Asianet Suvarna News Asianet Suvarna News

Commonwealth Games: ಲಾನ್ ಬಾಲ್ಸ್‌ ಫೈನಲ್ ಪ್ರವೇಶಿಸಿ ಚರಿತ್ರೆ ಸೃಷ್ಟಿಸಿದ ಭಾರತ ಮಹಿಳಾ ತಂಡ..!

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಇತಿಹಾಸ ಬರೆದ ಭಾರತೀಯ ಮಹಿಳಾ ಲಾನ್ ಬಾಲ್ಸ್ ತಂಡ
ಸೆಮೀಸ್‌ನಲ್ಲಿ ನ್ಯೂಜಿಲೆಂಡ್ ಎದುರು ಭರ್ಜರಿ ಗೆಲುವು ಸಾಧಿಸಿದ ಭಾರತೀಯ ವನಿತೆಯರು
ಚಿನ್ನದ ಪದಕಕ್ಕಾಗಿ ದಕ್ಷಿಣ ಆಫ್ರಿಕಾ ಎದುರು ಸೆಣಸಾಡಲಿರುವ ಭಾರತ

Commonwealth Games 2022 India womens Lawn Bowls team assured of historic Lawn Bowls medal kvn
Author
Bengaluru, First Published Aug 1, 2022, 5:07 PM IST

ಬರ್ಮಿಂಗ್‌ಹ್ಯಾಮ್‌(ಆ.01): ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಲಾನ್‌ ಬಾಲ್ಸ್‌ ತಂಡವು ಮೊದಲ ಬಾರಿಗೆ ಫೈನಲ್ ಪ್ರವೇಶಿಸುವ ಮೂಲಕ ಚಾರಿತ್ರಿಕ ಸಾಧನೆ ಮಾಡಿದೆ. ನ್ಯೂಜಿಲೆಂಡ್ ತಂಡವನ್ನು ರೋಚಕವಾಗಿ ಮಣಿಸುವ ಮೂಲಕ ಭಾರತ ಮಹಿಳಾ ಲಾನ್ ಬಾಲ್ಸ್ ತಂಡವು ಪದಕ ಸುತ್ತು ಪ್ರವೇಶಿಸಿದ್ದು ಚಿನ್ನ ಗೆಲ್ಲುವ ಹೊಸ್ತಿಲಲ್ಲಿದೆ. ವೇಟ್‌ಲಿಫ್ಟಿಂಗ್‌ ಬಳಿಕ ಭಾರತ ಇದೀಗ ತಂಡ ವಿಭಾಗದಲ್ಲಿ ಮತ್ತೊಂದು ಪದಕ ಖಚಿತಪಡಿಸಿಕೊಂಡಿದೆ.

ಇಲ್ಲಿನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಲಾನ್ ಬಾಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಲೌಲಿ ಚೌಬೆ, ಪಿಂಕಿ, ನಯನ್‌ಮೊನಿ ಸೈಕಿಯಾ ಹಾಗೂ ರೂಪಾ ರಾಣಿ ತಿರ್ಕೆ ಅವರನ್ನೊಳಗೊಂಡ ತಂಡವು ಆರಂಭದಲ್ಲಿ 1-6 ಅಂತರದ ಹಿನ್ನೆಡೆಯನ್ನು ಅನುಭವಿಸಿತ್ತು. ಆದರೆ ಆ ಬಳಿಕ ಭರ್ಜರಿ ಪ್ರದರ್ಶನ ತೋರುವ ಮೂಲಕ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಲೌಲಿ ಚೌಬೆ, ಪಿಂಕಿ, ನಯನ್‌ಮೊನಿ ಸೈಕಿಯಾ ಹಾಗೂ ರೂಪಾ ರಾಣಿ ತಿರ್ಕೆ ಅವರನ್ನೊಳಗೊಂಡ ತಂಡವು ವಿಶ್ವದ 2ನೇ ಶ್ರೇಯಾಂಕಿತ ಲಾನ್ ಬಾಲ್ಸ್ ತಂಡವೆನಿಸಿಕೊಂಡಿರುವ ನ್ಯೂಜಿಲೆಂಡ್ ಎದುರು ಗೆಲುವಿನ ಕೇಕೆ ಹಾಕುವಲ್ಲಿ ಯಶಸ್ವಿಯಾಗಿದೆ.

