ನವದೆಹಲಿ( ಅ.07): ವೆಸ್ಟ್ಇಂಡೀಸ್ ವಿರುದ್ದದ ಟೆಸ್ಟ್ ಸರಣಿಯಿಂದ ಕೈಬಿಟ್ಟ ಬೆನ್ನಲ್ಲೇ ಕನ್ನಡಿಗ ಕರುಣ್ ನಾಯರ್ ಹಾಗೂ ತಮಿಳುನಾಡು ಬ್ಯಾಟ್ಸ್‌ಮನ್ ಮುರಳಿ ವಿಜಯ್‌ಗೆ ಮತ್ತೊಂದು ಆಘಾತ ಎದುರಾಗಿದೆ. ಈ ಇಬ್ಬರು ಆಟಗಾರರು ಇದೀಗ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಬಿಸಿಸಿಐನ ಕೇಂದ್ರ ಗುತ್ತಿಗೆ ನಿಯಮಾವಳಿ ಉಲ್ಲಂಘಿಸಿ ಆಯ್ಕೆ ಸಮಿತಿ ವಿರುದ್ಧ ಹೇಳಿಕೆ ನೀಡಿದ್ದ ಆಟಗಾರರಾದ ರಾಜ್ಯದ ಕರುಣ್ ನಾಯರ್ ಮತ್ತು ಮುರಳಿ ವಿಜಯ್‌ಗೆ ಸಂಕಟ ಎದುರಾಗಿದೆ. ಇಬ್ಬರೂ ಆಟಗಾರರಿಂದ ಬಿಸಿಸಿಐ ವಿವರಣೆ ಕೇಳಿದೆ.

ಕರುಣ್ ಮತ್ತು ವಿಜಯ್, ‘ಟೆಸ್ಟ್ ತಂಡದಿಂದ ಕೈಬಿಟ್ಟಿರುವುದಕ್ಕೆ ಎಂ.ಎಸ್.ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಈವರೆಗೂ ನಮ್ಮನ್ನು ಸಂಪರ್ಕಿಸಿಲ್ಲ. ಕಾರಣವನ್ನೂ ತಿಳಿಸಿಲ್ಲ’ ಎಂದು ಹೇಳಿಕೆ ನೀಡಿದ್ದರು.  ಇದು ಬಿಸಿಸಿಐನ ಸಂವಹನ ನೀತಿಯ ಉಲ್ಲಂಘನೆಯಾಗಿದ್ದು, ಈ ಸಂಬಂಧ ಇಬ್ಬರಿಂದಲೂ ವಿವರಣೆ ಕೇಳಿದೆ.