ನವದೆಹಲಿ(ಜು.20): ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ಕ್ರಿಕೆಟ್ ತಂಡದ ಆಯ್ಕೆಯನ್ನು ಭಾನುವಾರ (ಜು.21) ಮುಂಬೈನಲ್ಲಿ ನಡೆಸಲಾಗುವುದು ಎಂದು ಶುಕ್ರವಾರ ಬಿಸಿಸಿಐ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. 

ಸುಮಾರು ಒಂದು ತಿಂಗಳುಗಳ ಕಾಲ ನಡೆಯಲಿರುವ ವಿಂಡೀಸ್ ಪ್ರವಾಸ ಆಗಸ್ಟ್ 3 ರಿಂದ ಸೆಪ್ಟೆಂಬರ್ 3ಕ್ಕೆ ಕೊನೆಗೊಳ್ಳಲಿದೆ. ಈ ವೇಳೆ ಭಾರತ ತಂಡ, ವಿಂಡೀಸ್ ವಿರುದ್ಧ 3 ಟಿ20, 3 ಏಕದಿನ ಹಾಗೂ 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ. 

ವಿಂಡೀಸ್‌ಗೆ ಭಾರತ ತಂಡದ ಆಯ್ಕೆ ಮುಂದಕ್ಕೆ..!

3 ಮಾದರಿಗೂ ಕೊಹ್ಲಿಯೇ ನಾಯಕ:

ಶುಕ್ರವಾರ ನಡೆಯಬೇಕಿದ್ದ ಭಾರತದ ಆಯ್ಕೆ ಪ್ರಕ್ರಿಯೆ ಸಭೆಯನ್ನು ಗುರುವಾರ ಹಠಾತ್ತನೆ ಮುಂದೂಡಿ ಶನಿವಾರ ಅಥವಾ ಭಾನುವಾರ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿತ್ತು. ಏಕದಿನ ವಿಶ್ವಕಪ್‌ಗೆ ತೆರೆ ಬಿದ್ದ ಬೆನ್ನಲ್ಲೇ ಭಾರತ ತಂಡದ ನಾಯಕತ್ವದ ಬಗ್ಗೆ ಸಾಕಷ್ಟು ಚರ್ಚೆಗಳು ಆರಂಭಗೊಂಡಿದ್ದು, ನಾಯಕತ್ವ ವಿಭಜನೆ ಮುನ್ನಲೆಗೆ ಬಂದಿತ್ತು. ಆದರೆ, ಇದೀಗ ಈ ಊಹಾಪೋಹಗಳಿಗೆ ತೆರೆಬಿದ್ದಿದ್ದು, ಎಲ್ಲಾ ಮಾದರಿಯಲ್ಲೂ ವಿರಾಟ್ ಕೊಹ್ಲಿಯೇ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ವರದಿಗಳು ತಿಳಿಸಿವೆ. 

ಟೆಸ್ಟ್‌ಗೆ ಕೊಹ್ಲಿ, ಸೀಮಿತ ಓವರ್‌ಗಳಿಗೆ ರೋಹಿತ್ ತಂಡವನ್ನು ಮುನ್ನಡೆಸಲಿದ್ದಾರೆ ಎನ್ನಲಾಗಿತ್ತು. ಭಾರತದ ಹವಾಗುಣಕ್ಕೆ ನಾಯಕತ್ವ ವಿಭಜನೆ ಹೊಂದುವುದಿಲ್ಲ ಎಂದು ವರದಿಗಳು ಹೇಳಿವೆ.