ಲಂಡನ್‌[ಮೇ.30]: ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ಗೆ ಗುರುವಾರ ಚಾಲನೆ ಸಿಗಲಿದ್ದು, ಕಳೆದ 4 ವರ್ಷಗಳಿಂದ ಸಿದ್ಧತೆ ನಡೆಸಿರುವ ಇಂಗ್ಲೆಂಡ್‌ ತಂಡಕ್ಕೆ ಅಸಲಿ ಪರೀಕ್ಷೆ ಎದುರಾಗಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ವಿಶ್ವಕಪ್‌ ಅಭಿಯಾನವನ್ನು ಆರಂಭಿಸಲಿರುವ ಇಂಗ್ಲೆಂಡ್‌, ಶುಭಾರಂಭದ ನಿರೀಕ್ಷೆಯಲ್ಲಿದೆ.

2015ರ ಏಕದಿನ ವಿಶ್ವಕಪ್‌ನಲ್ಲಿ ಗುಂಪು ಹಂತದಲ್ಲೇ ಹೊರಬಿದ್ದಿದ್ದ ಇಯಾನ್‌ ಮಾರ್ಗನ್‌ ಪಡೆ, ಏಕದಿನ ರಾರ‍ಯಂಕಿಂಗ್‌ ಪಟ್ಟಿಯಲ್ಲೀಗ ಅಗ್ರಸ್ಥಾನದಲ್ಲಿದೆ. 4 ವರ್ಷಗಳಲ್ಲಿ ಹೊಸದಾಗಿ ತಂಡ ಕಟ್ಟಿರುವ ಮಾರ್ಗನ್‌, ಮೊದಲ ಬಾರಿಗೆ ತಮ್ಮ ತಂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಳ್ಳುವಂತೆ ಮಾಡಿದ್ದಾರೆ.

ಬ್ಯಾಟಿಂಗ್‌ ಇಂಗ್ಲೆಂಡ್‌ನ ಬಲ ಎನಿಸಿದೆ. ಜೇಸನ್‌ ರಾಯ್‌, ಜಾನಿ ಬೇರ್‌ಸ್ಟೋವ್‌, ಜೋ ರೂಟ್‌, ಇಯಾನ್‌ ಮಾರ್ಗನ್‌, ಜೋಸ್‌ ಬಟ್ಲರ್‌, ಬೆನ್‌ ಸ್ಟೋಕ್ಸ್‌, ಮೋಯಿನ್‌ ಅಲಿ, ಹೀಗೆ ಅಗ್ರ 7 ಬ್ಯಾಟ್ಸ್‌ಮನ್‌ಗಳು ಪಂದ್ಯದ ಗತಿಯನ್ನು ಏಕಾಂಗಿಯಾಗಿ ಬದಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಕೆಳ ಕ್ರಮಾಂಕದ ಆಟಗಾರರು ಸಹ ಬ್ಯಾಟ್‌ ಮಾಡುವ ಸಾಮರ್ಥ್ಯ ಹೊಂದಿದ್ದು, ಮೊದಲು ಬ್ಯಾಟ್‌ ಮಾಡಿ ದೊಡ್ಡ ಮೊತ್ತ ಕಲೆಹಾಕುವುದು ಇಲ್ಲವೇ ದೊಡ್ಡ ಮೊತ್ತ ಬೆನ್ನತ್ತಿ ಗೆಲ್ಲುವುದು ಇಂಗ್ಲೆಂಡ್‌ ಪಾಲಿಗೆ ಸುಲಭ ಎನಿಸಿದೆ.

