ಇಡೀ ದಿನ ನೆಲಕಚ್ಚಿ ಆಡಿದ ಪೂಜಾರ ವೈಯುಕ್ತಿಕ ವೃತ್ತಿಜೀವನದಲ್ಲಿ 11ನೇ ಶತಕ ಬಾರಿಸುವುದರ ಜೊತೆಗೆ ಸಂಕಷ್ಟದಲ್ಲಿದ್ದ ತಂಡವನ್ನು ಮೇಲೆತ್ತಲು ನೆರವಾದರು.

ರಾಂಚಿ(ಮಾ.18): ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಸಿಡಿಸಿದ ಭರ್ಜರಿ ಶತಕದ ನೆರವಿನಿಂದ ಟೀಂ ಇಂಡಿಯಾ ಆಸೀಸ್'ಗೆ ದಿಟ್ಟ ಪ್ರತಿರೋಧವನ್ನೇ ನೀಡಿದೆ.

ರಾಂಚಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್'ನ ಮೂರನೇ ದಿನದಾಟದ ಮುಕ್ತಾಯಕ್ಕೆ ಟೀಂ ಇಂಡಿಯಾ ಆರು ವಿಕೆಟ್ ನಷ್ಟಕ್ಕೆ 360 ರನ್ ಕಲೆಹಾಕಿದ್ದು, ಇನ್ನೂ 91 ರನ್ ಹಿನ್ನೆಡೆಯಲ್ಲಿದೆ. ಇನ್ನು ಇಡೀ ದಿನ ನೆಲಕಚ್ಚಿ ಆಡಿದ ಪೂಜಾರ ವೈಯುಕ್ತಿಕ ವೃತ್ತಿಜೀವನದಲ್ಲಿ 11ನೇ ಶತಕ ಬಾರಿಸುವುದರ ಜೊತೆಗೆ ಸಂಕಷ್ಟದಲ್ಲಿದ್ದ ತಂಡವನ್ನು ಮೇಲೆತ್ತಲು ನೆರವಾದರು.

ಎರಡನೇ ದಿನ ಒಂದು ವಿಕೆಟ್ ನಷ್ಟಕ್ಕೆ 120 ರನ್ ಕಲೆಹಾಕಿದ್ದ ಟೀಂ ಇಂಡಿಯಾ ಮೂರನೇ ದಿನ ಎಚ್ಚರಿಕೆಯ ಆಟಕ್ಕೆ ಮೊರೆಹೋಯಿತು. ಪೂಜಾರ ಹಾಗೂ ವಿಜಯ್ ಜೋಡಿ ಎರಡನೇ ವಿಕೆಟ್'ಗೆ 100 ರನ್'ಗಳ ಜೊತೆಯಾಟವಾಡಿತು. ಇನ್ನು ಶತಕದತ್ತ ಮುನ್ನುಗ್ಗುತ್ತಿದ್ದ ಮುರುಳಿ ವಿಜಯ್ ಉಪಹಾರಕ್ಕೂ ಮುನ್ನ ದೊಡ್ಡ ಹೊಡೆತಕ್ಕೆ ಮುಂದಾಗಿ ಸ್ಟಂಪ್ ಔಟ್ ಆದರು. ನಂತರ ಆಡಲಿಳಿದ ಕೊಹ್ಲಿ ಕೇವಲ ಆರು ರನ್ ಗಳಿಸಿ ಪ್ಯಾಟ್ ಕಮಿನ್ಸ್'ಗೆ ವಿಕೆಟ್ ಒಪ್ಪಿಸಿದರು.

ಇದಾದ ನಂತರ ಅಜಿಂಕ್ಯಾ ರಹಾನೆ, ಕರುಣ್ ನಾಯರ್ ಮತ್ತು ರವಿಚಂದ್ರನ್ ಅಶ್ವಿನ್ ಕೂಡ ಬೇಗನೆ ಪೆವಿಲಿಯನ್ ಸೇರಿದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಎಚ್ಚರಿಕೆಯಿಂದ ಆಟವಾಡಿದ ಪೂಜಾರ 130 ಗಳಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇನ್ನು ವಿಕೆಟ್ ಕೀಪರ್ ವೃದ್ದಿಮಾನ್ ಸಾಹ 18 ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಇನ್ನು ಆಸ್ಟ್ರೇಲಿಯಾ ಪರ ಶಿಸ್ತುಬದ್ಧ ದಾಳಿನಡೆಸಿದ ಪ್ಯಾಟ್ ಕಮಿನ್ಸ್ ಇಂದು ಮೂರು ವಿಕೆಟ್ ಕಬಳಿಸಿದರೆ, ಸ್ಟೀವ್ ಓಕೆಫೆ ಮತ್ತು ಜೋಸ್ ಹ್ಯಾಜಲ್'ವುಡ್ ತಲಾ ಒಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ಆಸ್ಟ್ರೇಲಿಯಾ: 451/10

ಭಾರತ: 360/6

ಚೇತೇಶ್ವರ ಪೂಜಾರ: 130*

ಮುರುಳಿ ವಿಜಯ್: 82