US Open 2022 ಪ್ರಶಸ್ತಿಗಾಗಿ ಆಲ್ಕರಜ್ vs ರುಡ್ ಫೈನಲ್ ಫೈಟ್
* ಯುಎಸ್ ಓಪನ್ ಫೈನಲ್‌ಗೆ ಲಗ್ಗೆಯಿಟ್ಟ 19 ವರ್ಷದ ಸ್ಪೇನ್‌ನ ಕಾರ್ಲೊಸ್ ಆಲ್ಕರಜ್
* ಸೋಮವಾರ ಹೊಸ ಯುಎಸ್ ಓಪನ್ ಚಾಂಪಿಯನ್ ಉದಯ
* ಸ್ಪೇನ್‌ನ ಕಾರ್ಲೊಸ್ ಆಲ್ಕರಜ್ ಹಾಗೂ ನಾರ್ವೆಯ ಕ್ಯಾಸ್ಪರ್ ರುಡ್ ಫೈನಲ್ ಕಾದಾಟ
ನ್ಯೂಯಾರ್ಕ್(ಸೆ.11): ಟೆನಿಸ್ ಅಂಗಳದ ಯುವ ತಾರೆಗಳಿಬ್ಬರು ಈ ಬಾರಿ ಯುಎಸ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯ ಫೈನಲ್‌ಗೇರಿದ್ದು, ಸೋಮವಾರ ಹೊಸ ಚಾಂಪಿಯನ್ ಒಬ್ಬರ ಉದಯವಾಗಲಿದೆ. ಪುರುಷರ ಸಿಂಗಲ್ಸ್‌ನಲ್ಲಿ 19 ವರ್ಷದ ಸ್ಪೇನ್‌ನ ಕಾರ್ಲೊಸ್ ಆಲ್ಕರಜ್ ಹಾಗೂ ನಾರ್ವೆಯ ಕ್ಯಾಸ್ಪರ್ ರುಡ್ ಫೈನಲ್ ಪ್ರವೇಶಿಸಿದ್ದು, ಚೊಚ್ಚಲ ಪ್ರಶಸ್ತಿ ಗೆಲ್ಲುವ ತವಕದಲ್ಲಿದ್ದಾರೆ.
ಶನಿವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ವಿಶ್ವ ನಂ.7 ಕ್ಯಾಸ್ಪರ್ ರುಡ್ ರಷ್ಯಾದ ಕಾರೆನ್ ಖಚನೊವ್ ವಿರುದ್ಧ 7-6, 6-2, 5-7, 6-2 ಸೆಟ್‌ಗಳಿಂದ ಗೆಲುವು ಸಾಧಿಸಿ ಈ ವರ್ಷದ 2ನೇ ಗ್ರ್ಯಾನ್‌ಸ್ಲಾಂ ಫೈನಲ್‌ಗೆ ಲಗ್ಗೆ ಇಟ್ಟಿದ್ದರು. ಫ್ರೆಂಚ್ ಓಪನ್‌ನಲ್ಲೂ ಫೈನಲ್‌ಗೇರಿದ್ದ 23 ವರ್ಷದ ರುಡ್, 22 ಗ್ರ್ಯಾನ್‌ಸ್ಲಾಂ ಒಡೆಯ ರಾಫೆಲ್ ನಡಾಲ್ ವಿರುದ್ಧ ಸೋಲನುಭವಿಸಿದ್ದರು. 3 ಗಂಟೆಗಳ ಕಾಲ ನಡೆದ ಪಂದ್ಯದಲ್ಲಿ ರುಡ್‌ಗೆ ಖಚನೊವ್ ಪ್ರತಿರೋಧ ತೋರಲು ವಿಫಲರಾದರು. 4 ಗಂಟೆ 19 ನಿಮಿಷಗಳ ಕಾಲ ನಡೆದ ಮತ್ತೊಂದು ಸೆಮೀಸ್‌ನಲ್ಲಿ ಆಲ್ಕರಜ್ ಅಮೆರಿಕದ ಫ್ರಾನ್ಸೆಸ್ ಟಿಯಾಫೋ ವಿರುದ್ಧ 6-7, 6-3, 6-1, 6-7, 6-3 ಸೆಟ್‌ಗಳಿಂದ ಜಯಭೇರಿ ಭಾರಿಸಿ ಚೊಚ್ಚಲ ಗ್ರ್ಯಾನ್‌ಸ್ಲಾಂ ಫೈನಲ್‌ಗೇರಿದರು.
