ಇನ್ನೂ ಮುಗಿದಿಲ್ಲ ಅಂತಾರಾಷ್ಟ್ರೀಯ ಕರಿಯರ್ , ಪ್ರತಿಕ್ರಿಯೆ ನೀಡಿದ ಗೇಲ್!
ಸ್ಫೋಟಕ ಬ್ಯಾಟಿಂಗ್, ಬೌಂಡರಿ, ಸಿಕ್ಸರ್ ಸುರಿಮಳೆ ಮೂಲಕ ಅಭಿಮಾನಿಗಳನ್ನು ರಂಜಿಸಿದ ಕ್ರಿಸ್ ಗೇಲ್ 301ನೇ ಏಕದಿನ ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಅಂತ್ಯವಾಗಿದೆ ಅನ್ನೋ ಮಾತುಗಳು ಕೇಳಿ ಬಂದಿದೆ. ಆದರೆ ಇದಕ್ಕೆ ಗೇಲ್ ಪ್ರತಿಕ್ರಿಯೆ ನೀಡಿದ್ದಾರೆ.
ಪೋರ್ಟ್ ಆಫ್ ಸ್ಪೇನ್(ಆ.15): ‘ಯೂನಿವರ್ಸ್ ಬಾಸ್’ ಕ್ರಿಸ್ ಗೇಲ್ ಬಹುತೇಕ ತಮ್ಮ ಕೊನೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನಾಡಿದ್ದಾರೆ. ಭಾರತ ವಿರುದ್ಧ ಬುಧವಾರ ಇಲ್ಲಿ ನಡೆದ 3ನೇ ಹಾಗೂ ಅಂತಿಮ ಏಕದಿನ ಪಂದ್ಯ, ಗೇಲ್‌ರ ಕೊನೆ ಪಂದ್ಯವಾಗಿ ಕಂಡು ಬಂತು. ತಮ್ಮ ವೃತ್ತಿಬದುಕನುದ್ದಕ್ಕೂ ಹೇಗೆ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರೂ, ಅದೇ ರೀತಿ ಗೇಲ್ ತಮ್ಮ ಅಂತಿಮ ಪಂದ್ಯ ಎನ್ನಲಾದ ಪಂದ್ಯದಲ್ಲೂ ಸ್ಫೋಟಿಸಿದರು. ಪಂದ್ಯದ ಬಳಿಕ ಗೇಲ್, ತಾನು ನಿವೃತ್ತಿ ಘೋಷಿಸಿಲ್ಲ, ಸದ್ಯ ವಿಂಡೀಸ್ ಕ್ರಿಕೆಟ್ ಜೊತೆ ಮುಂದುವರಿಯಲಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಐತಿಹಾಸಿಕ ಪಂದ್ಯದಲ್ಲಿ ಲಾರಾ ರೆಕಾರ್ಡ್ ಬ್ರೇಕ್ ಮಾಡಿದ ಗೇಲ್!
3ನೇ ಏಕದಿನ ಪಂದ್ಯದಲ್ಲಿ ಕೇವಲ 41 ಎಸೆತಗಳಲ್ಲಿ 8 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ 72 ರನ್ ಸಿಡಿಸಿದರು. ಶತಕ ಬಾರಿಸುವ ಹುಮ್ಮಸ್ಸಿನಲ್ಲಿದ್ದ ಗೇಲ್‌ಗೆ ಖಲೀಲ್ ಅಹ್ಮದ್ ಪೆವಿಲಿಯನ್ ದಾರಿ ತೋರಿಸಿದರು. ಅವರ ಆಪ್ತ ಸ್ನೇಹಿತ ವಿರಾಟ್ ಕೊಹ್ಲಿಯೇ ಕ್ಯಾಚ್ ಹಿಡಿದಿದ್ದು ವಿಶೇಷ.
ಇದನ್ನೂ ಓದಿ: ಗೇಲ್ ಜತೆ ಭರ್ಜರಿ ಡ್ಯಾನ್ಸ್ ಮಾಡಿದ ಕೊಹ್ಲಿ..! ವಿಡಿಯೋ ವೈರಲ್!
