US Open 2022: ವಿಶ್ವ ನಂ.1 ಇಗಾ ಸ್ವಿಯಾಟೆಕ್ ಫೈನಲ್‌ಗೆ ಲಗ್ಗೆ, ಪ್ರಶಸ್ತಿಗಾಗಿ ಒನ್ಸ್ ಜಬುರ್ ಜತೆ ಕಾದಾಟ
ಯುಎಸ್ ಓಪನ್ ಮಹಿಳಾ ಸಿಂಗಲ್ಸ್‌ನಲ್ಲಿ ಫೈನಲ್‌ಗೇರಿದ ಇಗಾ ಸ್ವಿಯಾಟೆಕ್
ಸೆಮಿಫೈನಲ್‌ನಲ್ಲಿ ಬೆಲಾರುಸ್‌ನ ಆಯ್ರ್ನಾ ಸಬಲೆಂಕಾ ವಿರುದ್ದ ಭರ್ಜರಿ ಜಯ
ಯುಎಸ್ ಓಪನ್ ಪ್ರಶಸ್ತಿಗಾಗಿ ಒನ್ಸ್ ಜಬುರ್ ಜತೆ ಇಗಾ ಸ್ವಿಯಾಟೆಕ್ ಕಾದಾಟ
ನ್ಯೂಯಾರ್ಕ್(ಸೆ.09): ವಿಶ್ವ ನಂ.1 ಶ್ರೇಯಾಂಕಿತ ಆಟಗಾರ್ತಿ ಇಗಾ ಸ್ವಿಯಾಟೆಕ್, ಯುಎಸ್ ಓಪನ್ ಮಹಿಳಾ ಸಿಂಗಲ್ಸ್‌ನಲ್ಲಿ ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದಾರೆ. ಪೋಲೆಂಡ್‌ನ ಇಗಾ ಸ್ವಿಯಾಟೆಕ್, ಬೆಲಾರುಸ್‌ನ ಆಯ್ರ್ನಾ ಸಬಲೆಂಕಾ ವಿರುದ್ದ 3-6, 6-1, 6-4 ಸೆಟ್‌ಗಳ ಅಂತರದ ಗೆಲುವು ದಾಖಲಿಸುವ ಮೂಲಕ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಇದರೊಂದಿಗೆ ಇದೇ ಮೊದಲ ಬಾರಿಗೆ ಇಗಾ ಸ್ವಿಯಾಟೆಕ್ ಯುಎಸ್ ಓಪನ್ ಟೆನಿಸ್ ಗ್ರ್ಯಾನ್ ಸ್ಲಾಂನಲ್ಲಿ ಫೈನಲ್‌ಗೇರುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಸೆಪ್ಟೆಂಬರ್ 11ರಂದು ನಡೆಯಲಿರುವ ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಇಗಾ ಸ್ವಿಯಾಟೆಕ್ ಹಾಗೂ ಒನ್ಸ್ ಜಬುರ್ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ. ಈ ಇಬ್ಬರು ಆಟಗಾರ್ತಿಯರು ಇದೇ ಮೊದಲ ಬಾರಿಗೆ ಯುಎಸ್ ಓಪನ್ ಫೈನಲ್ ಪ್ರವೇಶಿಸಿದ್ದು, ಚಾಂಪಿಯನ್ ಪಟ್ಟಕ್ಕಾಗಿ ಭಾರೀ ಪೈಪೋಟಿ ನಡೆಸುವ ಸಾಧ್ಯತೆಯಿದೆ.
ಇಗಾ ಸ್ವಿಯಾಟೆಕ್ ಮೊದಲ ಸೆಟ್‌ನಲ್ಲಿ 3-6 ಅಂತರದ ಹಿನ್ನೆಡೆ ಅನುಭವಿಸಿದರು. ಆದರೆ ಇದಾದ ಬಳಿಕ ಲಯ ಕಂಡುಕೊಂಡ ಪೋಲೆಂಡ್ ಆಟಗಾರ್ತಿ, ಆಯ್ರ್ನಾ ಸಬಲೆಂಕಾ ಎದುರು ದಿಟ್ಟ ಪ್ರದರ್ಶನ ತೋರುವ ಮೂಲಕ ಎರಡು ಸೆಟ್‌ಗಳನ್ನು ಗೆದ್ದು, ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಸೆಟ್‌ನಲ್ಲಿ ಅನುಭವಿಸಿದ ಸೋಲಿನಿಂದ ಕಂಗೆಡದ ಸ್ವಿಯಾಟೆಕ್, ಬರೋಬ್ಬರಿ 2 ಗಂಟೆ 11 ನಿಮಿಷಗಳ ಕಾಲ ಸೆಣಸಾಟ ನಡೆಸುವ ಮೂಲಕ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾದರು.
