ಮಹಿಳಾ ವಿಶ್ವ ಬಾಕ್ಸಿಂಗ್: ನಿಖಾತ್, ಸಾಕ್ಷಿಗೆ ಭರ್ಜರಿ ಜಯ
ಮಹಿಳಾ ಬಾಕ್ಸಿಂಗ್ ವಿಶ್ವಚಾಂಪಿಯನ್ಶಿಪ್ನಲ್ಲಿ ಭಾರತ ಶುಭಾರಂಭ
ಹಾಲಿ ವಿಶ್ವ ಚಾಂಪಿಯನ್, ನಿಖಾತ್ ಜರೀನ್, ಅಜರ್ಬೈಜಾನ್ನ ಅನಾಕನೀಮ್ ವಿರುದ್ಧ ಗೆಲುವು
54 ಕೆ.ಜಿ. ವಿಭಾಗದಲ್ಲಿ ಪ್ರೀತಿ, ಹಂಗೇರಿಯ ಹನ್ನಾ ವಿರುದ್ಧ ಜಯ
ನವದೆಹಲಿ(ಮಾ.17): 13ನೇ ಆವೃತ್ತಿಯ ಮಹಿಳಾ ಬಾಕ್ಸಿಂಗ್ ವಿಶ್ವಚಾಂಪಿಯನ್ಶಿಪ್ನ ಮೊದಲ ದಿನ ಭಾರತೀಯ ಬಾಕ್ಸರ್‌ಗಳು ಗೆಲುವು ಸಾಧಿಸಿ ಮುನ್ನಡೆದಿದ್ದಾರೆ. 50 ಕೆ.ಜಿ. ವಿಭಾಗದ ಮೊದಲ ಸುತ್ತಿನಲ್ಲಿ ಹಾಲಿ ವಿಶ್ವ ಚಾಂಪಿಯನ್, ನಿಖಾತ್ ಜರೀನ್, ಅಜರ್ಬೈಜಾನ್ನ ಅನಾಕನೀಮ್ ವಿರುದ್ಧ ತಾಂತ್ರಿಕ ಪ್ರಾಬಲ್ಯದೊಂದಿಗೆ ಗೆಲುವು ಸಾಧಿಸಿದರು. ಎದುರಾಳಿಯು ಜರೀನ್‌ರ ಪಂಚ್‌ಗಳಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಮನಗಂಡ ರೆಫ್ರಿ, 2ನೇ ಸುತ್ತಿನಲ್ಲೇ ಪಂದ್ಯ ನಿಲ್ಲಿಸಿ ಜರೀನ್ ಪರ ತೀರ್ಪು ನೀಡಿದರು.
ಇನ್ನು 54 ಕೆ.ಜಿ. ವಿಭಾಗದಲ್ಲಿ ಪ್ರೀತಿ, ಹಂಗೇರಿಯ ಹನ್ನಾ ವಿರುದ್ಧ ಜಯಗಳಿಸಿದರೆ, 52 ಕೆ.ಜಿ. ವಿಭಾಗದಲ್ಲಿ ಸಾಕ್ಷಿ ಚೌಧರಿ ಕೊಲಂಬಿಯಾದ ಮಾರ್ಟಿನೆಜ್ ಮರಿಯಾ ವಿರುದ್ದ 5-0 ಅಂತರದಲ್ಲಿ ಗೆದ್ದು ಪ್ರಿ ಕ್ವಾರ್ಟರ್ ಫೈನಲ್ಗೇರಿದರು. 81+ ಕೆ.ಜಿ. ವಿಭಾಗದಲ್ಲಿ ನೂಪುರ್, ಗಯಾನಾದ ಜ್ಯಾಕ್ಮನ್ ಅವರನ್ನು 5-0 ಅಂತರದಲ್ಲಿ ಸೋಲಿಸಿ ಕ್ವಾರ್ಟರ್ ಫೈನಲ್ಗೆ ಪ್ರವೇಶ ಪಡೆದರು.
ಆಲ್ ಇಂಗ್ಲೆಂಡ್: ಲಕ್ಷ್ಯ ಸೇನ್ ಔಟ್, ತ್ರೀಸಾ-ಗಾಯತ್ರಿ ಕ್ವಾರ್ಟರ್ಗೆ
ಬರ್ಮಿಂಗ್ಹ್ಯಾಮ್: 2023ರಲ್ಲಿ ತಮ್ಮ ಕಳಪೆ ಆಟ ಮುಂದುವರಿಸಿದ ಭಾರತದ ತಾರಾ ಶಟ್ಲರ್ ಲಕ್ಷ್ಯ ಸೇನ್ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯ ಎರಡನೇ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ. ಕಳೆದ ವರ್ಷ ಲಕ್ಷ್ಯ ರನ್ನರ್-ಅಪ್ ಸ್ಥಾನ ಪಡೆದಿದ್ದರು.
