ನವದೆಹಲಿ(ಅ.04): ಭಾರತೀಯ ಕ್ರಿಕೆಟ್ ಮಂಡಳಿಗೆ (ಬಿಸಿಸಿಐ) ಮೂಗುದಾರ ಹಾಕಲು ಮುಂದಾಗಿರುವ ನ್ಯಾ. ಲೋಧಾ ಸಮಿತಿಯು ಈವರೆಗೆ ಕೈಗೊಂಡ ಕ್ರಮಗಳೇನೂ ಸಾಲದು. ಬಿಸಿಸಿಐನ ಪ್ರತಿಯೊಬ್ಬ ಅಧಿಕಾರಿಯನ್ನೂ ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿಹಾಕಬೇಕಲ್ಲದೆ, ಪ್ರತಿಯೊಬ್ಬರಿಗೂ ನೂರು ಬೆತ್ತದೇಟು ಕೊಡಬೇಕು ಎಂದು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಹಾಗೂ ನ್ಯಾ.ಲೋಧಾ ಸಮಿತಿಯ ಶಿಫಾರಸುಗಳ ಅನುಷ್ಠಾನ ವಿಚಾರದಲ್ಲಿ ಬಿಸಿಸಿಐನ ಸಲಹೆಗಾರರೂ ಆಗಿರುವ ಮಾರ್ಕಂಡೇಯ ಕಾಟ್ಜು ಟ್ವೀಟ್ ಮಾಡಿದ್ದಾರೆ.
ಬಿಸಿಸಿಐ ವತಿಯಿಂದ ಅದರ ಅಧೀನದಲ್ಲಿರುವ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಭಾರೀ ಮೊತ್ತದ ಯಾವುದೇ ಮೊತ್ತ ವರ್ಗಾಯಿಸದಂತೆ ಬಿಸಿಸಿಐನ ಖಾತೆ ಹೊಂದಿರುವ ಬ್ಯಾಂಕ್‌ಗಳಿಗೆ ಲೋಧಾ ಸಮಿತಿಯು ಮಂಗಳವಾರ ಸೂಚಿಸಿರುವ ಬೆನ್ನಲ್ಲೇ ಕಾಟ್ಜು ಅವರಿಂದ ಈ ಪ್ರತಿಕ್ರಿಯೆ ಹೊರಬಿದ್ದಿದೆ.
ಖುದ್ದು ಬಿಸಿಸಿಐ ಸಲಹೆಗಾರರಾಗಿರುವ ಕಾಟ್ಜು ಅವರೇ ಬಿಸಿಸಿಐ ಬಗ್ಗೆ ಹೀಗೆ ಹೇಳಬಹುದೇ ಅಥವಾ ಲೋಧಾ ಸಮಿತಿಯ ಕ್ರಮಕ್ಕೆ ಕುಚೋದ್ಯದ ಪ್ರತಿಕ್ರಿಯೆ ನೀಡಿರಬಹುದೇ ಎಂಬುದು ಸ್ಪಷ್ಟವಾಗಿರದಿದ್ದರೂ ಅವರ ಈ ಟ್ವೀಟ್ ಮಾತ್ರ ಅಂತರ್ಜಾಲ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡಿತ್ತು.
