ಕೊನೆ ಕ್ಷಣದಲ್ಲಿ ತವರಿನ ಪ್ರೇಕ್ಷಕರ ಬೆಂಬಲದೊಂದಿಗೆ ಎಚ್ಚೆತ್ತುಕೊಂಡ ವಾರಿಯರ್ಸ್ ಪಡೆ ಪಾಟ್ನಾಗೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಯಿತು.

ಕೋಲ್ಕತಾ(ಸೆ.01): ತೀವ್ರ ಜಿದ್ದಾಜಿದ್ದನಿಂದ ಕೂಡಿದ್ದ ಬೆಂಗಾಲ್ ವಾರಿಯರ್ಸ್ ಹಾಗೂ ಪಾಟ್ನಾ ಪೈರೇಟ್ಸ್ ನಡುವಿನ ಪಂದ್ಯದಲ್ಲಿ ಅಂತಿಮವಾಗಿ ಬೆಂಗಾಲ್ ವಾರಿಯರ್ಸ್ ತಂಡವು 41-38 ಅಂಕಗಳ ಅಂತರದಿಂದ ರೋಚಕ ಜಯ ಸಾಧಿಸಿದೆ.

ಇಲ್ಲಿನ ಸುಭಾಶ್‌'ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಾಲ್ ಸಂಘಟಿತ ಪ್ರದರ್ಶನ ತೋರಿತು. ಮೊದಲ ರೈಡಿಂಗ್‌'ನಲ್ಲೇ ಪರ್'ದೀಪ್ ನರ್ವಲ್‌ ಅಂಕಗಳಿಸುವ ಮೂಲಕ ಪಾಟ್ನಾ ಖಾತೆ ತೆರೆದರು. ಬೆಂಗಾಲ್ ಪರ ಜಾನ್ ಕುನ್ ಲೀ ಮೊದಲ ಅಂಕ ಗಳಿಸಿದರು. ಮೊದಲಾರ್ಧದ ಮುಕ್ತಾಯಕ್ಕೆ ಪಾಟ್ನಾ 18-14 ಅಂಕಗಳ ಮುನ್ನಡೆ ಪಡೆದಿತ್ತು.

ದ್ವಿತೀಯಾರ್ಧದ ಆರಂಭದಿಂದಲೇ ಪಾಟ್ನಾ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ದ್ವಿತೀಯಾರ್ಧದ 13ನೇ ನಿಮಿಷದಲ್ಲಿ ಬೆಂಗಾಲ್ ಮತ್ತೆ ಆಲೌಟ್ ಆಯಿತು. ಒಂದು ಹಂತದಲ್ಲಿ ಪಾಟ್ನಾ 34-25 ಅಂಕಗಳ ಮುನ್ನಡೆಯೊಂದಿಗೆ ಜಯದತ್ತ ದಾಪುಗಾಲುಯಿಟ್ಟಿತ್ತು. ಆದರೆ ಕೊನೆ ಕ್ಷಣದಲ್ಲಿ ತವರಿನ ಪ್ರೇಕ್ಷಕರ ಬೆಂಬಲದೊಂದಿಗೆ ಎಚ್ಚೆತ್ತುಕೊಂಡ ವಾರಿಯರ್ಸ್ ಪಡೆ ಪಾಟ್ನಾಗೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಯಿತು. ಮಣೀಂದರ್ ಸಿಂಗ್ 38ನೇ ನಿಮಿಷದಲ್ಲಿ ಸೂಪರ್'ರೈಡ್ ಮೂಲಕ 3 ಅಂಕ ಪಡೆದು ಪಾಟ್ನಾ ಆಲೌಟ್ ಆಗಲು ಕಾರಣರಾದರು. ಇದರೊಂದಿಗೆ ಬೆಂಗಾಲ್ 38-38ರಲ್ಲಿ ಸಮಬಲ ಸಾಧಿಸಿತು. ಆ ಬಳಿಕ ಡಿಫೆನ್ಸ್ ವಿಭಾಗದಲ್ಲಿ ಮತ್ತೆರಡು ಅಂಕ ಪಡೆದ ಬೆಂಗಾಲ್ ವಾರಿಯರ್ಸ್ ತವರಿನ ಅಭಿಮಾನಿಗಳಿಗೆ ಗೆಲುವಿನ ಸಿಹಿ ಉಣಬಡಿಸಿತು.