ಗಂಗೂಲಿ ಮಾತ್ರವಲ್ಲ ದೀಪಕ್ ಚಹಾರ್‌ನ್ನೂ ಬಿಟ್ಟಿಲ್ಲ ಗ್ರೆಗ್ ಚಾಪೆಲ್

Chappell told Chahar that he would never become a cricketer, says Aakash Chopra
Highlights

ಟೀಂ ಇಂಡಿಯಾದ ಮಾಜಿ ಕೋಚ್ ಗ್ರೆಗ್ ಚಾಪೆಲ್ ಯಾರಿಗೆ ತಾನೇ ಗೊತ್ತಿಲ್ಲ. ಭಾರತೀಯ ಕ್ರಿಕೆಟಿಗರ ಪ್ರಾಣ ಹಿಂಡಿದ ಚಾಪೆಲ‌್‌ರನ್ನ ಕ್ರಿಕೆಟಿಗರು ಮಾತ್ರವಲ್ಲ ಅಭಿಮಾನಿಗಳು ಮರೆಯಲ್ಲ. ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್‌ಗೆ ಕಾಟ ಕೊಟ್ಟಿದ್ದ ಚಾಪೆಲ್, ಇದೀಗ ತಾನೆ ಟೀಂ ಇಂಡಿಯಾಗೆ ಆಯ್ಕೆಯಾದ ದೀಪಕ್ ಚಹಾರ್‌ಗೂ ದುಸ್ವಪ್ನವಾಗಿ ಕಾಡಿದ್ದಾರೆ ಅಂದರೆ ನಂಬ್ತೀರಾ? ಇಲ್ಲಿದೆ ರೋಚಕ ಕಹಾನಿ.

ಮುಂಬೈ(ಜು.02): ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಸ್ವಪ್ನವಾಗಿ ಕಾಡಿದ ಕೋಚ್ ಅಂದರೆ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಗ್ರೆಗ್ ಚಾಪೆಲ್. ಮಾಜಿ ನಾಯಕ ಸೌರವ್ ಗಂಗೂಲಿಯನ್ನ ತಂಡದಿಂದಲೇ ಹೊರಕಳುಹಿಸಿದ ಚಾಪೆಲ್, ಸಚಿನ್ ತೆಂಡೂಲ್ಕರ್ ಹಾಗೂ ಇತರ ಆಟಗಾರರಿಗೂ ಕಾಟ ಕೊಟ್ಟಿದ್ದಾರೆ. ಚಾಪೆಲ್ ತೆರೆ ಹಿಂದಿನ ಕತೆ ಇಲ್ಲಿಗೆ ಮುಗಿಯಲ್ಲ.

ಟೀಂ ಇಂಡಿಯಾ ಕೋಚ್ ಆಗಿ ಹಲವು ಭಾರತೀಯ ಕ್ರಿಕೆಟಿಗರ ಕರಿಯರ್ ಹಾಳು ಮಾಡಿದ ಚಾಪೆಲ್, ಯುವ ಕ್ರಿಕೆಟಿಗರಿಗೂ ಕಂಟಕವಾಗಿದ್ದರು. ಇಂಗ್ಲೆಂಡ್ ವಿರುದ್ಧದ ಸರಣಿಗೆ ಜಸ್‌ಪ್ರೀತ್ ಬುಮ್ರಾ ಬದಲು ತಂಡಕ್ಕೆ ಆಯ್ಕೆಯಾಗಿರೋ ಯುವ ಬೌಲರ್ ದೀಪಕ್ ಚಹಾರ್ ಕೂಡ ಚಾಪೆಲ್ ಕೆಂಗಣ್ಣಿಗೆ ಗುರಿಯಾಗಿದ್ದರು.

ರಾಜಸ್ಥಾನ ಕ್ರಿಕೆಟ್ ಅಕಾಡೆಮಿಯ ನಿರ್ದೇಶಕರಾಗಿದ್ದ ಗ್ರೆಗ್ ಚಾಪೆಲ್ ಯುವ ಬೌಲರ್ ದೀಪಕ್ ಚಹಾರ್ ಕರಿಯರ್‌ಗೆ ಕೊಳ್ಳಿ ಇಡಲು ಮುಂದಾಗಿದ್ದರು. ಹನುಮಾನಗರ್‌ನಲ್ಲಿ ಅಭ್ಯಾಸ ಮಾಡುತ್ತಿದ್ದ ಬಾಲಕ ದೀಪಕ್ ಚಹಾರ್ ನಿರ್ದೇಶಕ ಗ್ರೆಗ್ ಚಾಪೆಲ್ ಅವರನ್ನ ಭೇಟಿಯಾಗಿದ್ದರು. ಈ ವೇಳೆ ಚಾಪೆಲ್, ನೀನು ಯಾವತ್ತೂ ತಂಡಕ್ಕೆ ಆಯ್ಕೆಯಾಗೋದೇ ಇಲ್ಲ ಎಂದಿದ್ದರು ಎಂದು ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ಫೇಸ್‌ಬುಕ್ ಆಕಾಶ್‌ವಾಣಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. 

ಚಾಪೆಲ್ ಮಾತು ಇಷ್ಟಕ್ಕೆ ಮುಗಿಯಲ್ಲ, ಆಕಾಡೆಮಿ ಕ್ರಿಕೆಟ್‌ಗೆ ಆಯ್ಕೆ ಬಿಡು, ನೀನು ಕ್ರಿಕೆಟಿಗನೇ ಆಗಲ್ಲ ಎಂದಿದ್ದರು ಎಂದು ಚಾಪೆಲ್ ಹಾಗೂ ದೀಪಕ್ ಚಹಾರ್ ನಡುವಿನ ರಹಸ್ಯವನ್ನ ಚೋಪ್ರಾ ಬಿಚ್ಚಿಟ್ಟಿದ್ದಾರೆ. ಇದೀಗ ಚಹಾರ್ ಟೀಂ ಇಂಡಿಯಾಗೆ ಆಯ್ಕೆಯಾಗೋ ಮೂಲಕ ಗ್ರೆಗ್ ಚಾಪೆಲ್ ಮಾತನ್ನ ಸುಳ್ಳು ಮಾಡಿದ್ದಾರೆ  ಎಂದು ಚೋಪ್ರಾ ಹೇಳಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿ ಚಹಾರ್ 12 ವಿಕೆಟ್ ಕಬಳಿಸಿ ಗಮನಸೆಳೆದಿದ್ದರು. ಇತ್ತೀಚೆಗೆ ಇಂಗ್ಲೆಂಡ್ ಪ್ರವಾಸ ಕೈಗೊಂಡ ಭಾರತ ಎ ತಂಡದಲ್ಲೂ ಸ್ಥಾನ ಪಡೆದ ಚಹಾರ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. 
 

loader