2015ರ ಬಳಿಕ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳು ಒಟ್ಟು 23,198 ರನ್‌ ಕಲೆಹಾಕಿದ್ದಾರೆ. ಇದೊಂದು ದಾಖಲೆ ಸಹ ಹೌದು. ಇಂಗ್ಲೆಂಡ್‌ ವೇಗಿಗಳು ಕಳೆದ 4 ವರ್ಷಗಳಲ್ಲಿ 141 ವಿಕೆಟ್‌ ಕಬಳಿಸಿದ್ದಾರೆಯಾದರೂ 5283 ರನ್‌ ಬಿಟ್ಟುಕೊಟ್ಟಿದ್ದಾರೆ. ವೇಗಿಗಳು ಓವರ್‌ಗೆ ಸರಾಸರಿ 6 ರನ್‌ಗಿಂತ ಹೆಚ್ಚು ಚಚ್ಚಿಸಿಕೊಳ್ಳುತ್ತಿದ್ದು ಟೂರ್ನಿಯಲ್ಲಿ ತಂಡಕ್ಕೆ ಹಿನ್ನಡೆಯಾದರೆ ಅಚ್ಚರಿಯಿಲ್ಲ. ಆದಿಲ್‌ ರಶೀದ್‌ ತಂಡದ ಮುಂಚೂಣಿ ಸ್ಪಿನ್ನರ್‌ ಆಗಿದ್ದು, ಮೋಯಿನ್‌ ಅಲಿಯಿಂದ ತಕ್ಕ ಬೆಂಬಲ ಸಿಗಬೇಕಿದೆ.

ಆಫ್ರಿಕಾಕ್ಕೆ ಅನುಭವಿಗಳ ಬಲ

ದಕ್ಷಿಣ ಆಫ್ರಿಕಾ ತಂಡ ಅನುಭವಿಗಳಿಂದ ಕೂಡಿದೆ. ಪ್ರಮುಖವಾಗಿ ತಂಡದ ವೇಗದ ಬೌಲಿಂಗ್‌ ಪಡೆ ಅತ್ಯುತ್ತಮವಾಗಿದೆ. ಭುಜದ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಡೇಲ್‌ ಸ್ಟೇನ್‌ ಈ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಆದರೂ ಕಗಿಸೋ ರಬಾಡ, ಲುಂಗಿ ಎನ್‌ಗಿಡಿ, ಆ್ಯಂಡಿಲೆ ಫೆಲುಕ್ವಾಯೋ, ಕ್ರಿಸ್‌ ಮೋರಿಸ್‌ರಂತಹ ವೇಗಿಗಳು ತಂಡಕ್ಕೆ ಆಸರೆಯಾಗಬಲ್ಲರು. ಬ್ಯಾಟಿಂಗ್‌ ವಿಭಾಗದಲ್ಲಿ ದ.ಆಫ್ರಿಕಾ ತನ್ನ ನಾಯಕ ಫಾಫ್‌ ಡು ಪ್ಲೆಸಿ, ಹಾಶೀಂ ಆಮ್ಲಾ, ಕ್ವಿಂಟನ್‌ ಡಿ ಕಾಕ್‌ರನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. ಪ್ರತಿಭಾನ್ವಿತ ಆರಂಭಿಕ ಏಡನ್‌ ಮಾರ್ಕ್ರಮ್‌, ರಾಸ್ಸಿ ವಾನ್‌ ಡರ್‌ ಡುಸ್ಸೆನ್‌ ಮೇಲೂ ನಿರೀಕ್ಷೆ ಇದೆ. ಅನುಭವಿಗಳಾದ ಜೆ.ಪಿ.ಡುಮಿನಿ, ಡೇವಿಡ್‌ ಮಿಲ್ಲರ್‌ ಜವಾಬ್ದಾರಿಯುತ ಆಟವಾಡಬೇಕಿದೆ. ಇಮ್ರಾನ್‌ ತಾಹಿರ್‌ ಸ್ಪಿನ್‌ ಜಾದೂ ನಡೆಸಿದರೆ, ಇಂಗ್ಲೆಂಡ್‌ ದಾಂಡಿಗರು ಕಠಿಣ ಸಮಯ ಎದುರಿಸುವುದು ಖಚಿತ.

ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ..