಗೂ ಆಸ್ಟ್ರೇಲಿಯಾದ ಬ್ರೆಂಡನ್ ಸ್ಟಾರ್ಕ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಕಳೆದ ಜೂನ್‌ನಲ್ಲಿ ಯುಜೀನ್‌ನಲ್ಲಿ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ತೇಜಸ್ವಿನ್ ಶಂಕರ್ 2.27 ಮೀಟರ್ ಎತ್ತರಕ್ಕೆ ಜಿಗಿದ್ದರು. ಅದೇ ಪ್ರದರ್ಶನವನ್ನು ತೇಜಸ್ವಿನ್ ಬರ್ಮಿಂಗ್‌ಹ್ಯಾಮ್‌ನಲ್ಲಿ ಮರುಕಳಿಸಿದ್ದರೇ ಚಿನ್ನದ ಪದಕ ತೇಜಸ್ವಿನ್ ಶಂಕರ್ ಪಾಲಾಗುತ್ತಿತ್ತು.
ಹೊಸ ದಾಖಲೆ ಬರೆದ ತೇಜಸ್ವಿನ್ ಶಂಕರ್: ರಾಷ್ಟ್ರೀಯ ದಾಖಲೆ ಹೊಂದಿರುವ ತೇಜಸ್ವಿನ್ ಶಂಕರ್, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಕಾಮನ್‌ವೆಲ್ತ್ ಕೂಟದಲ್ಲಿ ಹೈಜಂಪ್ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.
ತೇಜಸ್ವಿನ್ ಶಂಕರ್ ಹೈಜಂಪ್ ಫೈನಲ್‌ನ ಮೊದಲ ಪ್ರಯತ್ನದಲ್ಲೇ 2.22 ಮೀಟರ್ ಎತ್ತರ ಜಿಗಿಯುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಎರಡು ಬಾರಿ 2.25 ಮೀಟರ್ ಎತ್ತರ ಜಿಗಿಯುವಲ್ಲಿ ತೇಜಸ್ವಿನ್ ವಿಫಲರಾದರು. ತೇಜಸ್ವಿನ್ ವೃತ್ತಿಜೀವನದಲ್ಲಿ 2.29 ಮೀಟರ್ ಎತ್ತರ ಜಿಗಿದು ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ.
Commonwealth Games 2022 ಸ್ಕ್ವಾಶ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದ ಸೌರವ್ ಘೋಷಾಲ್!
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಬಳಿಕ ಮಾತನಾಡಿದ ತೇಜಸ್ವಿನ್ ಶಂಕರ್, ನಾನು ಪದಕ ಗೆಲ್ಲುವ ಮೂಲಕ ಅಥ್ಲೆಟಿಕ್ಸ್ ವಿಭಾಗದಲ್ಲಿ ಪದಕದ ಖಾತೆ ತೆರೆದಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ನನ್ನ ಮೇಲೆ ವಿಶ್ವಾಸವಿಟ್ಟು ಹಾಗೂ ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ನನಗನಿಸಿದಂತೆ ಕಾಮನ್‌ವೆಲ್ತ್ ಗೇಮ್ಸ್‌ನ ಹೈಜಂಪ್ ವಿಭಾಗದಲ್ಲಿ ಭಾರತ ಗೆದ್ದ ಮೊದಲ ಪದ ಇದು ಎನಿಸುತ್ತಿದೆ ಎಂದು ತೇಜಸ್ವಿನ್ ಶಂಕರ್ ಹೇಳಿದ್ದಾರೆ.
ವೇಟ್‌ಲಿಫ್ಟಿಂಗ್: 6ನೇ ಸ್ಥಾನ ಪಡೆದ ಕರ್ನಾಟಕದ ಉಷಾ
ಮಹಿಳಾ ವೇಟ್‌ಲಿಫ್ಟಿಂಗ್‌ನ ಸ್ನ್ಯಾಚ್‌ನಲ್ಲಿ ಒಂದು, ಕ್ಲೀನ್ ಅಂಡ್ ಜರ್ಕ್ನಲ್ಲಿ ಎರಡು ವಿಫಲ ಯತ್ನಗಳ ಪರಿಣಾಮ ಮಹಿಳೆಯರ 87 ಕೆ.ಜಿ. ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಕರ್ನಾಟಕದ ಉಷಾ ಬನ್ನೂರು 6ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಸ್ನ್ಯಾಚ್‌ನಲ್ಲಿ 95 ಕೆ.ಜಿ. ತೂಕ ಎತ್ತಿದ ಉಷಾ, ಕ್ಲೀನ್ ಅಂಡ್ ಜರ್ಕ್ನಲ್ಲಿ 110 ಕೆ.ಜಿ. ಎತ್ತಿ ಒಟ್ಟು 205 ಕೆ.ಜಿ. ತೂಕದೊಂದಿಗೆ ಸ್ಪರ್ಧೆ ಮುಕ್ತಾಯಗೊಳಿಸಿದರು. ಆಸ್ಪ್ರೇಲಿಯಾದ ಎಲೀನ್ ಚಿಕಮ್ಯಾಟನ್ 255 ಕೆ.ಜಿ.(110 ಕೆ.ಜಿ.+145 ಕೆ.ಜಿ.) ಕೂಟ ದಾಖಲೆಯೊಂದಿಗೆ ಚಿನ್ನ ಜಯಿಸಿದರು.