ಇಂದು ನಡೆಯಲಿರುವ ಕ್ವಾರ್ಟರ್ ಫೈನಲ್‌'ನಲ್ಲಿ ಭಾರತೀಯ ಆಟಗಾರ್ತಿ ಚೀನಾದ ಫಾಂಗ್ಜಿ ಗೌ ಎದುರು ಸೆಣಸಲಿದ್ದಾರೆ.

ಫುಜೌ(ನ.17): ಹಾಲಿ ಚಾಂಪಿಯನ್ ಭಾರತದ ಪಿ.ವಿ. ಸಿಂಧು, ಚೀನಾ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ಕ್ವಾರ್ಟರ್‌'ಫೈನಲ್ ಪ್ರವೇಶಿಸಿದ್ದಾರೆ. ಆದರೆ ನೂತನ ರಾಷ್ಟ್ರೀಯ ಚಾಂಪಿಯನ್‌'ಗಳಾದ ಸೈನಾ ನೆಹ್ವಾಲ್ ಮತ್ತು ಎಚ್.ಎಸ್. ಪ್ರಣಯ್, ಪ್ರೀ ಕ್ವಾರ್ಟರ್'ನಲ್ಲಿ ಸೋಲುಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದರೊಂದಿಗೆ ಸಿಂಧು, ಪಂದ್ಯಾವಳಿಯಲ್ಲಿ ಉಳಿದಿರುವ ಭಾರತದ ಏಕೈಕ ಸ್ಪರ್ಧಿ ಎನಿಸಿಕೊಂಡಿದ್ದಾರೆ.

ಪ್ರೀ ಕ್ವಾರ್ಟರ್‌'ಫೈನಲ್‌'ನಲ್ಲಿ ವಿಶ್ವ ನಂ.2 ಸಿಂಧು 21-15, 21-13 ಗೇಮ್‌'ಗಳಿಂದ ಚೀನಾದ ಹನ್ ಯೂ ಎದುರು ಸುಲಭ ಜಯ ಸಾಧಿಸಿದರು. ಇಂದು ನಡೆಯಲಿರುವ ಕ್ವಾರ್ಟರ್ ಫೈನಲ್‌'ನಲ್ಲಿ ಭಾರತೀಯ ಆಟಗಾರ್ತಿ ಚೀನಾದ ಫಾಂಗ್ಜಿ ಗೌ ಎದುರು ಸೆಣಸಲಿದ್ದಾರೆ.

ಸೈನಾಗೆ ಶಾಕ್: 2014ರ ಚೀನಾ ಓಪನ್ ಚಾಂಪಿಯನ್ ಸೈನಾ, ಇಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ವಿಶ್ವ ಶ್ರೇಯಾಂಕದಲ್ಲಿ ಅಗ್ರ 8ರೊಳಗೆ ಸ್ಥಾನ ಗಿಟ್ಟಿಸಿ ಮುಂದಿನ ತಿಂಗಳು ನಡೆಯಲಿರುವ ಸೂಪರ್ ಸೀರೀಸ್ ಫೈನಲ್ಸ್‌'ಗೆ ಅರ್ಹತೆ ಪಡೆಯಲು ಎದುರು ನೋಡುತ್ತಿದ್ದರು. ಮೊದಲ ಸುತ್ತಿನಲ್ಲಿ ಸುಲಭ ಜಯ ಪಡೆದಿದ್ದ ಸೈನಾಗೆ ಪ್ರೀ ಕ್ವಾರ್ಟರ್'ನಲ್ಲಿ ಜಪಾನ್‌'ನ ಅಕಾನೆ ಯಮಗೂಚಿ ವಿರುದ್ಧ

18-21,11-21ರಲ್ಲಿ ಪರಭಾವಗೊಂಡರು. ಜಪಾನ್ ಆಟಗಾರ್ತಿ ವಿರುದ್ಧ ಸೈನಾಗಿದು ಸತತ 4ನೇ ಸೋಲಾಗಿದ್ದು, ಕಳೆದೊಂದು ತಿಂಗಳಲ್ಲೇ 3 ಬಾರಿ ಸೋತಿದ್ದಾರೆ.

ಸೋತರೂ ಅಗ್ರ 10ಕ್ಕೆ ಪ್ರಣಯ್: ಪ್ರೀ ಕ್ವಾರ್ಟರ್‌'ನಲ್ಲಿ ಎಚ್.ಎಸ್.ಪ್ರಣಯ್ 19-21, 17-21 ಗೇಮ್‌'ಗಳಲ್ಲಿ ವಿಶ್ವ ನಂ.53ನೇ ಶ್ರೇಯಾಂಕಿತ ಹಾಂಕಾಂಗ್‌'ನ ಚೀಕ್ ಯು ಲೀ ವಿರುದ್ಧ ಸೋಲುಂಡರು. ಆದರೂ, ನೂತನವಾಗಿ ಪ್ರಕಟಗೊಂಡಿರುವ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಪ್ರಣಯ್ ಒಂದು ಸ್ಥಾನ ಏರಿಕೆ ಕಂಡಿದ್ದಾರೆ. ಸದ್ಯ 10ನೇ ಸ್ಥಾನದಲ್ಲಿರುವ ಅವರು, ವೃತ್ತಿಬದುಕಿನಲ್ಲಿ ಇದೇ ಮೊದಲ ಬಾರಿಗೆ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ.