ಸೆಮಿಫೈನಲ್ ಪಂದ್ಯವು ಎರಡು ಲೆಗ್'ಗಳಲ್ಲಿ ಆಡಲಾಗುತ್ತದೆ. ಆ ಎರಡು ಲೆಗ್'ಗಳಲ್ಲಿ ತಂಡಗಳು ಗಳಿಸುವ ಒಟ್ಟು ಗೋಲುಗಳ ಆಧಾರದ ಮೇಲೆ ಗೆಲುವನ್ನು ನಿರ್ಧರಿಸಲಾಗುತ್ತದೆ. ಯಾರು ಹೆಚ್ಚು ಗೋಲು ಗಳಿಸುತ್ತಾರೆ ಅವರು ವಿಜಯಶಾಲಿಯಾಗುತ್ತಾರೆ. ಆದರೆ ಒಂದು ವೇಳೆ ಎರಡೂ ತಂಡಗಳ ಗೋಲಿನ ಮೊತ್ತ ಸರಿಸಮವಾಗಿದ್ದಲ್ಲಿ ವಿದೇಶೀ ನೆಲದಲ್ಲಿ ಯಾರು ಹೆಚ್ಚು ಗೋಲು ಗಳಿಸಿರುತ್ತಾರೆ ಎಂಬ ಲೆಕ್ಕಾಚಾರದ ಮೇಲೆ ವಿಜೇತರನ್ನು ನಿರ್ಧರಿಸಲಾಗುತ್ತದೆ.

ಬೆಂಗಳೂರು: ನಗರದ ಫುಟ್ಬಾಲ್‌ ಪ್ರೇಮಿಗಳಷ್ಟೇ ಅಲ್ಲದೆ, ಭಾರತದ ಕಾಲ್ಚೆಂಡಿನಾಟದ ಪ್ರಿಯರು ಬಹು ತವಕದಿಂದ ಎದುರುನೋಡುತ್ತಿರುವ ಪ್ರತಿ​ಷ್ಠಿತ ಏಷ್ಯಾ ಫುಟ್ಬಾಲ್‌ ಕಾನ್ಫೆ​ಡ​ರೇ​ಷನ್‌ ಟೂರ್ನಿಯ (ಎ​ಎ​ಫ್‌​ಸಿ) ದ್ವಿತೀಯ ಸೆಮಿ​ಫೈ​ನಲ್‌ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದ್ದು, ಸುನೀಲ್‌ ಛೆಟ್ರಿ ಸಾರಥ್ಯದ ಬೆಂಗ​ಳೂರು ಫುಟ್ಬಾಲ್‌ ತಂಡ (ಬಿ​ಎ​ಫ್‌​ಸಿ​) ಐತಿಹಾಸಿಕ ಗೆಲುವಿನ ನಿರೀಕ್ಷೆಯಲ್ಲಿದೆ.
ಈ ಹಿಂದೆ ಈಸ್ಟ್‌ ಬೆಂಗಾಲ್‌ ಮತ್ತು ಡೆಂಪೊ ತಂಡಗಳು ಮಾತ್ರವೇ ಎಎಫ್‌'ಸಿ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ಸಾಧನೆಯನ್ನು ಬಿಟ್ಟರೆ ಭಾರತದ ಮಿಕ್ಕ ಯಾವ ಫುಟ್ಬಾಲ್‌ ಕ್ಲಬ್‌ ಕೂಡ ಫೈನಲ್‌ ತಲುಪಿದ ನಿದರ್ಶನಗಳಿಲ್ಲ. ಹೀಗಾಗಿ ಐ-ಲೀಗ್‌ ಚಾಂಪಿಯನ್‌ ಬಿಎಫ್‌ಸಿ ಹೊಸದೊಂದು ಚರಿತ್ರೆ ಬರೆಯುವ ಹುಮ್ಮಸ್ಸಿನಲ್ಲಿದೆ.