ಲಾನ್‌ ಬಾಲ್ಸ್ ಫೈನಲ್‌ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾದ ಸವಾಲನ್ನು ಸ್ವೀಕರಿಸಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಭಾರತ ಮಹಿಳಾ ಲಾನ್ ಬಾಲ್ಸ್ ತಂಡವು ಚಿನ್ನದ ಪದಕಕ್ಕೆ ಕೊಡಳೊಡ್ಡಲಿದೆ. 

ಕೇವಲ ಒಂದು ಕೆಜಿ ಅಂತರದಲ್ಲಿ ಪದಕ ತಪ್ಪಿಸಿಕೊಂಡ ಅಜಯ್ ಸಿಂಗ್

ಪುರುಷರ 81 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಅಜಯ್ ಸಿಂಗ್ ಕೇವಲ 1 ಕೆಜಿ ಅಂತರದಲ್ಲಿ ಪದಕ ಗೆಲ್ಲುವ ಅವಕಾಶವನ್ನು ಕೈ ಚೆಲ್ಲಿದರು. ಸ್ನ್ಯಾಚ್‌ ವಿಭಾಗದ ಸ್ಪರ್ಧೆ ಮುಕ್ತಾಯದ ವೇಳೆಗೆ ಅಜಯ್ ಸಿಂಗ್, ಆಸ್ಟ್ರೇಲಿಯಾದ ಕೈಲ್ ಬ್ರೂಸ್‌ ಜತೆ ಜಂಟಿ ಎರಡನೇ ಸ್ಥಾನ ಹಂಚಿಕೊಂಡಿದ್ದರು. ಸ್ನ್ಯಾಚ್ ವಿಭಾಗದಲ್ಲಿ ಅಜಯ್‌ ಸಿಂಗ್ 143 ಕೆಜಿ ಭಾರ ಎತ್ತಿದ್ದರು. ಆದರೆ ಕ್ಲೀನ್ ಅಂಡ್ ಜರ್ಕ್‌ ನಲ್ಲಿ 176 ಕೆಜಿ ಭಾರ ಎತ್ತಲಷ್ಟೇ ಶಕ್ತರಾದರು. ಮೂರನೇ ಪ್ರಯತ್ನದಲ್ಲಿ ಅಜಯ್ ಸಿಂಗ್ 180 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತಿದ್ದರೇ ಕಂಚಿನ ಪದಕಕ್ಕೆ ಕೊರಳೊಡ್ಡುವ ಅವಕಾಶವಿತ್ತು. ಆದರೆ ಮೂರನೇ ಪ್ರಯತ್ನದಲ್ಲಿ ವಿಫಲವಾಗುವ ಮೂಲಕ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. 

Commonwealth Games 2022: ಚಿನ್ನ ಗೆದ್ದ ಅಚಿಂತಾ ಶೆಯುಲಿಗೆ ಜೈ ಹೋ ಎಂದು ಭಾರತೀಯ ಸೇನೆ..!

ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ ಭಾರತೀಯ ವೇಟ್‌ಲಿಫ್ಟರ್‌ಗಳು ಮೂರನೇ ದಿನದಂತ್ಯಕ್ಕೆ ಒಟ್ಟು 6 ಪದಕಗಳು ಜಯಿಸಿದ್ದಾರೆ ಮೊದಲಿಗೆ ಪುರುಷರ 55 kg ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಸಂಕೇತ್ ಸರ್ಗರ್ ಬೆಳ್ಳಿ ಪದಕ ಜಯಿಸುವ ದೇಶಕ್ಕೆ ಪದಕದ ಖಾತೆ ತೆರೆದರು. ಇದಾದ ಬಳಿಕ ಕನ್ನಡಿಗ ಗುರುರಾಜ ಪೂಜಾರಿ ಪುರುಷರ 61 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದರು. ಇನ್ನು ಒಲಿಂಪಿಕ್ಸ್‌ ಪದಕ ವಿಜೇತೆ ಮೀರಾಬಾಯಿ ಚಾನು 201 kg ಭಾರ ಎತ್ತುವ ಮೂಲಕ ಚಿನ್ನದ ಪದಕ ಜಯಿಸಿದರು. ಇನ್ನು ಭಾನುವಾರ ಜೆರಮಿ ಲಾಲ್ರಿನುಂಗ ಹಾಗೂ ಅಚಿಂತಾ ಶೆಯುಲಿ ಚಿನ್ನದ ಪದಕ ಜಯಿಸಿದರೇ ಬಿಂದ್ಯಾರಾಣಿ ಬೆಳ್ಳಿ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.

Follow Us:
Download App:
  • android
  • ios