Commonwealth Games 2022: ಚಿನ್ನ ಗೆದ್ದ ಅಚಿಂತಾ ಶೆಯುಲಿಗೆ ಜೈ ಹೋ ಎಂದು ಭಾರತೀಯ ಸೇನೆ..!
* ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಮುಂದುವರೆದ ಭಾರತೀಯ ವೇಟ್‌ಲಿಫ್ಟರ್‌ಗಳ ಪ್ರಾಬಲ್ಯ
* 313 kg ಭಾರ ಎತ್ತಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ ವೇಟ್‌ಲಿಫ್ಟರ್ ಅಚಿಂತಾ ಶೆಯುಲಿ
* ವೇಟ್‌ಲಿಫ್ಟರ್ ಅಚಿಂತಾ ಶೆಯುಲಿ ಸಾಧನೆಗೆ ಅಭಿನಂದನೆ ಸಲ್ಲಿಸಿದ ಭಾರತೀಯ ಸೇನೆ
ಬರ್ಮಿಂಗ್‌ಹ್ಯಾಮ್(ಆ.01): ಭಾರತೀಯ ವೇಟ್‌ಲಿಫ್ಟರ್ ಅಚಿಂತಾ ಶೆಯುಲಿ ದೇಶಕ್ಕೆ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೂರನೇ ಚಿನ್ನ ಹಾಗೂ ಒಟ್ಟಾರೆ 6ನೇ ಪದಕ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಯುವ ವೇಟ್‌ಲಿಫ್ಟರ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿವೆ. ಪುರುಷರ 73 kg ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ದಾಖಲೆಯ ಭಾರ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದರ ಬೆನ್ನಲ್ಲೇ ಭಾರತೀಯ ಸೇನೆ, ಅಚಿಂತಾ ಶೆಯುಲಿ ಅವರಿಗೆ ಅಭಿನಂದನೆ ಸಲ್ಲಿಸಿದೆ.
ಭಾರತೀಯ ಸೇನೆಯಲ್ಲಿ ಹವಿಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿರುವ 20 ವರ್ಷದ ಅಚಿಂತಾ ಶೆಯುಲಿ, ಚೊಚ್ಚಲ ಬಾರಿಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪಾಲ್ಗೊಂಡು ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಪುರುಷರ 73 kg ವಿಭಾಗದ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಅಚಿಂತಾ ಶೆಯುಲಿ ಬರೋಬ್ಬರಿ 313 kg ಭಾರ ಎತ್ತಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಇನ್ನು ಇದೇ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ ಮಲೇಷ್ಯಾದ ಎರ್ರಿ ಹಿದಾಯತ್ ಮೊಹಮ್ಮದ್ ಅವರಿಗಿಂತ 10 kg ಹೆಚ್ಚಿಗೆ ಭಾರ ಎತ್ತುವಲ್ಲಿ ಅಚಿಂತಾ ಶೆಯುಲಿ ಯಶಸ್ವಿಯಾದರು.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ, ದಾಖಲೆ ಬರೆದ ಅಚಿಂತಾ ಶೆಯುಲಿ!
ಅಚಿಂತಾ ಶೆಯುಲಿ ವೇಟ್‌ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಗೆಲ್ಲುತ್ತಿದ್ದಂತೆಯೇ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿದ ಭಾರತೀಯ ಸೇನೆ ಅಭಿನಂದನೆ ಸಲ್ಲಿಸಿದೆ. ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದ 73 ಕೆಜಿ ವಿಭಾಗದ ಪುರುಷರ ವೇಟ್‌ಲಿಫ್ಟಿಂಗ್‌ನಲ್ಲಿ ದಾಖಲೆಯ 313 ಕೆಜಿ ಭಾರ ಎತ್ತಿದ ಹವಿಲ್ದಾರ್ ಅಚಿಂತಾ ಶೆಯುಲಿ ಅವರಿಗೆ ಭಾರತೀಯ ಸೇನೆಯಿಂದ ಅಭಿನಂದನೆಗಳು ಟ್ವೀಟ್ ಮಾಡಿದೆ.
ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತೀಯ ವೇಟ್‌ಲಿಫ್ಟರ್‌ಗಳ ಪ್ರಾಬಲ್ಯ ಮುದುವರೆದಿದ್ದು, ಮೂರನೇ ದಿನದಂತ್ಯಕ್ಕೆ ಭಾರತ ಜಯಿಸಿದ ಒಟ್ಟು 6 ಪದಕಗಳು ವೇಟ್‌ಲಿಫ್ಟಿಂಗ್ ಸ್ಪರ್ಧೆಯಿಂದಲೇ ಬಂದಿವೆ. ಮೊದಲಿಗೆ ಪುರುಷರ 55 kg ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಸಂಕೇತ್ ಸರ್ಗರ್ ಬೆಳ್ಳಿ ಪದಕ ಜಯಿಸುವ ದೇಶಕ್ಕೆ ಪದಕದ ಖಾತೆ ತೆರೆದರು. ಇದಾದ ಬಳಿಕ ಕನ್ನಡಿಗ ಗುರುರಾಜ ಪೂಜಾರಿ ಪುರುಷರ 61 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದರು. ಇನ್ನು ಒಲಿಂಪಿಕ್ಸ್ ಪದಕ ವಿಜೇತೆ ಮೀರಾಬಾಯಿ ಚಾನು 201 kg ಭಾರ ಎತ್ತುವ ಮೂಲಕ ಚಿನ್ನದ ಪದಕ ಜಯಿಸಿದರು. ಇನ್ನು ಭಾನುವಾರ ಜೆರಮಿ ಲಾಲ್ರಿನುಂಗ ಹಾಗೂ ಅಚಿಂತಾ ಶೆಯುಲಿ ಚಿನ್ನದ ಪದಕ ಜಯಿಸಿದರೇ ಬಿಂದ್ಯಾರಾಣಿ ಬೆಳ್ಳಿ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.