ಇಲ್ಲಿನ ಶ್ರೀ ಕಂಠೀ​ರವ ಕ್ರೀಡಾಂಗ​ಣ​ದಲ್ಲಿ ಇಂದು ನಡೆ​ಯ​ಲಿ​ರುವ ಸೆಣಸಾಟದಲ್ಲಿ ಮಲೇಷಿಯಾ ಮೂಲದ, ಹಾಲಿ ಚಾಂಪಿಯನ್‌ ಜೊಹೊರ್‌ ದರುಲ್‌ ತಾಜಿಮ್‌ ವಿರುದ್ಧ ಬಿಎಫ್‌ಸಿ ಕಾದಾಡಲಿದೆ. ಸೆ. 28ರಂದು ತವರಿನಾಚೆ ನಡೆದಿದ್ದ ಇದೇ ಟೂರ್ನಿಯ ಮೊದಲ ಹಂತದ ಸೆಮಿಫೈನಲ್‌ನಲ್ಲಿ ಜೊಹೊರ್‌ ವಿರುದ್ಧ 1-1 ಗೋಲಿನಿಂದ ಸಮಬಲ ಸಾಧಿಸಿದ್ದ ಬಿಎಫ್‌ಸಿ, ತವರಿನಲ್ಲಿ ನಡೆಯುತ್ತಿರುವ ಎರಡನೇ ಹಂತದ ಕಾದಾಟಕ್ಕೆ ಅತೀವ ಹುರುಪಿನಲ್ಲಿದೆ. ಅಂದಹಾಗೆ ಮಲೇಷಿಯಾ ನೆಲದಲ್ಲಿ ಗಳಿಸಿದ ಗೋಲು ಕೂಡ ಅದಕ್ಕೆ ವರದಾನವಾಗಿದೆ. ಗುಂಪು ಹಂತದಲ್ಲಿ ಅಜೇಯ ತಂಡವಾಗಿ ನಾಕೌಟ್‌ ಪ್ರವೇಶಿಸಿದ ಜೊಹೊರ್‌ ತಂಡಕ್ಕೆ ಪ್ರತಿಯಾಗಿ ಬಿಎಫ್‌ಸಿ ಇದೇ ಗುಂಪು ಹಂತದಲ್ಲಿನ ಆರು ಪಂದ್ಯಗಳಲ್ಲಿ ಕೇವಲ ಮೂರರಲ್ಲಷ್ಟೇ ಗೆಲುವು ಸಾಧಿಸಿದರೆ, ಇನ್ನುಳಿದ ಮೂರರಲ್ಲಿ ಸೋಲನುಭವಿಸಿತ್ತು. ಆದರೆ, ಕ್ವಾರ್ಟರ್‌ಫೈನಲ್‌ನಲ್ಲಿ ಟಾಂಪೈನ್‌ ರೋವ​ರ್ಸ್ ವಿರುದ್ಧ 1-0 ಗೋಲಿನ ಗೆಲುವು ಪಡೆದು ಸೆಮಿಫೈನಲ್‌ಗೆ ಕಾಲಿಟ್ಟಿತ್ತು. ಅಂತೆಯೇ ಜೊಹೊರ್‌ ಕೂಡ ದಕ್ಷಿಣ ಚೀನಾ ತಂಡವನ್ನು ಕ್ವಾರ್ಟರ್‌'ಫೈನಲ್‌ನಲ್ಲಿ 3-2 ಗೋಲುಗಳಿಂದ ಮಣಿಸಿ ಉಪಾಂತ್ಯಕ್ಕೆ ಅರ್ಹತೆ ಪಡೆದಿತ್ತು. ಜೊಹೊರ್‌ ತಂಡ ಬಲಿಷ್ಠವಾಗಿದ್ದರೂ, ತಂಡದ ಪ್ರಮುಖ ಆಟಗಾರರಾದ ಜುವಾನ್‌ ಮಾರ್ಟಿನ್‌ ಲುಸೆರೊ ಹಾಗೂ ಪೆರೆರಾ ಡಯಾಜ್‌ ಈ ಎರಡನೇ ಹಂತದ ಪಂದ್ಯಕ್ಕೆ ಅಲಭ್ಯವಾಗಿರುವುದು ಬಿಎಫ್‌ಸಿಯ ಗೆಲುವಿನ ಆಸೆಗೆ ಹೊಸ ಆಸೆ ಚಿಮ್ಮಿಸಿದೆ.