ಈ ಗೆಲುವು ಇಗಾ ಸ್ವಿಯಾಟೆಕ್‌ಗೆ, ಆಯ್ರ್ನಾ ಸಬಲೆಂಕಾ ಎದುರು ಮುನ್ನಡೆ ಸಾಧಿಸುವಲ್ಲಿ ನೆರವಾಗಿದೆ. ಕಳೆದ ವರ್ಷ ನಡೆದ WTA ಫೈನಲ್ಸ್‌ನಲ್ಲಿ ಆಯ್ರ್ನಾ ಸಬಲೆಂಕಾ ಎದುರು ಇಗಾ ಸ್ವಿಯಾಟೆಕ್ ಸೋಲನ್ನನುಭವಿಸಿದ್ದರು. ಆದರೆ ಈ ವರ್ಷದ ನಾಲ್ಕೂ ಆವೃತ್ತಿಯಲ್ಲೂ ಆಯ್ರ್ನಾ ಸಬಲೆಂಕಾ ಎದುರು ಇಗಾ ಸ್ವಿಯಾಟೆಕ್ ಭರ್ಜರಿ ಗೆಲುವು ಸಾಧಿಸುವ ಮೂಲಕ ಪ್ರಾಬಲ್ಯ ಮೆರೆದಿದ್ದಾರೆ. ಈ ಮೊದಲು 2021ರ ಯುಎಸ್ ಓಪನ್, 2021ರ ವಿಂಬಲ್ಡನ್‌ನಲ್ಲಿ ಇಗಾ ಸ್ವಿಯಾಟೆಕ್ ಎದುರು ಆಯ್ರ್ನಾ ಸಬಲೆಂಕಾ ಸೋಲು ಅನುಭವಿಸಿದ್ದರು.
ಇನ್ನು ಇದಕ್ಕೂ ಮೊದಲು ನಡೆದ ಮೊದಲ ಮಹಿಳಾ ಸೆಮಿಫೈನಲ್ ಪಂದ್ಯದಲ್ಲಿ ಟ್ಯುನೇಷಿಯಾದ 5ನೇ ಶ್ರೇಯಾಂಕಿತ ಆಟಗಾರ್ತಿ ಒನ್ಸ್ ಜಬುರ್, ಫ್ರಾನ್ಸ್‌ನ ಕ್ಯಾರೋಲಿನ್ ಗಾರ್ಸಿಯಾ ಎದುರು 6-1, 6-3 ನೇರ ಸೆಟ್‌ಗಳಲ್ಲಿ ಗೆಲುವು ದಾಖಲಿಸುವ ಮೂಲಕ ಭರ್ಜರಿಯಾಗಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.
US Open 2022 ಕ್ಯಾರೋಲಿನ್ ಗಾರ್ಸಿಯಾ ಮಣಿಸಿ ಒನ್ಸ್ ಜಬುರ್ ಫೈನಲ್‌ಗೆ ಲಗ್ಗೆ..!
28 ವರ್ಷದ ಒನ್ಸ್ ಜಬುರ್, ಕಳೆದ ಜುಲೈನಲ್ಲಿ ನಡೆದ ವಿಂಬಲ್ಡನ್ ಟೆನಿಸ್ ಗ್ರ್ಯಾನ್ ಸ್ಲಾಂನಲ್ಲಿ ಫೈನಲ್‌ನಲ್ಲಿ ಮುಗ್ಗರಿಸುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಇದೀಗ 1968ರ ಬಳಿಕ ಯುಎಸ್ ಓಪನ್ ಫೈನಲ್ ಪ್ರವೇಶಿಸಿದ ಆಫ್ರಿಕಾ ಮೂಲದ ಮೊದಲ ಮಹಿಳಾ ಸಿಂಗಲ್ಸ್ ಆಟಗಾರ್ತಿ ಎನ್ನುವ ಹಿರಿಮೆಗೆ ಒನ್ಸ್ ಜಬುರ್ ಪಾತ್ರರಾಗಿದ್ದಾರೆ.
ಶನಿವಾರ ಪುರುಷರ ಸೆಮಿಫೈನಲ್
ಇದೀಗ ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಸೆಮಿಫೈನಲ್ ಪಂದ್ಯಗಳು ಮುಕ್ತಾಯವಾಗಿದ್ದು, ಶನಿವಾರ ಪುರುಷರ ಸಿಂಗಲ್ಸ್ ಸೆಮಿಫೈನಲ್‌ಗಳು ನಡೆಯಲಿದೆ. ಮೊದಲ ಸೆಮೀಸ್‌ನಲ್ಲಿ ನಾರ್ವೆಯ ಕ್ಯಾಸ್ಪರ್ ರುಡ್ ಹಾಗೂ ರಷ್ಯಾದ ಕಾರೆನ್ ಖಚನೊವ್ ಎದುರಾಗಲಿದ್ದಾರೆ. 2ನೇ ಸೆಮೀಸ್‌ನಲ್ಲಿ ಕಾರ್ಲೊಸ್ ಆಲ್ಕರಜ್ ಹಾಗೂ ಫ್ರಾನ್ಸೆಸ್ ಟಿಯಾಫೋ ಸೆಣಸಲಿದ್ದಾರೆ.