ಸತತ 2ನೇ ಬಾರಿಗೆ ವಿಶ್ವ ಬ್ಯಾಂಡ್ಮಿಟನ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿದ ಭಾರತದ ಪಿವಿ ಸಿಂಧೂಗೆ ನಿರಾಸೆಯಾಗಿದೆ. ಕಳೆದ ಬಾರಿ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದ್ದ ಸಿಂಧೂ, ಈ ಬಾರಿಯೂ ಚಿನ್ನ ಸಂಪಾದಿಸಲು ಸಾಧ್ಯವಾಗಿಲ್ಲ. ಸಿಂಧೂ ಹಾಗು ಒಲಿಂಪಿಕ್ ಪದಕ ವಿಜೇತ ಸ್ಪೇನ್‌ನ ಕ್ಯಾರೋಲಿನಾ  ಮರಿನ್ ನಡುವಿನ ಫೈನಲ್ ಹೋರಾಟದ ವಿವರ ಇಲ್ಲಿದೆ. 

ನಾನ್ಜಿಂಗ್(ಆ.05): ವಿಶ್ವ ಚಾಂಪಿಯನ್‌ಶಿಪ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮುಗ್ಗರಿಸಿದ ಭಾರತದ ಪಿವಿ ಸಿಂಧು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ಸಿಂಧು, ಬಲಿಷ್ಠ ಎದುರಾಳಿ ಸ್ಪೇನ್‌ನ ಕ್ಯಾರೋಲಿನಾ ಮರಿನ್ ವಿರುದ್ಧ ಸೋಲು ಅನುಭವಿಸಿದರು.

ರೋಚಕ ಫೈನಲ್ ಪಂದ್ಯದಲ್ಲಿ ಸಿಂಧು ದಿಟ್ಟ ಹೋರಾಟ ನೀಡಿದರು. ಆದರೆ ಒಲಿಂಪಿಕ್ ಚಾಂಪಿಯನ್ ಕ್ಯಾರೋಲಿನಾ ಮರಿನ್ ವಿರುದ್ಧ ಗೆಲುವಿನ ಸಿಹಿ ಕಾಣಲಿಲ್ಲ. ಮೊದಲ ಸೆಟ್‌ನಲ್ಲಿ 19-21 ಅಂತರದಿಂದ ಸೋಲು ಕಂಡ ಸಿಂಧು, ದ್ವಿತೀಯ ಸೆಟ್‌ನಲ್ಲಿ 10-21 ಅಂತರದಲ್ಲಿ ಸೋಲು ಅನುಭವಿಸಿದರು.

2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಕ್ಯಾರೋಲಿನ್ ಮರಿನ್ ವಿರುದ್ಧ ಸೋಲು ಅನುಭವಿಸಿ ಬೆಳ್ಳಿ ಪದಕ ಪಡೆದ ಸಿಂಧೂ, ಮತ್ತೆ ಮರಿನ್ ವಿರುದ್ಧ ಗೆಲುವಿನ ನಗೆ ಬೀರಲು ಸಾಧ್ಯವಾಗಲಿಲ್ಲ. ಈ ಮೂಲಕ ಸಿಂಧೂ ವಿರುದ್ಧ ಮರಿನ್ ಅಜೇಯ ಓಟ ಮುಂದುವರಿದಿದೆ.

ಕಳೆದ ವರ್ಷ ಗ್ಲಾಸ್ಗೋನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್’ಶಿಪ್ ಫೈನಲ್‌ನಲ್ಲಿ ಸಿಂಧು, ಜಪಾನ್‌ನ ನಜೋಮಿ ಓಕುಹಾರಾ ವಿರುದ್ಧ ಸೋಲುಂಡು ಬೆಳ್ಳಿಗೆ ತೃಪ್ತಿಪಟ್ಟಿದ್ದರು. ಇದಕ್ಕೂ ಮೊದಲು 2013, 2014ರಲ್ಲಿ ಸಿಂಧು ಕಂಚಿನ ಪದಕ ಜಯಿಸಿದ್ದರು. ಇದೀಗ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲೂ ಬೆಳ್ಳಿಗೆ ತೃಪ್ತಿಪಡಬೇಕಾಗಿದೆ.