ಬ್ಯಾಟ್ಸ್‌ಮನ್‌ಗೆ ಬಾಲ್ ಮಾಡಬೇಕಿದ್ದ ವೇಗಿ, ಯಾರಿಗೂ ಸಿಗದಂತೆ ನೇರವಾಗಿ ಬೌಂಡರಿಯತ್ತ ಬಾಲ್ ಮಾಡಿ ಇದೀಗ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಅಷ್ಟಕ್ಕೂ ವೇಗಿ ಈ ರೀತಿ ಬೌಲಿಂಗ್ ಮಾಡಿದ್ದೇಕೆ? ಇಲ್ಲಿದೆ ಅಸಲಿ ಕಾರಣ.
ಲಂಡನ್(ಆ.05): ಕ್ರಿಕೆಟ್‌ನಲ್ಲಿ ಪ್ರತಿ ತಂಡ, ಪ್ರತಿ ಆಟಗಾರರು ಗೆಲುವಿಗಾಗಿ ಕಠಿಣ ಹೋರಾಟ ನೀಡುತ್ತಾರೆ. ಕೊನೆಗೆ ಗೆಲುವು ಸಾಧ್ಯವಿಲ್ಲ ಎಂದಾಗ ಎದುರಾಳಿಗಳು ದಾಖಲೆ ಬರೆಯೋದನ್ನ, ಶತಕ ಸಿಡಿಸೋದನ್ನ ತಪ್ಪಿಸಲು ಹರಸಾಹಸ ಮಾಡುತ್ತಾರೆ. ಇದೀಗ ಇಂಗ್ಲೆಂಡ್ ಕ್ಲಬ್ ಕ್ರಿಕೆಟ್‌ನಲ್ಲಿ ಈ ರೀತಿ ಘಟನೆ ನಡೆದಿದೆ.
ಸೋಮರ್‌ಸೆಟ್ ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ ಮೈನ್‌ಹೆಡ್ ಕ್ರಿಕೆಟ್ ತಂಡ ಬ್ಯಾಟ್ಸ್‌ಮನ್ ಜೇ ಡರೆಲ್ 98 ರನ್ ಸಿಡಿಸಿ ಕ್ರೀಸ್‌ನಲ್ಲಿದ್ದರು. ತಂಡದ ಗೆಲುವಿಗೆ 2ರನ್‌ಗಳು ಬೇಕಿತ್ತು. ಮುಂದಿನ ಎಸೆತದಲ್ಲಿ 2 ರನ್ ಜೊತೆಗೆ ಶತಕ ಪೂರೈಸೋ ಕನಸಿನಲ್ಲಿದ್ದ ಡರೆಲ್ ಲೆಕ್ಕಾಚರ ಉಲ್ಟಾ ಆಗಿತ್ತು.
ಪರ್ನೆಲ್ ಕ್ರಿಕೆಟ್ ಕ್ಲಬ್ ತಂಡ ವೇಗಿ, ಮರು ಎಸೆತವನ್ನ ಬೌಂಡರಿ ಗೆರೆಗೆ ಎಸೆದರು. ಈ ಮೂಲಕ ನೋ ಬಾಲ್ ಹಾಗೂ 4 ರನ್ ಹೆಚ್ಚುವರಿ ನೀಡಿದರು. ಹೀಗಾಗಿ ಮೈನ್‌ಹೆಡ್ ತಂಡ ಗೆಲುವು ಸಾಧಿಸಿತು. ಆದರೆ ಡರೆಲ್ ಅಜೇಯ 98 ರನ್‌ಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಪಂದ್ಯದ ಬಳಿಕ ನೋ ಬಾಲ್ ಎಸೆತಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಯಿತು. ಪರ್ನೆಲ್ ಕ್ರಿಕೆಟ್ ತಂಡ ಕ್ರೀಡಾ ಸ್ಪೂರ್ತಿ ಮರೆತು ಆಡಿದೆ ಎಂಬ ಆರೋಪ ಕೇಳಿಬಂತು. ಇದಕ್ಕೆ ಪರ್ನೆಲ್ ನಾಯಕ ಬೌಲರ್ ಪರವಾಗಿ ಕ್ಷಮೆ ಯಾಚಿಸಿದರು.
