ಮುಂಬೈ(ಸೆ.15): ಭಾರತ ರಾಷ್ಟ್ರೀಯ ಕ್ರಿಕೆಟ್‌ ಹಿರಿ​ಯ​ರ ತಂಡದ ಆಯ್ಕೆ ಮಂಡ​ಳಿಯ ಸದ​ಸ್ಯತ್ವಕ್ಕಾಗಿ ಮಾಜಿ ಕ್ರಿಕೆ​ಟಿ​ಗ​ರಿಂದ ಬಿಸಿ​ಸಿಐ ಅರ್ಜಿ​ಗ​ಳನ್ನು ಆಹ್ವಾ​ನಿ​ಸಿ​ರುವ ಹಿನ್ನೆ​ಲೆ​ಯಲ್ಲಿ ಕರ್ನಾ​ಟ​ಕದ ಮಾಜಿ ಕ್ರಿಕೆ​ಟಿಗ ವೆಂಕ​ಟೇಶ್‌ ಪ್ರಸಾದ್‌ ಹಾಗೂ ಮತ್ತೊಬ್ಬ ಮಾಜಿ ಕ್ರಿಕೆ​ಟಿಗ ನಯನ್‌ ಮೋಂಗಿಯಾ ಅರ್ಜಿ ಹಾಕಿ​ದ್ದಾರೆ. ಸದ್ಯಕ್ಕೆ ಕಿರಿ​ಯರ ರಾಷ್ಟ್ರೀಯ ಆಯ್ಕೆ ಸಮಿ​ತಿಯ ಅಧ್ಯ​ಕ್ಷ​ರಾ​ಗಿ​ರು​ವ ವೆಂಕ​ಟೇಶ್‌ ಪ್ರಸಾದ್‌ ಇದೀಗ ಹಿರಿಯರ ಆಯ್ಕೆ ಸಮಿ​ತಿಗೆ ಸೇರ್ಪ​ಡೆ​ಗೊ​ಳ್ಳಲು ಪ್ರಯ​ತ್ನಿ​ಸಿ​ದ್ದಾರೆ.

ಲೋಧಾ ಸಮಿತಿ ಶಿಫಾ​ರ​ಸು​ಗಳ ಪ್ರಕಾರ, ಈ ಬಾರಿಯ ಆಯ್ಕೆ ಸಮಿತಿಗೆ ಆಯ್ಕೆ​ಯಾ​ಗುವ ಅಭ್ಯ​ರ್ಥಿ​ಗ​ಳಿಗೆ ಹೊಸ ನಿಬಂಧ​ನೆ​ಗ​ಳನ್ನು ಬಿಸಿ​ಸಿಐ ವಿಧಿ​ಸಿತ್ತು. ಅದ​ರಂತೆ, ಅಭ್ಯ​ರ್ಥಿ​ಗಳು 60 ವರ್ಷ​ಕ್ಕಿಂತ ಮೇಲ್ಪ​ಟ್ಟಿ​ರ​ಬಾ​ರದು. ಅಲ್ಲದೆ, ಅಂತಾ​ರಾ​ಷ್ಟ್ರೀಯ ಮಟ್ಟ​ದಲ್ಲಿ ಕನಿಷ್ಠ ಒಂದು ಟೆಸ್ಟ್‌ ಅಥವಾ ಒಂದು ಏಕ​ದಿನ ಪಂದ್ಯ​ವ​ನ್ನಾ​ದರೂ ಆಡಿ​ರ​ಬೇಕು. ಕನಿಷ್ಠ 50 ಪ್ರಥಮ ದರ್ಜೆ ಪಂದ್ಯ​ಗ​ಳ​ನ್ನಾ​ದರೂ ಆಡಿ​ರ​ಬೇ​ಕೆಂಬ ಷರ​ತ್ತು​ಗ​ಳನ್ನು ವಿಧಿ​ಸ​ಲಾ​ಗಿತ್ತು.

