ಭೀಕರ ಪ್ರವಾಹದಲ್ಲಿ ಈಜಿ, ಬೆಂಗಳೂರಲ್ಲಿ ಬೆಳ್ಳಿ ಗೆದ್ದ ಬಾಕ್ಸರ್ !
ಪ್ರವಾಹದಲ್ಲಿ ಜೀವ ಉಳಿಸಿಕೊಂಡರೆ ಸಾಕು ಅನ್ನೋ ಪರಿಸ್ಥಿತಿ ನಿರ್ಮಾಣವಾಗುವುದು ಸಹಜ. ಕಾರಣ ಬೇರೆ ಯಾವ ದಾರಿಯೂ ಪ್ರವಾಹಕ್ಕೆ ಸಿಕ್ಕವರ ಮುಂದೆ ಇರೋದಿಲ್ಲ. ಆದರೆ ಬೆಳಗಾವಿ ಯುವ ಬಾಕ್ಸರ್ ನಿಶಾನ್ ಮನೋಹರ್ ಕದಮ್ ಮಾತ್ರ ಭಿನ್ನ. ಪ್ರವಾಹದಲ್ಲಿ 45 ನಿಮಿಷ ಈಜಿ ಬೆಂಗಳೂರಿಗೆ ಆಗಮಿಸಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಬೆಂಗಳೂರು(ಆ.12): ಭೀಕರ ಪ್ರವಾಹಕ್ಕೆ ಕರ್ನಾಟಕ ಅಕ್ಷರಶಃ ನಲುಗಿದೆ. ಉತ್ತರ ಕರ್ನಾಟಕ, ಕರಾವಳಿ, ಕೊಡಗು ಸೇರಿದಂತೆ ಕರ್ನಾಟಕದ ಬಹುತೇಕ ಭಾಗಗಳು ಪ್ರವಾಹದಲ್ಲಿ ಮುಳುಗಿವೆ. ಸಾವಿನ ಸಂಖ್ಯೆ ಏರುತ್ತಿದೆ. ಮನೆ ಮಠ ಕಳೆದುಕೊಂಡವರ ಅಳಲು ಹೇಳ ತೀರದು. ಜೀವ ಉಳಿಸಿಕೊಂಡರೆ ಸಾಕು ಅನ್ನೋದು ಪ್ರವಾಹಕ್ಕೆ ಸಿಕ್ಕವರ ಪರಿಸ್ಥಿತಿ. ಆದರೆ ಇದೇ ರಣಭೀಕರ ಪ್ರವಾಹದಲ್ಲಿ ಈಜಿ ಬೆಂಗಳೂರಿಗೆ ಬಂದು ಬೆಳ್ಳಿ ಗೆದ್ದ ಯುವ ಬಾಕ್ಸರ್ ರೋಚಕ ಕತೆ ಎಲ್ಲರಿಗೂ ಸ್ಫೂರ್ತಿಯಾಗಿದೆ.
ಪ್ರವಾಹದಲ್ಲಿ ಈಜಿ ಬಾಕ್ಸಿಂಗ್‌ನಲ್ಲಿ ಬೆಳ್ಳಿ ಗೆದ್ದ ಸಾಧಕ ,ಬೆಳಗಾವಿಯ 19 ವರ್ಷದ ಯುವ ಬಾಕ್ಸರ್ ನಿಶಾನ್ ಮನೋಹರ್ ಕದಮ್. ಬೆಳಗಾವಿ ಪ್ರವಾಹಕ್ಕೆ ತುತ್ತಾಗಿದೆ. ಹಲವರನ್ನು NDRF ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಇಷ್ಟಾದರು ಇನ್ನೂ ಹಲವು ಗ್ರಾಮಗಳಲ್ಲಿ ನಿವಾಸಿಗಳು ಜೀವ ಕೈಯಲ್ಲಿ ಹಿಡಿದು ಬದುಕುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ನಿಶಾನ್ ಮನೋಹರ್ ಪ್ರವಾಹದಲ್ಲಿ ಬರೋಬ್ಬರಿ 2.5 ಕಿ.ಮೀ ದೂರ ಈಜಿ, ಬೆಂಗಳೂರಿಗೆ ಬಂದು ಬಾಕ್ಸಿಂಗ್‌ನಲ್ಲಿ ಸಾಧನೆ ಮಾಡಿದ್ದಾನೆ.
"
ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಟೂರ್ನಿ ಆಯೋಜಿಸಲಾಗಿತ್ತು. ಇದಕ್ಕಾಗಿ ಕಳೆದೆರಡು ವರ್ಷದಿಂದ ಯುವ ಬಾಕ್ಸರ್ ನಿಶಾನ್ ಮನೋಹರ್ ಅಭ್ಯಾಸ ಮಾಡಿದ್ದಾನೆ. ರೈತನ ಮಗನಾಗಿರುವ ನಿಶಾನ್ ಕಡು ಬಡತನದಲ್ಲೇ ಬೆಳೆದ ಪ್ರತಿಭಾವಂತ.
