ಬೆಂಗಳೂರು(ಮೇ.17): ಕಂಠೀರವ ಕ್ರೀಡಾಂಗಣದಲ್ಲಿನ ಸಿಂಥೆಟಿಕ್‌ ಅಥ್ಲೆಟಿಕ್‌ ಟ್ರ್ಯಾಕ್‌ ನಿರ್ವಹಣೆಯಲ್ಲಿ ಸೋತಿರುವ ರಾಜ್ಯ ಕ್ರೀಡಾ ಇಲಾಖೆ, ಕ್ರೀಡಾಂಗಣವನ್ನು ನಿರ್ವಹಣೆ ಮಾಡುತ್ತಿರುವ ರೀತಿ ಆಘಾತ ಮೂಡಿಸಿದೆ. ಅಥ್ಲೆಟಿಕ್ಸ್‌ ಟ್ರ್ಯಾಕ್‌ ಗುಂಡಿ ಬಿದ್ದಿರುವುದೇಕೆ ಎನ್ನುವುದನ್ನು ತಿಳಿಯಲು ‘ಕನ್ನಡಪ್ರಭ’ ಇಲಾಖೆಯ ಅಧಿಕಾರಿಗಳ ಬೆನ್ನತ್ತಿದಾಗ ಹಲವು ವಿಚಾರಗಳು ಬೆಳಕಿಗೆ ಬರುತ್ತಿವೆ.

ಟ್ರ್ಯಾಕ್‌ ನಿರ್ವಹಣೆ ಇರಲಿ, ಕ್ರೀಡಾಂಗಣದ ವಿದ್ಯುತ್‌, ನೀರಿನ ಬಿಲ್‌, ಸ್ವಚ್ಛತೆ, ರಕ್ಷಣಾ ಸಿಬ್ಬಂದಿ ಹಾಗೂ ಇನ್ನಿತರ ಸಿಬ್ಬಂದಿಗಳ ವೇತನಕ್ಕೆ ಬೇಕಿರುವ ಹಣವನ್ನು‘ಕ್ರೀಡಾಂಗಣವೇ ದುಡಿಯಬೇಕಿದೆ’!.

ಹೌದು, ಕಂಠೀರವ ಕ್ರೀಡಾಂಗಣ ಸೇರಿ ಬೆಂಗಳೂರಿನಲ್ಲಿರುವ ನಾಲ್ಕು ಪ್ರಮುಖ ಕ್ರೀಡಾಂಗಣಗಳಾದ ಹಾಕಿ ಕ್ರೀಡಾಂಗಣ, ಫುಟ್ಬಾಲ್‌ ಕ್ರೀಡಾಂಗಣ ಹಾಗೂ ಕೋರಮಂಗಲ ಒಳಾಂಗಣ ಕ್ರೀಡಾಂಗಣದ ನಿರ್ವಹಣೆಯನ್ನು ಸರ್ಕಾರ ನಡೆಸುತ್ತಿರುವ ರೀತಿ ಅಚ್ಚರಿಗೆ ಕಾರಣವಾಗಿದೆ.

ಎಲ್ಲದ್ದಕ್ಕೂ ಕಂಠೀರವವೇ ಬೇಕು!: ಸರ್ಕಾರ ಮಹತ್ವದ ಸಮಾರಂಭಗಳಿಗೆ ಕ್ರೀಡಾಂಗಣ ಬಳಕೆಯಾಗುತ್ತದೆ. ಗಣ್ಯ ವ್ಯಕ್ತಿಗಳು ನಿಧನರಾದಾಗ ಅವರ ಪಾರ್ಥೀವ ಶರೀರವನ್ನು ಕ್ರೀಡಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುತ್ತದೆ. ಶಾಲಾ, ಕಾಲೇಜು ಕ್ರೀಡಾಕೂಟ, ಖಾಸಗಿ ಮ್ಯಾರಥಾನ್‌, ಫುಟ್ಬಾಲ್‌ ಪಂದ್ಯಾವಳಿ, ಸಿನಿಮಾ ಇಲ್ಲವೇ ಹಾಡಿನ ಚಿತ್ರೀಕರಣ, ಇತರೆ ದೊಡ್ಡ ದೊಡ್ಡ ಸಮಾರಂಭಗಳಿಗೆ ಕ್ರೀಡಾಂಗಣವನ್ನು ಉಪಯೋಗಿಸಲಾಗುತ್ತದೆ. ಒಂದು ದಿನಕ್ಕೆ ಇಷ್ಟುಬಾಡಿಗೆ ಎಂದು ನಿಗದಿ ಪಡಿಸಲಾಗಿದ್ದು, ಬಾಡಿಗೆ ಹಣದಿಂದ ಕ್ರೀಡಾಂಗಣದ ನಿರ್ವಹಣೆ ನಡೆಸಲಾಗುತ್ತಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಅಥ್ಲೀಟ್‌ಗಳ ಅಭ್ಯಾಸಕ್ಕೆ ಬೆಂಗಳೂರಿನ ಹೃದಯ ಭಾಗದಲ್ಲಿ ಇರುವ ಏಕೈಕ ಕ್ರೀಡಾಂಗಣ ಎನಿಸಿರುವ ಕಂಠೀರವದಲ್ಲಿ ಅಥ್ಲೀಟ್‌ಗಳಿಗೇ ಜಾಗವಿಲ್ಲದಂತಾಗಿದೆ.