ಅಂತಾ​ರಾ​ಷ್ಟ್ರೀಯ ಮಟ್ಟ​ದಲ್ಲಿ 33 ಟೆಸ್ಟ್ ಹಾಗೂ 161 ಏಕ​ದಿನ ಪಂದ್ಯ​ಗ​ಳನ್ನು ವೆಂಕ​ಟೇಶ್‌ ಪ್ರಸಾದ್‌ ಆಡಿದ್ದಾರೆ. ಇನ್ನು, 123 ಪ್ರಥಮ ದರ್ಜೆ ಪಂದ್ಯ​ಗಳಲ್ಲಿ ಕಾಣಿ​ಸಿ​ಕೊಂಡಿ​ರುವ ಅವರು ತಮ್ಮ ಉಮೇ​ದು​ವಾ​ರಿ​ಕೆ​ಯನ್ನು ಅರ್ಜಿ​ಯಲ್ಲಿ ಸಮ​ರ್ಥಿ​ಸಿ​ಕೊಂಡಿ​ದ್ದಾರೆ. ಇನ್ನು, ಭಾರತ ಕಂಡ ಅತ್ಯು​ತ್ತಮ ವಿಕೆಟ್‌ ಕೀಪ​ರ್‌​ಗ​ಳ​ಲ್ಲೊ​ಬ್ಬ​ರಾ​ಗಿ​ರುವ ನಯನ್‌ ಮೋಂಗಿಯಾ 44 ಅಂತಾ​ರಾ​ಷ್ಟ್ರೀಯ ಟೆಸ್ಟ್‌ ಪಂದ್ಯ​ಗ​ಳಲ್ಲಿ ಕಾಣಿ​ಸಿ​ಕೊಂಡಿದ್ದು, 140 ಏಕ​ದಿನ ಹಾಗೂ 158 ಪ್ರಥಮ ದರ್ಜೆ ಪಂದ್ಯ​ಗ​ಳ​ನ್ನಾ​ಡಿ​ದ್ದಾರೆ.

ವೆಂಕ​ಟೇಶ್‌ ಪ್ರಸಾದ್‌ ಹಾಗೂ ನಯನ್‌ ಮೋಂಗಿಯಾ ಹೊರ​ತು​ಪ​ಡಿ​ಸಿ​ದಂತೆ, ಟೀಂ ಇಂಡಿ​ಯಾದ ಮತ್ತೊ​ಬ್ಬ ಮಾಜಿ ವಿಕೆಟ್‌ ಕೀಪರ್‌ ಸಮೀರ್‌ ಡಿಘೆ, ಎಡಗೈ ಸ್ಪಿನ್ನರ್‌ ನೈಲೇಶ್‌ ಕುಲ​ಕರ್ಣಿ ಹಾಗೂ ವೇಗಿ ಅಬೆ ಕುರು​ವಿಲ್ಲಾ ಸಹ ಆಯ್ಕೆ ಸಮಿ​ತಿಗೆ ಆಯ್ಕೆ ಬಯಸಿ ಅರ್ಜಿ ಸಲ್ಲಿ​ಸಿ​ದ್ದಾರೆ.

ಇವ​ರೊಂದಿಗೆ, ಕೆಲ​ವಾರು ಮಾಜಿ ರಾಷ್ಟ್ರ​ಮ​ಟ್ಟದ ಕ್ರಿಕೆ​ಟ​ರ್‌​ಗಳೂ ಅರ್ಜಿ ಸಲ್ಲಿ​ಸಿದ್ದು, ಅವ​ರಲ್ಲಿ ಶಿಶಿರ್‌ ಹಟ್ಟಂಗಡಿ, ಶಂತನು ಸುಗ್ವೇ​ಕರ್‌, ರಾಬಿನ್‌ ಸಿಂಗ್‌ (ಜೂನಿ​ಯರ್‌) ಹಾಗೂ ಪ್ರೀತಂ ಗಂಧೆ ಸಹ ಅರ್ಜಿ ಸಲ್ಲಿ​ಸಿ​ದ್ದಾರೆ.