‘‘ತವರಿನಾಚೆ ನಡೆದ ಮೊದಲ ಸೆಮಿಫೈನಲ್‌ನಲ್ಲಿ ನಾವು ಗೋಲು ಗಳಿಸಿರುವುದು ನೆರವಿಗೆ ಬಂದಿದೆಯಾದರೂ, ನಾವು ಇದನ್ನೇ ನಮ್ಮ ತಲೆಯಲ್ಲಿ ಇರಿಸಿಕೊಳ್ಳುವಂತಿಲ್ಲ. ಏಕೆಂದರೆ, ಇದೇ ಗುಂಗಿನಲ್ಲಿ ಮೈದಾನಕ್ಕೆ ಇಳಿದರೆ ಅದು ನಕಾರಾತ್ಮಕ ಪರಿಣಾಮ ಬೀರುವ ಅಪಾಯವಿರುತ್ತದೆ. ಮುಖ್ಯವಾಗಿ 50ಕ್ಕೂ ಹೆಚ್ಚು ಪ್ರಮುಖ ಆಟಗಾರರನ್ನು ಬದಲಿ ಆಟಗಾರರನ್ನಾಗಿ ಇಳಿಸಲು ಸಿದ್ಧವಾಗಿರುವ ಜೊಹೊರ್‌ ವಿರುದ್ಧ ಗೋಲು ಬಿಟ್ಟುಕೊಡದಿರಲು ಆದ್ಯತೆ ನೀಡಬೇಕಿದೆ'' ಎಂದು ಪಂದ್ಯದ ಮುನ್ನಾ ದಿನದಂದು ಛೆಟ್ರಿ ನುಡಿದರು.
"ಜೊಹೊರ್‌ ಹಾಲಿ ಚಾಂಪಿಯನ್‌ ಮಾತ್ರವಲ್ಲದೆ, ಅದೊಂದು ಅತ್ಯುತ್ತಮ ತಂಡ. ಆದರೆ, ತವರಿನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ನಾವು ಅದನ್ನು ಹಣಿಯುವ ಭರವಸೆಯಲ್ಲಿದ್ದೇವೆ. ಈ ಮಹತ್ವದ ಪಂದ್ಯದಲ್ಲಿ ನಮ್ಮ ಯೋಜನೆಗೆ ತಕ್ಕಂತೆ ಆಡಿದ್ದೇ ಆದಲ್ಲಿ ಎಎಫ್‌ಸಿ ಕಪ್‌ ಟೂರ್ನಿಯ ಫೈನಲ್‌ ತಲುಪಬೇಕೆಂಬ ನಮ್ಮ ಕನಸು ಸಾಕಾರಗೊಳ್ಳುವುದಂತೂ ಖಚಿತ," ಎಂದು ಬಿಎಫ್'ಸಿ ನಾಯಕ ವಿಶ್ವಾಸ ವ್ಯಕ್ತಪಡಿಸಿದರು.

ಎದುರಾಳಿಗೆ ಗೋಲು ಬಿಟ್ಟುಕೊಡದಿದ್ದರೆ ಸಾಕು...