ಸ್ಯಾಂಪ್ರಸ್ ಬಳಿಕ ಫೈನಲ್ ತಲುಪಿದ ಮೊದಲ ಟೀನೇಜರ್
ಘಟಾನುಘಟಿ ಟೆನಿಸಿಗರನ್ನು ಸೋಲಿಸುತ್ತಾ ಬಂದಿರುವ 19 ವರ್ಷ 4 ತಿಂಗಳ ಆಲ್ಕರಜ್ ಚೊಚ್ಚಲ ಬಾರಿಗೆ ಗ್ರ್ಯಾನ್ ಸ್ಲಾಂ ಫೈನಲ್‌ಗೇರಿದ ಸಾಧನೆ ಮಾಡಿದ್ದಲ್ಲದೇ, ಪೀಟ್ ಸ್ಯಾಂಪ್ರಸ್ ಬಳಿಕ ಫೈನಲ್ ಪ್ರವೇಶಿಸಿದ ಅತಿ ಕಿರಿಯ ಆಟಗಾರ ಎನಿಸಿಕೊಂಡರು. 1990ರಲ್ಲಿ 19 ವರ್ಷ 1 ತಿಂಗಳ ಸ್ಯಾಂಪ್ರಸ್ ಯುಎಸ್ ಓಪನ್ ಫೈನಲ್‌ಗೇರಿ ಚಾಂಪಿಯನ್ ಎನಿಸಿಕೊಂಡಿದ್ದರು. ಆಲ್ಕರಜ್ ಪ್ರಶಸ್ತಿ ಗೆದ್ದರೆ 2ನೇ ಟೀನೇಜರ್ ಚಾಂಪಿಯನ್ ಆಗಲಿದ್ದಾರೆ.
US Open 2022: ವಿಶ್ವ ನಂ.1 ಇಗಾ ಸ್ವಿಯಾಟೆಕ್ ಫೈನಲ್‌ಗೆ ಲಗ್ಗೆ, ಪ್ರಶಸ್ತಿಗಾಗಿ ಒನ್ಸ್ ಜಬುರ್ ಜತೆ ಕಾದಾಟ
ಡೇವಿಡ್ ಕಪ್ ಟೆನಿಸ್‌ನಿಂದ ಗಾಯಾಳು ಬೋಪಣ್ಣ ಔಟ್
ನವದೆಹಲಿ: ಮುಂಬರುವ ನಾರ್ವೆ ವಿರುದ್ಧ ಡೇವಿಡ್ ಕಪ್ ಟೆನಿಸ್ ಪಂದ್ಯದಿಂದ ಭಾರತದ ತಾರಾ ಟೆನಿಸಿಗ ರೋಹಣ್ ಬೋಪಣ್ಣ ಹೊರಬಿದ್ದಿದ್ದಾರೆ. ಈ ಬಗ್ಗೆ ಸ್ವತಃ ಬೋಪಣ್ಣ ಮಾಹಿತಿ ನೀಡಿದ್ದು, ಮಂಡಿ ನೋವಿನಿಂದಾಗಿ ನಾರ್ವೆ ವಿರುದ್ಧದ ಪಂದ್ಯದಲ್ಲಿ ಆಡುತ್ತಿಲ್ಲ ಎಂದು ತಿಳಿಸಿದ್ದಾರೆ. ಭಾರತ ಸೆ.16 ಮತ್ತು 17ರಂದು ಪಂದ್ಯವಾಡಲಿದ್ದು, ತಂಡದಲ್ಲಿ ಸುಮಿತ್ ನಗಾಲ್, ರಾಮ್‌ಕುಮಾರ್ ರಾಮನಾಥನ್, ಪ್ರಜ್ಞೇಶ್ ಗುಣೇಶ್ವರಣ್, ಯೂಕಿ ಬ್ಹಾಂಬ್ರಿ ಹಾಗೂ ಮುಕುಂದ್ ಶಶಿಕುಮಾರ್ ಇದ್ದಾರೆ.