ಮುಂಬೈ(ಸೆ.20): ಇತ್ತೀಚಿನ ದಿನಗಳಲ್ಲಿ ಕ್ರಿಕೆಟಿಗರು ತಮ್ಮ ಸಾರ್ವಕಾಲಿಕ ಕನಸಿನ ತಂಡವನ್ನು ಆಯ್ಕೆ ಮಾಡಿಕೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ. ಆದರೆ ಕ್ರಿಕೆಟ್ ಅಭಿಮಾನಿಗಳು ನಮಗೂ ಒಂದು ಅವಕಾಶ ಕೊಟ್ಟಿದ್ದರೆ ನಾವೂ ಒಂದು ಕೈ ನೋಡಬಹುದಿತ್ತು ಎನ್ನುವವರೆ ಹೆಚ್ಚು. ಈಗ ಬಿಸಿಸಿಐ ಇಂತವರಿಗಾಗಿಯೇ ಒಂದು ಅವಕಾಶ ಮಾಡಿಕೊಟ್ಟಿದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತನ್ನ 500ನೇ ಪಂದ್ಯಕ್ಕೆ ಸಜ್ಜಾಗಿದೆ. ಈ ಸಂಭ್ರಮವನ್ನು ವಿಶೇಷವಾಗಿ ಆಚರಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನಿರ್ಧರಿಸಿದೆ.
ಅಭಿಮಾನಿಗಳು ತಮ್ಮ ನೆಚ್ಚಿನ ಕನಸಿನ ತಂಡವನ್ನು ಆಯ್ಕೆ ಮಾಡಲು ಬಿಸಿಸಿಐ ಅವಕಾಶ ಕಲ್ಪಿಸಿದೆ. ಹಾಗಾಗಿ ಭಾರತದ ಕನಸಿನ ತಂಡ ಆಯ್ಕೆ ಮಾಡುವಂತೆ ಅಭಿಮಾನಿಗಳನ್ನು ಕೇಳಿಕೊಂಡಿದೆ. ಇದಕ್ಕಾಗಿ ಭಾರತ ಕ್ರಿಕೆಟ್ ತಂಡದ ಅಧಿಕೃತ ಫೇಸ್ ಬುಕ್ ಪೇಜ್‌ನಲ್ಲಿ ಡ್ರೀಮ್ ಟೀಮ್ ಅನ್ನು ಆಯ್ಕೆ ಮಾಡುವಂತೆ ಆಹ್ವಾನ ನೀಡಲಾಗಿದೆ. ನೀವು ನೆಚ್ಚಿನ ಆಟಗಾರರನ್ನು ಆಯ್ಕೆ ಮಾಡಿಕೊಂಡು ಮತ ಹಾಕಬಹುದು.
ಲಕ್ಷಾಂತರ ಮಂದಿ ಈಗಾಗಲೇ ತಮ್ಮ ಕನಸಿನ ತಂಡವನ್ನು ಆಯ್ಕೆ ಮಾಡಿದ್ದಾರೆ ಎಂದು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ತಿಳಿಸಿದ್ದಾರೆ
ಕ್ರಿಕೆಟ್ ಅಭಿಮಾನಿಗಳಿಗೆ ಇದೊಂದು ಅಪರೂಪದ ಅವಕಾಶವಾಗಿದ್ದು ತಮ್ಮ ನೆಚ್ಚಿನ ಆಟಗಾರರನ್ನೊಳಗೊಂಡ ತಂಡವನ್ನು ಆಯ್ಕೆ ಮಾಡಬಹುದು. ಅವರು ಉತ್ತಮ ಆಟಗಾರರನ್ನೇ ಆಯ್ಕೆ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅಜಯ್ ಶಿರ್ಕೆ ತಿಳಿಸಿದ್ದಾರೆ.
ಭಾರತ ಕ್ರಿಕೆಟ್ ತಂಡದ ಅಧಿಕೃತ ಫೇಸ್'ಬುಕ್ ಪೇಜ್ www.facebook.com/IndianCricketTeam ನಲ್ಲಿ ನಿಮ್ಮ ಕನಸಿನ ತಂಡವನ್ನು ಆಯ್ಕೆ ಮಾಡಬಹುದು. ನೀವು ನಿಮ್ಮ ಕನಸಿನ ತಂಡವನ್ನು ರಚಿಸಿ.