ಸೆಮಿಫೈನಲ್ ಪಂದ್ಯವು ಎರಡು ಲೆಗ್'ಗಳಲ್ಲಿ ಆಡಲಾಗುತ್ತದೆ. ಆ ಎರಡು ಲೆಗ್'ಗಳಲ್ಲಿ ತಂಡಗಳು ಗಳಿಸುವ ಒಟ್ಟು ಗೋಲುಗಳ ಆಧಾರದ ಮೇಲೆ ಗೆಲುವನ್ನು ನಿರ್ಧರಿಸಲಾಗುತ್ತದೆ. ಯಾರು ಹೆಚ್ಚು ಗೋಲು ಗಳಿಸುತ್ತಾರೆ ಅವರು ವಿಜಯಶಾಲಿಯಾಗುತ್ತಾರೆ. ಆದರೆ ಒಂದು ವೇಳೆ ಎರಡೂ ತಂಡಗಳ ಗೋಲಿನ ಮೊತ್ತ ಸರಿಸಮವಾಗಿದ್ದಲ್ಲಿ ವಿದೇಶೀ ನೆಲದಲ್ಲಿ ಯಾರು ಹೆಚ್ಚು ಗೋಲು ಗಳಿಸಿರುತ್ತಾರೆ ಎಂಬ ಲೆಕ್ಕಾಚಾರದ ಮೇಲೆ ವಿಜೇತರನ್ನು ನಿರ್ಧರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮಲೇಷ್ಯಾದಲ್ಲಿ ನಡೆದ ಮೊದಲ ಲೆಗ್'ನಲ್ಲಿ ಒಂದು ಗೋಲು ಗಳಿಸಿದ್ದು ಬಿಎಫ್'ಸಿಗೆ ಅನುಕೂಲವಾಗಿದೆ. ಇಂದಿನ ಪಂದ್ಯದಲ್ಲಿ ಬಿಎಫ್'ಸಿ ಗೆದ್ದರೆ ನೇರ ಫೈನಲ್ ಪ್ರವೇಶಿಸುತ್ತದೆ. ಶೂನ್ಯ ಸ್ಕೋರಿನಲ್ಲಿ ಡ್ರಾ ಆದರೂ ಬಿಎಫ್'ಸಿಗೆ ಫೈನಲ್ ಪ್ರವೇಶದ ಭಾಗ್ಯವಿರುತ್ತದೆ. ಪಂದ್ಯವು 1-1ರಿಂದ ಡ್ರಾ ಆದರೆ ಶೂಟೌಟ್ ನಡೆಸಿ ವಿಜೇತರನ್ನು ನಿರ್ಧರಿಸಲಾಗುತ್ತದೆ. ಒಂದು ವೇಳೆ ಪಂದ್ಯವು 2-2ರಿಂದ ಡ್ರಾ ಆದರೆ ಮಲೇಷ್ಯಾದ ಜೊಹೊರ್ ತಂಡವು ವಿದೇಶೀ ನೆಲದಲ್ಲಿ ಹೆಚ್ಚು ಗೋಲು ಸ್ಕೋರ್ ಮಾಡಿದ ಸಾಧನೆಯೊಂದಿಗೆ ಫೈನಲ್ ತಲುಪುತ್ತದೆ.

ಪಂದ್ಯ ಆರಂಭ: ಸಂಜೆ 7.00
ಸ್ಥಳ: ಕಂಠೀರವ ಕ್ರೀಡಾಂಗಣ, ಬೆಂಗಳೂರು
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್

ಸ್ಟ್ಯಾಂಡ್‌ ದರ
ನಾರ್ತ್ ಅಪ್ಪ​ರ್‌: 40 ರೂಪಾಯಿ
ಈಸ್ಟ್‌ ಲೋವರ್‌-ಬಿ: 70 ರೂ.
ಈಸ್ಟ್‌ ಅಪ್ಪರ್‌- ಎ: 100 ರೂ.
ಹಾಸ್ಪಿ​ಟಾ​ಲಿಟಿ, ಕಾರ್ಪೋ​ರೇಟ್‌ ಬಾಕ್ಸ್‌: 1200 ರೂ.

(ಕನ್ನಡಪ್ರಭ ವಾರ್ತೆ)