ಮುಂಬೈ(ಆ.20): ಬಿಸಿಸಿಐ ವಿರುದ್ಧ ಕಾನೂನು ಸಮರಕ್ಕಿಳಿದಿದ್ದ ವಿವಾದಿತ ವೇಗಿ ಎಸ್ ಶ್ರೀಶಾಂತ್‌ಗೆ ಬಿಗ್ ರಿಲೀಫ್ ಸಿಕ್ಕಿದೆ. 2013ರ ಐಪಿಎಲ್ ಸ್ಫಾಟ್ ಫಿಕ್ಸಿಂಗ್ ಪ್ರಕರಣದಿಂದ ಶ್ರೀಶಾಂತ್‌ಗೆ, ಬಿಸಿಸಿಐ ಅಜೀವ ನಿಷೇಧದ ಶಿಕ್ಷೆ ನೀಡಿತ್ತು. ಪಟಿಯಾಲ ಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಶ್ರೀಶಾಂತ್ ಮೇಲಿನ ಪ್ರಕರಣ ಖುಲಾಸೆಗೊಳಿಸಿದರೂ, ಬಿಸಿಸಿಐ ಮಾತ್ರ ಆಜೀವ ನಿಷೇಧ ಶಿಕ್ಷೆ ರದ್ದು ಮಾಡಿರಲಿಲ್ಲ. ಇದೀಗ ಬಿಸಿಸಿಐ ಶ್ರೀಶಾಂತ್ ಮೇಲಿನ ನಿಷೇಧ ಕಡಿತಗೊಳಿಸಿದೆ.

ಇದನ್ನೂ ಓದಿ: ದ್ರಾವಿಡ್‌ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರಂತೆ ಶ್ರೀಶಾಂತ್‌!

ಶ್ರೀಶಾಂತ್ ಮೇಲಿನ ಆಜೀವ ನಿಷೇಧದ ಶಿಕ್ಷೆಯನ್ನು ಇದೀಗ 7 ವರ್ಷಕ್ಕೆ ಇಳಿಸಲಾಗಿದೆ. ಈಗಾಗಲೇ ಶ್ರೀಶಾಂತ್ 6 ವರ್ಷ ಪೂರೈಸಿದ್ದಾರೆ. 2020ರ ಆಗಸ್ಟ್ ವೇಳೆಗೆ ಶ್ರೀಶಾಂತ್ ನಿಷೇಧದಿಂದ ಮುಕ್ತರಾಗಲಿದ್ದಾರೆ ಎಂದು BCCI ಒಂಬಡ್ಸಮನ್ ಡಿಕೆ ಜೈನ್ ಪ್ರಕಟಣೆ ಹೊರಡಿಸಿದ್ದಾರೆ. ಮುಂದಿನ ವರ್ಷ ಶ್ರೀಶಾಂತ್ ಕ್ರಿಕೆಟ್ ಆಡಲು ಅವಕಾಶವಿದೆ ಎಂದಿದ್ದಾರೆ.

ಇದನ್ನೂ ಓದಿ: ಪೇಸ್ 42ರಲ್ಲಿ ಗ್ರ್ಯಾಂಡ್ ಸ್ಲಾಂ ಗೆಲ್ಲೋದಾದ್ರೆ ನಾನ್ಯಾಕೆ ಕ್ರಿಕೆಟ್ ಆಡಬಾರದು: ಶ್ರೀಶಾಂತ್!

13-09-2013ರಲ್ಲಿ ಶ್ರೀಶಾಂತ್ ಮೇಲೆ ಅಜೀವ ನಿಷೇಧ ಶಿಕ್ಷೆ ವಿಧಿಸಲಾಗಿತ್ತು. ಶ್ರೀಶಾಂತ್ ಜೊತೆ ರಾಜಸ್ಥಾನ ರಾಯಲ್ಸ್ ಆಟಗಾರರಾದ ಅಜಿತ್ ಚಂಡೀಲಾ ಹಾಗೂ ಅಂಕಿತ್ ಚವ್ಹಾಣ್ ಮೇಲೂ ಅಜೀವ ನಿಷೇಧ ಹೇರಲಾಗಿತ್ತು. ಆದರೆ ಫಿಕ್ಸಿಂಗ್ ನಡೆಸಿದ ಕುರಿತು ಯಾವುದೇ ಸಾಕ್ಷಿ ಇಲ್ಲದ ಕಾರಣ ಕೋರ್ಟ್ ಶ್ರೀಶಾಂತ್ ಮೇಲಿನ ಆರೋಪಗಳನ್ನು ತಳ್ಳಿಹಾಕಿತು. ಅಲ್ಲದೆ ಕೇಸ್‌ನಿಂದ ಮುಕ್ತಗೊಳಿಸಿತು. ಆದರೆ ಬಿಸಿಸಿಐ ನಿರ್ಧಾರ ಬದಲಿಸಿರಲಿಲ್ಲ. ಇದನ್ನು ಪ್ರಶ್ನಿಸಿ ಶ್ರೀ ಕೋರ್ಟ್ ಮೆಟ್ಟಿಲೇರಿದ್ದರು. 

ಕಾನೂನು ಹೋರಾಟದಲ್ಲಿ ಶ್ರೀಶಾಂತ್ ಮೇಲುಗೈ ಸಾಧಿಸುತ್ತಿದ್ದಂತೆ ಬಿಸಿಸಿಐ ಪಟ್ಟು ಸಡಿಲಿಸಿದೆ. ಇದೀಗ ಶ್ರೀಶಾಂತ್ ನಿಷೇಧದ ಅವದಿಯನ್ನು 7 ವರ್ಷಕ್ಕೆ ಕಡಿತಗೊಳಿಸಲಾಗಿದೆ. ನಿಷೇಧ ಮುಕ್ತಗೊಳಿಸಿದರೂ ಸದ್ಯ ಶ್ರೀಶಾಂತ್ ಕಮ್‌ಬ್ಯಾಕ್ ಮಾಡುವ ಪರಿಸ್ಥಿತಿಯಲ್ಲಿಲ್ಲ. ಕಾರಣ 36 ವರ್ಷದ ಶ್ರೀಶಾಂತ್ ಕ್ರಿಕೆಟ್ ಕರಿಯರ್ ಬಹುತೇಕ ಅಂತ್ಯವಾಗಿದೆ.