ತಲೆಕೆಡಿಸಿಕೊಳ್ಳದ ಸರ್ಕಾರ!

‘ಕನ್ನಡಪ್ರಭ’ ಕಂಠೀರವ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ ಹಾಳಾಗಿರುವ, ಅಥ್ಲೀಟ್‌ಗಳಿಗೆ ಆಗುತ್ತಿರುವ ಸಮಸ್ಯೆ ಕುರಿತು ಸರಣಿ ವರದಿ ಮಾಡುತ್ತಿದ್ದರೂ ರಾಜ್ಯ ಕ್ರೀಡಾ ಇಲಾಖೆ ಹಿರಿಯ ಅಧಿಕಾರಿಗಳು ಸ್ವಲ್ಪವೂ ತಲೆಕೆಡಿಸಿಕೊಂಡಿಲ್ಲ. ದುರಸ್ತಿ ವಿಚಾರದ ಬಗ್ಗೆ ವಿಚಾರಿಸಲು ಸಂಪರ್ಕಿಸಿಲು ಪ್ರಯತ್ನಿಸಿದರೂ ಅಧಿಕಾರಿಗಳು ಸಿಗುತ್ತಿಲ್ಲ. ಹಿರಿಯ ಅಥ್ಲೀಟ್‌ಗಳು, ಖ್ಯಾತ ಕೋಚ್‌ಗಳು, ಮಾಜಿ ಕ್ರೀಡಾಪಟುಗಳು ಗೋಗರೆಯುತ್ತಿದ್ದರೂ ಕ್ರೀಡಾಂಗಣವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ.

ಕಂಠೀರವ ಕ್ರೀಡಾಂಗಣದ ಪ್ರತಿ ತಿಂಗಳ ಖರ್ಚಿಗೆ ರಾಜ್ಯ ಸರ್ಕಾರ ಯಾವುದೇ ಹಣ ನೀಡುವುದಿಲ್ಲ. ಹೀಗಾಗಿ ಕ್ರೀಡಾಂಗಣವನ್ನು ಖಾಸಗಿ ಕ್ರೀಡಾಕೂಟಗಳನ್ನು ನಡೆಸಲು ಬಾಡಿಗೆ ನೀಡಲಾಗುವುದು. ಇದರಿಂದ ಬಂದ ಹಣವನ್ನು ಕ್ರೀಡಾಂಗಣದ ಖರ್ಚು, ವೆಚ್ಚಗಳಿಗೆ ಬಳಸಲಾಗುತ್ತಿದೆ.

- ಹೆಸರು ಹೇಳಲಿಚ್ಚಿಸದ ಕ್ರೀಡಾ ಇಲಾಖೆ ಅಧಿಕಾರಿ

ಕ್ರೀಡಾಂಗಣವನ್ನು ಖಾಸಗಿ ಸಂಸ್ಥೆಗಳ ಕ್ರೀಡಾಕೂಟಗಳಿಗೆ ಮಾತ್ರ ಬಳಸುತ್ತಾರೆ. ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದಾಗಿ ಸಾಕಷ್ಟುಜಾವೆಲಿನ್‌ ಥ್ರೋ ಪಟುಗಳು ಕ್ರೀಡೆಯನ್ನು ತೊರೆದಿದ್ದಾರೆ. ರಾಜ್ಯ, ರಾಷ್ಟ್ರೀಯ ಕೂಟಗಳಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಅಥ್ಲೀಟ್‌ಗಳು ಅಭ್ಯಾಸ ನಡೆಸಲು ಪ್ರತಿದಿನ ಕಷ್ಟಅನುಭವಿಸುತ್ತಿದ್ದಾರೆ.

- ರಮೇಶ್‌, ಅಥ್ಲೆಟಿಕ್ಸ್‌ ತರಬೇತುದಾರ

ವರದಿ: ಧನಂಜಯ ಎಸ್‌.ಹಕಾರಿ, ಕನ್ನಡಪ್ರಭ

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.