ಮುಂಬೈ(ಜು.27): ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ ಒಂದಲ್ಲಾ ಒಂದು ಸಂಕಷ್ಟ ಎದುರಾಗುತ್ತಿದೆ. ಕಳೆದೊಂದು ವರ್ಷದಿಂದ ಕೌಟುಂಬಿಕ ಸಮಸ್ಯೆಯಿಂದ ಬಸವಳಿದ ಮೊಹಮ್ಮದ್ ಶಮಿ, ಪೊಲೀಸ್ ಠಾಣೆ, ಕೋರ್ಟ್ ಅಲೆದಾಡಿದ್ದಾರೆ. ಇದರ ನಡುವೆ ಟೀಂ ಇಂಡಿಯಾ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ. ಪತ್ನಿ ಹಸಿನ್ ಜಹಾನ್ ಆರೋಪದಿಂದ ಹೈರಾಣಾಗಿರುವ ಬೆನ್ನಲ್ಲೇ ಇದೀಗ ಅವರಿಗೆ ವೀಸಾ ಸಮಸ್ಯೆ ಇನ್ನಿಲ್ಲದ ತಲೆನೋವು ತಂದಿದೆ. ಆದರೆ ಬಿಸಿಸಿಐ ಮಧ್ಯ ಪ್ರವೇಶದಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

ಇದನ್ನೂ ಓದಿ: ವಿಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾ ಆಯ್ಕೆ: 3 ಮಾದರಿಗೂ ಕೊಹ್ಲಿಯೇ ನಾಯಕ

ವೆಸ್ಟ್ ಇಂಡೀಸ್ ಸರಣಿಗೆ ಆಯ್ಕೆಯಾಗಿರುವ ಮೊಹಮ್ಮದ್ ಶಮಿಗೆ ಅಮೆರಿಕಾ ವೀಸಾ ನಿರಾಕರಿಸಲಾಗಿತ್ತು. ಮೊಹಮ್ಮದ್ ಶಮಿ ಮೇಲೆ ಪತ್ನಿ ನೀಡಿರುವ ಪ್ರಕರಣಗಳು ಸದ್ಯ ಕೋರ್ಟ್‌ನಲ್ಲಿದೆ. ಕೋಲ್ಕತಾ ಪೊಲೀಸರು ಶಮಿ ವಿರುದ್ದ 498A(ವರದಕ್ಷಿಣೆ ಕಿರುಕುಳ) ಹಾಗೂ  354A (ಲೈಂಗಿಕ ಕಿರುಕುಳ) ಕೇಸ್ ದಾಖಲಿಸಿದ್ದಾರೆ. ಹೀಗಾಗಿ ಮಾರ್ಚ್ 2018ರಿಂದ ಶಮಿ ಪಾಸ್‌ಪೋರ್ಟ್ ಪೊಲೀಸ್ ವೆರಿಫಿಕೇಷನ್ ಆಗಿಲ್ಲ. ಶಮಿ ಮೇಲಿನ ಕೇಸ್ ಹಾಗೂ ಟ್ರ್ಯಾಕ್‌ ರೆಕಾರ್ಡ್‌ನಿಂದ ಅಮೆರಿಕ ವೀಸಾ ನಿರಾಕರಿಸಿತ್ತು.

ಇದನ್ನೂ ಓದಿ: ಬೌಲಿಂಗ್ ಕೋಚ್ ಅರುಣ್‌ ಸ್ಥಾನ ಗಟ್ಟಿ, ಬಾಂಗರ್‌ಗೆ ಸಂಕಷ್ಟ?

ತಕ್ಷಣವೇ ನೆರವಿಗೆ ಧಾವಿಸಿದ ಬಿಸಿಸಿಐ, ಅಮೆರಿಕಗೆ ಸೂಕ್ತ ದಾಖಲೆಗಳನ್ನು ಒದಗಿಸಿದ್ದಾರೆ. ಇಷ್ಟೇ ಅಲ್ಲ ಶಮಿ ಸಾಧನೆಗಳನ್ನು ಮನದಟ್ಟು ಮಾಡಿದ್ದಾರೆ. ತಂಡದ ಪ್ರಮುಖ ವೇಗಿಯಾಗಿರುವ ಶಮಿ ಉಪಸ್ಥಿತಿ ಕುರಿತು ಅಮೆರಿಕಗೆ ಮನದಟ್ಟು ಮಾಡಿದ್ದಾರೆ. ಬಿಸಿಸಿಐ ಮಧ್ಯ ಪ್ರವೇಶದಿಂದ ಅಮೆರಿಕವೀಗ ಶಮಿಗೆ ವೀಸಾ ನೀಡಿದೆ. 

ಇದನ್ನೂ ಓದಿ:ಭಾರತ ಎದುರಿನ ಏಕದಿನ ಸರಣಿಗೆ ವೆಸ್ಟ್ ಇಂಡೀಸ್ ತಂಡ ಪ್ರಕಟ

ಆಗಸ್ಟ್ 3ರಿಂದ ವೆಸ್ಟ್ ಇಂಡೀಸ್ ವಿರುದ್ದದ ಸರಣಿ ಆರಂಭವಾಗಲಿದೆ. ಭಾರತ ತಲಾ ಮೂರು ಟಿ20, ಏಕದಿನ ಹಾಗೂ 2 ಟೆಸ್ಟ್ ಪಂದ್ಯದ ಸರಣಿ ಆಡಲಿದೆ. ಆರಂಭಿಕ ಎರಡು ಟಿ20 ಪಂದ್ಯಗಳು ಅಮೆರಿಕದ ಫ್ಲೋರಿಡಾದಲ್ಲಿ ನಡೆಯಲಿದೆ. ಬಳಿಕ ವೆಸ್ಟ್ ಇಂಡೀಸ್‌ಗೆ ತೆರಳಲಿದೆ. ಹೀಗಾಗಿ ಟೀಂ ಇಂಡಿಯಾ ಆರಂಭದಲ್ಲಿ ಅಮೆರಿಕಗೆ ಪ್ರಯಾಣ ಬೆಳೆಸಲಿದೆ.