ಖ್ಯಾತ ಯೂಟ್ಯೂಬರ್, ಬೈಕರ್ ಬದುಕು ದುರಂತ ಅಂತ್ಯ300 ಕಿಲೋಮೀಟರ್ ವೇಗದಲ್ಲಿ ಬೈಕ್ ಓಡಿಸಲು ಯತ್ನಅದೇ ವೇಗದಲ್ಲಿ ಇಹಲೋಕ ತ್ಯಜಿಸಿದ ಅಗಸ್ತ್ಯ

ಆಲಿಘರ್(ಮೇ.04): ಯಮುನಾ ಎಕ್ಸ್‌ಪ್ರೆಸ್‌ ವೇನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಯೂಟ್ಯೂಬರ್ ಹಾಗೂ ಬೈಕ್ ರೇಸರ್‌ ಅಗಸ್ತ್ಯ ಚೌಹ್ಹಾಣ್‌ ಕೊನೆಯುಸಿರೆಳೆದಿದ್ದಾರೆ. ವೃತ್ತಿಪರ ಬೈಕರ್ ಆಗಿರುವ ಅಗಸ್ತ್ಯ, ತಮ್ಮದೇ ಸೂಪರ್‌ ಬೈಕ್‌ನಲ್ಲಿ ಗಂಟೆಗೆ 300 ಕಿಲೋ ಮೀಟರ್ ವೇಗದಲ್ಲಿ ಬೈಕ್ ಓಡಿಸುವ ಯತ್ನದಲ್ಲಿ ದುರ್ಮರಣಕ್ಕೀಡಾಗಿದ್ದಾರೆ. ತಮ್ಮ ZX10R ನಿಂಜ ಸೂಪರ್‌ ಬೈಕ್‌ನಲ್ಲಿ ಗಂಟೆಗೆ 300 ಕಿಲೋಮೀಟರ್ ವೇಗದಲ್ಲಿ ಬೈಕ್ ಓಡಿಸುವುದನ್ನು ಮೊದಲ ಬಾರಿಗೆ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ ಮಾಡುವ ಯತ್ನದಲ್ಲಿ ಅಗಸ್ತ್ಯ ಅಷ್ಟೇ ವೇಗದಲ್ಲಿ ಯಮಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಅಗಸ್ತ್ಯ ತಮ್ಮ ಬೈಕ್ ಕ್ರೇಜ್‌ ಅನಾವರಣ ಮಾಡಲು ಮುಂದಾಗಿದ್ದರು, ಆದರೆ ಅದೇ ವೇಳೆ ವಿಧಿಯ ಆಟ ಬೇರೆಯದ್ದೇ ಆಗಿತ್ತು. ಅಗಸ್ತ್ಯ ತಮ್ಮ ಸೂಪರ್‌ ಬೈಕ್‌ನಲ್ಲಿ ಗಂಟೆಗೆ 300 ಕಿಲೋ ಮೀಟರ್‌ ವೇಗದಲ್ಲಿ ಬೈಕ್‌ ಓಡಿಸಿದರಾದರೂ, ದುರಾದೃಷ್ಟವಶಾತ್ ಅಗಸ್ತ್ಯ ಅವರಿಗೆ ಆ ಬಳಿಕ ಬೈಕಿನ ಮೇಲಿನ ನಿಯಂತ್ರಣ ಕಳೆದುಕೊಂಡರು. ಆ ಬಳಿಕ ರೇಸ್ ಬೈಕ್ ಅದೇ ವೇಗದಲ್ಲಿ ಯಮುನಾ ಎಕ್ಸ್‌ಪ್ರೆಸ್‌ ವೇನ ರಸ್ತೆ ವಿಭಜಕಕ್ಕೆ(ರೋಡ್ ಡಿವೈಡರ್‌) ಅಪ್ಪಳಿಸಿದೆ. ಅಪಘಾತದ ಭೀಕರತೆ ಯಾವ ಪ್ರಮಾಣದಲ್ಲಿತ್ತು ಎಂದರೆ, ಅಗಸ್ತ್ಯ ಧರಿಸಿದ್ದ ಗುಣಮಟ್ಟದ ಹೆಲ್ಮೆಟ್‌ ಹಲವು ಚೂರಾಗಿ ಬಿದ್ದಿತ್ತು. ಪರಿಣಾಮ ಬೈಕರ್ ಅಗಸ್ತ್ಯ ಚೌಹ್ಹಾಣ್ ಅಲ್ಲೇ ಕ್ಷಣ ಮಾತ್ರದಲ್ಲೇ ಕೊನೆಯುಸಿರೆಳೆದರು. ರಸ್ತೆಯ ಮಧ್ಯದಲ್ಲಿಯೇ ಅವರ ದೇಹ ನಿಸ್ತೇಜವಾಗಿ ಬಿದ್ದಿತ್ತು. ಮಾರಾಣಾಂತಿಕವಾದ ಗಾಯವಾಗಿದ್ದರಿಂದ ಅವರ ದೇಹದ ಸುತ್ತಲೂ ರಕ್ತ ಮಡುಗಟ್ಟಿ ನಿಂತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿರುವುದಾಗಿ ವರದಿಯಾಗಿದೆ.

