ಕಾನೂನು, ಸುಪ್ರೀಂ ಕೋರ್ಟ್‌ ಆದೇಶಗಳು, ಭಾರತೀಯ ನ್ಯಾಯಾಂಗ ಸಮಿತಿ ವರದಿ, ಕ್ರೀಡಾ ಸಚಿವಾಲಯದ ಮಾಹಿತಿಯನ್ನು ಪರಿಶೀಲಿಸಿ ಬಿಸಿಸಿಐಯನ್ನು ಆರ್‌ಟಿಐ ಕಾಯ್ದೆಯಡಿ ತರಲು ಆಯೋಗ  ನಿರ್ಧರಿಸಿದೆ. ‘ಬಿಸಿಸಿಐ ಅನುಮೋದಿಸಲ್ಪಟ್ಟರಾಷ್ಟ್ರೀಯ ಸಂಸ್ಥೆಯಾಗಿದ್ದು, ಏಕಸ್ವಾಮ್ಯ ಹಕ್ಕುಗಳೊಂದಿಗೆ ದೇಶದಲ್ಲಿ ಕ್ರಿಕೆಟ್‌ ಪಂದ್ಯಗಳನ್ನು ಆಯೋಜಿಸುತ್ತಿದೆ ಎಂಬುದನ್ನು ಸುಪ್ರೀಂ ಕೋರ್ಟ್‌ ಸಹ ಪುನಃ ದೃಢೀಕರಿಸಿದೆ’ ಎಂದು ಆಯೋಗದ ಆಯುಕ್ತ ಶ್ರೀಧರ್‌ ಅಚಾರ್ಯುಲು ತಮ್ಮ 37 ಪುಟಗಳ ಆದೇಶದಲ್ಲಿ ತಿಳಿಸಿದ್ದಾರೆ.

ನವದೆಹಲಿ(ಅ.02): ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ)ಯನ್ನು ಮಾಹಿತಿ ಹಕ್ಕು (ಆರ್‌ಟಿಐ) ವ್ಯಾಪ್ತಿಗೆ ಸೇರಿಸಲಾಗಿದ್ದು, ದೇಶದ ಜನತೆಗೆ ಮಂಡಳಿ ಉತ್ತರಿಸಬೇಕಿದೆ ಎಂದು ಕೇಂದ್ರ ಮಾಹಿತಿ ಆಯೋಗವು ಸೋಮವಾರ ಆದೇಶಿಸಿದೆ.

ಕಾನೂನು, ಸುಪ್ರೀಂ ಕೋರ್ಟ್‌ ಆದೇಶಗಳು, ಭಾರತೀಯ ನ್ಯಾಯಾಂಗ ಸಮಿತಿ ವರದಿ, ಕ್ರೀಡಾ ಸಚಿವಾಲಯದ ಮಾಹಿತಿಯನ್ನು ಪರಿಶೀಲಿಸಿ ಬಿಸಿಸಿಐಯನ್ನು ಆರ್‌ಟಿಐ ಕಾಯ್ದೆಯಡಿ ತರಲು ಆಯೋಗ ನಿರ್ಧರಿಸಿದೆ. ‘ಬಿಸಿಸಿಐ ಅನುಮೋದಿಸಲ್ಪಟ್ಟ ರಾಷ್ಟ್ರೀಯ ಸಂಸ್ಥೆಯಾಗಿದ್ದು, ಏಕಸ್ವಾಮ್ಯ ಹಕ್ಕುಗಳೊಂದಿಗೆ ದೇಶದಲ್ಲಿ ಕ್ರಿಕೆಟ್‌ ಪಂದ್ಯಗಳನ್ನು ಆಯೋಜಿಸುತ್ತಿದೆ ಎಂಬುದನ್ನು ಸುಪ್ರೀಂ ಕೋರ್ಟ್‌ ಸಹ ಪುನಃ ದೃಢೀಕರಿಸಿದೆ’ ಎಂದು ಆಯೋಗದ ಆಯುಕ್ತ ಶ್ರೀಧರ್‌ ಅಚಾರ್ಯುಲು ತಮ್ಮ 37 ಪುಟಗಳ ಆದೇಶದಲ್ಲಿ ತಿಳಿಸಿದ್ದಾರೆ.

ನಿಯಮದ ಅನುಸಾರ ಶೀಘ್ರದಲ್ಲೇ ಅರ್ಹ ವ್ಯಕ್ತಿಗಳನ್ನು ಕೇಂದ್ರ ಮಾಹಿತಿ ಅಧಿಕಾರಿಗಳು, ಕೇಂದ್ರ ಉಪ ಮಾಹಿತಿ ಅಧಿಕಾರಿಗಳು ಹಾಗೂ ಮೇಲ್ಮನವಿ ಪ್ರಾಧಿಕಾರಗಳನ್ನು ನೇಮಿಸುವಂತೆ ಬಿಸಿಸಿಐ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಸುಪ್ರೀಂ ಕೋರ್ಟ್‌ ನೇಮಿತ ಆಡಳಿತ ಸಮಿತಿಗೆ ಆಯುಕ್ತ ಶ್ರೀಧರ್‌ ಸೂಚಿಸಿದ್ದಾರೆ. ಆರ್‌ಟಿಐ ಕಾಯ್ದೆಯಡಿ ಅರ್ಜಿಗಳನ್ನು ಸ್ವೀಕರಿಸಲು ಆನ್‌ಲೈನ್‌ ಹಾಗೂ ಆಫ್‌ಲೈನ್‌ ವ್ಯವಸ್ಥೆಯನ್ನು 15 ದಿನಗಳೊಳಗೆ ಸಿದ್ಧಗೊಳಿಸಲು ಸಹ ಆಚಾರ್ಯುಲು ಬಿಸಿಸಿಐಗೆ ಸೂಚಿಸಿದ್ದಾರೆ.

ಬಿಸಿಸಿಐ ಕಾರ್ಯವೈಖರಿ, ದೇಶವನ್ನು ಪ್ರತಿನಿಧಿಸುತ್ತಿರುವ ವಿಧಾನ ಹಾಗೂ ಆಟಗಾರರ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿ ಗೀತಾ ರಾಣಿ ಎನ್ನುವವರು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಕ್ರೀಡಾ ಸಚಿವಾಲಯ ಸಮಾಧಾನಕರ ಉತ್ತರ ನೀಡದಿದ್ದಾಗ, ಈ ವಿಷಯವನ್ನು ಮಾಹಿತಿ ಆಯೋಗದ ಮುಂದೆ ತರಲಾಗಿತ್ತು. ‘ಬಿಸಿಸಿಐ ಅನ್ನು ಆರ್‌ಟಿಐ ಕಾಯ್ದೆಯಡಿ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ ಎಂದು ಪರಿಗಣಿಸಬೇಕಿದೆ. ಬಿಸಿಸಿಐನಿಂದ ಮಾನ್ಯತೆ ಪಡೆದಿರುವ ಎಲ್ಲಾ ರಾಜ್ಯ ಸಂಸ್ಥೆಗಳಿಗೂ ಈ ನಿಯಮ ಅನ್ವಯವಾಗಲಿದೆ’ ಎಂದು ಆಯುಕ್ತ ಶ್ರೀಧರ್‌ ಹೇಳಿದ್ದಾರೆ.