ಬಾಕ್ಸಿಂಗ್‍ನಲ್ಲಿ ಸಾಧನೆ ಮಾಡಲು ನಿರ್ಧರಿಸಿರುವ ನಿಶಾನ್‌ಗೆ ಬೆಂಗಳೂರಿನ ಬಾಕ್ಸಿಂಗ್ ಟೂರ್ನಿಯಲ್ಲಿ ಪಾಲ್ಗೊಳ್ಳಲೇಬೇಕಿತ್ತು. ಆದರೆ ಮನೆಯಿಂದ ರೈಲು ನಿಲ್ದಾಣಕ್ಕೆ ಬರಲು ಯಾವುದೇ ಮಾರ್ಗವಿರಲಿಲ್ಲ. ಎಲ್ಲಾ ದಾರಿಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು. ಇಷ್ಟೇ ಅಲ್ಲ ನೀರಿನಿಂದ ಮುಳುಗಡೆಯಾಗಿತ್ತು.
ಪ್ರವಾಹದಿಂದ ಅಭ್ಯಾಸ ಕೂಡ ಮಾಡದ ನಿಶಾನ್ ಮುಂದೆ ಯಾವ ಆಯ್ಕೆಯೂ ಇರಲಿಲ್ಲ. ತಂದೆಯ ಜೊತೆ ಗಟ್ಟಿ ನಿರ್ಧಾರ ಮಾಡಿದ ನಿಶಾನ್ ತನ್ನ ಬಾಕ್ಸಿಂಗ್ ಕಿಟ್ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಬೆನ್ನಿಗೆ ಕಟ್ಟಿಕೊಂಡ. ತಂದೆ ಹಾಗೂ ನಿಶಾನ್ ರಭಸದಿಂದ ಹರಿಯುತ್ತಿರುವ ಪ್ರವಾಹದ ನೀರಿನಲ್ಲಿ 45 ನಿಮಿಷಗಳ ಕಾಲ 2.5 ಕಿ.ಮೀ ದೂರ ಈಜಿ, ರೈಲು ನಿಲ್ದಾಣ ಸೇರಿಕೊಂಡಿದ್ದಾನೆ. ಬಳಿಕ ಬೆಂಗಳೂರಿಗೆ ರೈಲು ಹತ್ತಿ ನೇರವಾಗಿ ಬಾಕ್ಸಿಂಗ್ ರಿಂಗ್‌ಗೆ ಇಳಿದಿದ್ದಾನೆ.
ಒಂದೆಡೆ ನಿದ್ದೆ ಇಲ್ಲ, ಪ್ರವಾಹದಲ್ಲಿ ಈಜಿದ ಆಯಾಸ, ಪ್ರಯಾಣ ಎಲ್ಲರದ ನಡುವೆ ನಿಶಾನ್, ಅತ್ಯುತ್ತಮ ಹೋರಾಟ ನೀಡೋ ಮೂಲಕ ಬೆಳ್ಳಿ ಪದಕ ಗೆದ್ದಿದ್ದಾನೆ. ಪ್ರವಾಹದಲ್ಲಿ ಈಜುವುದನ್ನು ಬಿಟ್ಟು ನನ್ನ ಮುಂದೆ ಬೇರೆ ಆಯ್ಕೆ ಇರಲಿಲ್ಲ. ಈ ವರ್ಷದ ಪ್ರದರ್ಶನ ತೃಪ್ತಿ ತಂದಿದೆ. ಮತ್ತಷ್ಟು ಉತ್ತಮ ಅಭ್ಯಾಸ ಮಾಡೋ ಮೂಲಕ ಚಿನ್ನ ಗೆಲ್ಲುವ ವಿಶ್ವಾಸವಿದೆ ಎಂದು ನಿಶಾನ್ ಹೇಳಿದ್ದಾರೆ.
ಅರ್ಜುನ ಪ್ರಶಸ್ತಿ ವಿಜೇತ ಕೇಲ್ಕರ್ ಮಾರ್ಗದರ್ಶನದಲ್ಲಿ ನಿಶಾನ್ ಅಭ್ಯಾಸ ಮಾಡುತ್ತಿದ್ದಾರೆ. ನಿಶಾನ್ ಪ್ರತಿಭೆಗೆ ಕರ್ನಾಟಕ ಬಾಕ್ಸಿಂಗ್ ಫೆಡರೇಶನ್ ಅಧ್ಯಕ್ಷ ಮಂಜೇಗೌಡ, ಕಾರ್ಯದರ್ಶಿ ಸಾಯಿ ಸತೀಶ್ ಕೂಡ ಪ್ರೋತ್ಸಾಹ ನೀಡಿದ್ದಾರೆ.