ಅನು​ಮತಿ ಇಲ್ಲದೇ ಸೌದಿ​ಗೆ ತೆರ​ಳಿದ ಲಿಯೋನೆಲ್ ಮೆಸ್ಸಿ ಅಮಾ​ನ​ತು!

ಯೂಟ್ಯೂಬರ್ ಅಗಸ್ತ್ಯ, ನವದೆಹಲಿಯಿಂದ ತಮ್ಮ ರೇಸಿಂಗ್ ಬೈಕ್‌ನಲ್ಲಿ ಆಗ್ರದತ್ತ ಪ್ರಯಾಣ ಬೆಳೆಸಿದ್ದರು. ಉತ್ತರ ಪ್ರದೇಶದ ತಪ್ಪಲ್‌ ಪೊಲೀಸ್ ಠಾಣೆಯಿಂದ 47 ಮೈಲಿ ದೂರದಲ್ಲಿ ಯಮುನಾ ಎಕ್ಸ್‌ಪ್ರೆಸ್‌ವೇ ಈ ಅವಘಡ ಸಂಭವಿಸಿದೆ. ಅಗಸ್ತ್ಯ ಚೌಹ್ಹಾಣ್‌, ಉತ್ತರಾಖಂಡ್‌ನ ಡೆಹ್ರಾಡೂನ್‌ ನಿವಾಸಿಯಾಗಿದ್ದರು. ಅಗಸ್ತ್ಯ 'ಪ್ರೊ ರೈಡರ್‌ 1000'(Pro Rider 1000) ಎನ್ನುವ ಹೆಸರಿನ ಯೂಟ್ಯೂಬ್‌ ಚಾನೆಲ್ ನಡೆಸುತ್ತಿದ್ದರು. ಈ ಯೂಟ್ಯೂಬ್ ಚಾನೆಲ್‌ಗೆ 1.2 ಮಿಲಿಯನ್‌ ಸಬ್‌ಸ್ಕ್ರೈಬರ್ ಇದ್ದಾರೆ. ಈ ಅವಘಡ ಸಂಭವಿಸುವ 16 ಗಂಟೆ ಮೊದಲು ಯೂಟ್ಯೂಬ್‌ನಲ್ಲಿ ತಮ್ಮ ಸ್ನೇಹಿತರಿಗೆ ನವದೆಹಲಿಗೆ ಬನ್ನಿ ಎಂದು ಮನವಿ ಮಾಡಿಕೊಂಡಿದ್ದರು.

ಅಗಸ್ತ್ಯ ಬೈಕ್ ಓಡಿಸುತ್ತಲೇ ವಿಡಿಯೋ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದರು. ಆದರೆ ಯಾವಾಗೆಲ್ಲ ತಮ್ಮ ಬೈಕ್ ರೈಡ್‌ ವಿಡಿಯೋ ಅಪ್‌ಲೋಡ್ ಮಾಡುತ್ತಿದ್ದರೋ ಆಗೆಲ್ಲಾ ಡಿಸ್‌ಕ್ಲೈಮರ್ ಹಾಕುವುದನ್ನು ಮರೆಯುತ್ತಿರಲಿಲ್ಲ. ತನ್ನೆಲ್ಲ ವೀಕ್ಷಕರಿಗೆ ದಯವಿಟ್ಟು ಯಾರೂ ವೇಗವಾಗಿ ಡ್ರೈವ್ ಮಾಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದರು. ಮೋಟರ್‌ಬೈಕ್ ರೇಸಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಅಗಸ್ತ್ಯ, ವೇಗದ ಚಾಲನೆ ಮಾಡಲು ಹೋಗಿ ಇಹಲೋಕ ತ್ಯಜಿಸಿದ್ದು ಮಾತ್ರ ವಿಪರ್ಯಾಸ..!