ಬೆಂಗಳೂರಿನಿಂದ BFC ಎತ್ತಂಗಡಿ?
ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಫುಟ್ಬಾಲ್ ತಂಡ ಪುಣೆಯ ಬಾಲೆವಾಡಿ ಕ್ರೀಡಾಂಗಣವನ್ನು ತನ್ನ ತವರು ಕ್ರೀಡಾಂಗಣವಾಗಿ ಸ್ವೀಕರಿಸುತ್ತಿರುವುದಾಗಿ ಘೋಷಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬೆಂಗಳೂರು[ಸೆ.19]: ಮುಂಬರುವ ಋುತುವಿಗೆ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್‌ಸಿ) ಪುಣೆಯ ಬಾಲೆವಾಡಿ ಕ್ರೀಡಾಂಗಣವನ್ನು ತನ್ನ ತವರು ಕ್ರೀಡಾಂಗಣವಾಗಿ ಸ್ವೀಕರಿಸುತ್ತಿರುವುದಾಗಿ ಘೋಷಿಸಿದೆ. ಕಳೆದ 5-6 ವರ್ಷಗಳಿಂದ ತನ್ನ ಭದ್ರಕೋಟೆ ಎನಿಸಿದ್ದ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಮುಂದುವರಿಯಲು ಅನುಮತಿ ಸಿಗದ ಕಾರಣ ಬಿಎಫ್‌ಸಿ ಈ ನಿರ್ಧಾರಕ್ಕೆ ಬಂದಿದೆ.
ತಂಡ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ಕ್ಲಬ್ ಪರವಾನಗಿ ಮಾನದಂಡಗಳನ್ನು ಅನುಸರಿಸಬೇಕಿದೆ. ಅಕ್ಟೋಬರ್ 20ರಿಂದ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಆರಂಭಗೊಳ್ಳಲಿದ್ದು, ತಂಡ ತನ್ನ ತವರಿನ ಪಂದ್ಯಗಳನ್ನು ಪುಣೆಯಲ್ಲಿ ಆಡುವ ಸಾಧ್ಯತೆ ದಟ್ಟವಾಗಿದೆ.
ಕಂಠೀರವದಲ್ಲಿ ಫುಟ್ಬಾಲ್ ವಿರೋಧಿಸಿ ಪ್ರತಿಭಟನೆ
ಬೆಂಗಳೂರು ಎಫ್‌ಸಿ ತಂಡ ಎಎಫ್‌ಸಿ ಕಪ್‌ನಲ್ಲೂ ಪಾಲ್ಗೊಳ್ಳುವ ಕಾರಣ, ಸೆಪ್ಟೆಂಬರ್ 15ರೊಳಗೆ ತನ್ನ ತವರು ಪಂದ್ಯಗಳನ್ನು ಯಾವ ಕ್ರೀಡಾಂಗಣದಲ್ಲಿ ಆಡಲಿದೆ ಎನ್ನುವುದನ್ನು ನೋಂದಣಿ ಮಾಡಬೇಕಿತ್ತು. ಪುಣೆಯ ಬಾಲೆವಾಡಿ ಕ್ರೀಡಾಂಗಣ ಹಾಗೂ ಅಹಮದಾಬಾದ್ನ ಟ್ರ್ಯಾನ್ಸ್ ಸ್ಟೇಡಿಯಾ ಅರೇನಾ ಮಾತ್ರ ಲಭ್ಯವಿದ್ದ ಕಾರಣ, ಎಎಫ್‌ಸಿ ಮಾನದಂಡದಂತೆ ಪುಣೆಯನ್ನು ಆಯ್ಕೆ ಮಾಡಿಕೊಂಡಿದೆ.
ಬಿಎಫ್‌ಸಿ ತಂಡದ ಮಾಲಿಕರು, ಕಂಠೀರವ ಕ್ರೀಡಾಂಗಣ ಪಡೆಯಲು ಪ್ರಯತ್ನ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಎಎಫ್‌ಸಿ ಪಂದ್ಯಗಳಿಗೆ ಆತಿಥ್ಯ ವಹಿಸುವ ಸ್ಥಳಗಳನ್ನು ಬದಲಿಸಲು ಜನವರಿ ವರೆಗೂ ಅವಕಾಶವಿದೆ. ಬಿಎಫ್‌ಸಿ ತಂಡ ಬೆಂಗಳೂರಿನಿಂದ ಹೊರ ಹೋಗುತ್ತಿರುವುದಕ್ಕೆ ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳು ನಿರಾಸೆ ವ್ಯಕ್ತಪಡಿಸಿದ್ದಾರೆ.
ಕಂಠೀರವ ಕ್ರೀಡಾಂಗಣದಲ್ಲಿ ಫುಟ್ಬಾಲ್‌ಗೆ ಗ್ರೀನ್ ಸಿಗ್ನಲ್?
ಅಥ್ಲೆಟಿಕ್ಸ್ ಸಂಸ್ಥೆಗೆ ಯಶಸ್ಸು!: ಬಿಎಫ್‌ಸಿ ತಂಡ ಬೆಂಗಳೂರಿನಿಂದ ಹೊರಹೋಗಲು ನಿರ್ಧರಿಸಿರುವುದು, ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ (ಕೆಎಎ) ಸಂಸ್ಥೆಯ ಹೋರಾಟಕ್ಕೆ ಮೊದಲ ಜಯ ಸಿಕ್ಕಂತಾಗಿದೆ. ಕಂಠೀರವ ಕ್ರೀಡಾಂಗಣದಲ್ಲಿ ಫುಟ್ಬಾಲ್ ಸೇರಿದಂತೆ ಇತರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಕೆಎಎ ಇತ್ತೀಚೆಗೆ ಪ್ರತಿಭಟನೆ ಸಹ ನಡೆಸಿತ್ತು. ಕಳೆದ ವರ್ಷ ಈ ಪ್ರಕರಣ ಹೈಕೋರ್ಟ್ ಮೆಟ್ಟಿಲ್ಲೇರಿತ್ತು. ಕಂಠೀರವದಲ್ಲಿ ಫುಟ್ಬಾಲ್ ನಡೆಸಿದರೆ ಅಥ್ಲೀಟ್‌ಗಳ ಅಭ್ಯಾಸಕ್ಕೆ ತೊಂದರೆಯಾಗಲಿದೆ ಎಂದು ಹೋರಾಟ ನಡೆಸಿತ್ತು.