ಗುರುವಾರ ನಡೆದ ಪುರುಷರ ಸಿಂಗಲ್ಸ್ 2ನೇ ಸುತ್ತಿನ ಪಂದ್ಯದಲ್ಲಿ ಸೇನ್, ಡೆನ್ಮಾರ್ಕ್ ಆ್ಯಂಡರ್ಸ್ ಆ್ಯಂಟೋನ್ಸೆನ್ ವಿರುದ್ಧ 13-21, 15-21 ನೇರ ಗೇಮ್ಗಳಲ್ಲಿ ಸೋಲನುಭವಿಸಿದರು. ಇನ್ನು ಪುರುಷರ ಡಬಲ್ಸ್ನಲ್ಲಿ ಪದಕ ಭರವಸೆ ಮೂಡಿಸಿದ್ದ ಚಿರಾಗ್ ಶೆಟ್ಟಿ-ಸಾತ್ವಿಕ್ ಜೋಡಿ ಚೀನಾದ ಲಿಯಾಂಗ್ ಕೆಂಗ್-ವ್ಯಾಂಗ್ ಚಾಂಗ್ ವಿರುದ್ಧ 21-10, 17-21, 19-21 ಗೇಮ್ಗಳಲ್ಲಿ ಸೋತು 2ನೇ ಸುತ್ತಿನಲ್ಲೇ ಹೊರಬಿತ್ತು.
ಮೊದಲ ಬಾರಿಗೆ ಪತ್ನಿ ಸಫಾ ಬೇಗ್ ಮುಖ ತೋರಿಸಿದ ಕ್ರಿಕೆಟಿಗ ಇರ್ಫಾನ್ ಪಠಾಣ್..! ಮುದ್ದಾದ ಫೋಟೋ ವೈರಲ್
ಆದರೆ ಮಹಿಳಾ ಡಬಲ್ಸ್ನಲ್ಲಿ ತ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್ ಜಪಾನ್ನ ಯೂಕಿ ಫುಕುಶಿಮಾ-ಸಯಾಕ ಹಿರೋಟಾ ಜೋಡಿ ವಿರುದ್ಧ 21-14, 24-22ರಿಂದ ಗೆದ್ದು ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟಿತು. ಅಂತಿಮ 8ರ ಘಟ್ಟದಲ್ಲಿ ಭಾರತೀಯ ಜೋಡಿ ಚೀನಾದ ಲಿಯು ಕ್ಷಾನ್-ಲೀ ವೆನ್ ವಿರುದ್ಧ ಸೆಣಸಲಿದೆ.
ಹಾಕಿ ರ‍್ಯಾಂಕಿಂಗ್: ಭಾರತ ಪುರುಷರ ತಂಡ ನಂ.4!
ನವದೆಹಲಿ: ತವರಿನಲ್ಲಿ ನಡೆದ ಎಫ್ಐಎಚ್ ಪ್ರೊ ಲೀಗ್‌ನ ನಾಲ್ಕೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಭಾರತ ಪುರುಷರ ಹಾಕಿ ತಂಡ, ವಿಶ್ವ ರ್ಯಾಂಕಿಂಗ್ನಲ್ಲಿ 4ನೇ ಸ್ಥಾನಕ್ಕೇರಿದೆ. ಗುರುವಾರ ಪ್ರಕಟಗೊಂಡ ನೂತನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ 2 ಸ್ಥಾನ ಜಿಗಿತ ಕಂಡಿದೆ. 4ನೇ ಸ್ಥಾನದಲ್ಲಿದ್ದ ಆಸ್ಪ್ರೇಲಿಯಾ 5ನೇ ಸ್ಥಾನಕ್ಕೆ ಕುಸಿದರೆ, ಹಾಲಿ ವಿಶ್ವ ಚಾಂಪಿಯನ್ ಜರ್ಮನಿ ಅಗ್ರಸ್ಥಾನ ಕಳೆದುಕೊಂಡು 3ನೇ ಸ್ಥಾನಕ್ಕೆ ಜಾರಿದೆ.
2023ರ ವಿಶ್ವಕಪ್ ಕಂಚು ವಿಜೇತ ನೆದರ್ಲೆಂಡ್ಸ್ ಮೊದಲ ಸ್ಥಾನ ಪಡೆದಿದ್ದು, ರನ್ನರ್-ಅಪ್ ಬೆಲ್ಜಿಯಂ 2ನೇ ಸ್ಥಾನದಲ್ಲಿದೆ. ಇಂಗ್ಲೆಂಡ್, ಅರ್ಜೆಂಟೀನಾ, ಸ್ಪೇನ್ ಕ್ರಮವಾಗಿ 6, 7, 8ನೇ ಸ್ಥಾನಗಳಲ್ಲಿವೆ.