ಗೇಲ್ ಪೆವಿಲಿಯನ್‌ಗೆ ವಾಪಸಾಗುವಾಗ ಭಾರತೀಯ ಆಟಗಾರರನ್ನು ಅವರನ್ನು ಅಭಿನಂದಿಸಿದರು. ಕೊಹ್ಲಿ ಹಾಗೂ ಗೇಲ್ ಐಪಿಎಲ್ ಶೈಲಿಯಲ್ಲಿ ಸಂಭ್ರಮಿಸಿದ್ದು ಎಲ್ಲರ ಗಮನ ಸೆಳೆಯಿತು. ಡ್ರೆಸ್ಸಿಂಗ್ ಕೊಠಡಿಯಲ್ಲಿದ್ದ ವಿಂಡೀಸ್ ಆಟಗಾರರು ಎದ್ದು ನಿಂತು ಚಪ್ಪಾಳೆ ಹೊಡೆಯುತ್ತಾ ಗೇಲ್‌ಗೆ ಗೌರವ ನೀಡಿದರು.
ಭರ್ಜರಿ ಆರಂಭ: ಟೆಸ್ಟ್ ಸರಣಿಗೆ ವಿಂಡೀಸ್ ತಂಡ ಪ್ರಕಟ: ಗೇಲ್ ಕನಸು ಭಗ್ನ..!
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವಿಂಡೀಸ್ ಮೊದಲ 4 ಓವರಲ್ಲಿಕ ಕೇವಲ 13 ರನ್ ಗಳಿಸಿತ್ತು. ಆದರೆ ಗೇಲ್ ಹಾಗೂ ಎವಿನ್ ಲೆವಿಸ್ 5ನೇ ಓವರ್‌ನಿಂದ ಸಿಡಿಲಬ್ಬರದ ಬ್ಯಾಟಿಂಗ್‌ಗಿಳಿದರು. 10 ಓವರ್ ಮುಕ್ತಾಯದ ವೇಳೆ ವಿಂಡೀಸ್ ವಿಕೆಟ್ ನಷ್ಟವಿಲ್ಲದೆ 114 ರನ್ ಪೇರಿಸಿತು. ಕೇವಲ 33 ಎಸೆತಗಳಲ್ಲಿ ವಿಂಡೀಸ್ 100 ರನ್ ಗಳಿಸಿದ್ದು ಭಾರತೀಯರಲ್ಲಿ ನಡುಕ ಹುಟ್ಟಿಸಿತು. ಲೆವಿಸ್ (43) ಹಾಗೂ ಗೇಲ್ ಔಟಾದ ಬಳಿಕ ವಿಂಡೀಸ್ ರನ್ ಗಳಿಕೆ ವೇಗ ಕಳೆದುಕೊಂಡಿತು. 22 ಓವರ್ ಮುಕ್ತಾಯಕ್ಕೆ 2 ವಿಕೆಟ್‌ಗೆ 158 ರನ್ ಗಳಿಸಿದ್ದಾಗ ಮಳೆ ಆರಂಭವಾದ ಕಾರಣ ಪಂದ್ಯ ಒಂದು ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡಿತು.
301 ಸಂಖ್ಯೆಯುಳ್ಳ ಜೆರ್ಸಿ ತೊಟ್ಟು ಆಡಿದ ಗೇಲ್!
ಕ್ರಿಸ್ ಗೇಲ್‌ಗಿದು 301ನೇ ಏಕದಿನ ಪಂದ್ಯ. ಸಾಮಾನ್ಯವಾಗಿ ಅವರು 333 ಸಂಖ್ಯೆ ಇರುವ ಜೆರ್ಸಿ ತೊಟ್ಟು ಆಡುತ್ತಿದ್ದರು. ಆದರೆ ಬುಧವಾರ ಅವರ ಜೆರ್ಸಿ ಮೇಲೆ 301 ಸಂಖ್ಯೆ ಇದ್ದಿದ್ದು, ಇದು ಅವರ ಕೊನೆ ಪಂದ್ಯವಾಗಿರಬಹುದು ಎನ್ನುವ ಸುಳಿವು ನೀಡಿತು. ಪಂದ್ಯದ ಬಳಿಕ ಮಾತನಾಡಿದ ಗೇಲ್, ನಿವೃತ್ತಿ ಹೇಳಿಲ್ಲ, ಮುಂದಿನ ನಿರ್ಧಾರ ಕೈಗೊಂಡಿಲ್ಲ ಎಂದು ಗೇಲ್ ಸ್ಪಷ್ಟಪಡಿಸಿದರು.