ಈ ನಿಯಮ ಹಾಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಜಾರಿಗೆ ಬಂದಿದ್ದರೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 91ರನ್ ಗಳಿಸಿದ್ದ ರೋಹಿತ್ ಶರ್ಮಾ'ಗೆ ಜೀವದಾನ ಸಿಗುತ್ತಿತ್ತು.
ದುಬೈ(ಜೂ.06): ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕೋಚ್ ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿ ಮಾಡಿದ್ದ ಶಿಫಾರಸನ್ನು ಗಂಭೀರವಾಗಿ ಐಸಿಸಿ, ಕ್ರಿಕೆಟ್'ನಲ್ಲಿ ಅಮೂಲಾಗ್ರ ಬದಲಾವಣೆ ತರಲು ಮುಂದಾಗಿದೆ.
ಹೌದು ಪ್ರಮುಖವಾಗಿ ಬ್ಯಾಟ್ ಗಾತ್ರ, ರನೌಟ್, ಸ್ಟಂಪಿಂಗ್ ನಿಯಮ ಹಾಗೂ ಅನುಚಿತವಾಗಿ ವರ್ತಿಸುವ ಆಟಗಾರರನ್ನು ಮೈದಾನದಿಂದ ಹೊರಗೆ ಕಳಿಸುವ ಅಧಿಕಾರವನ್ನು ಅಂಪೈರ್'ಗಳಿಗೆ ನೀಡುವ ಬಗ್ಗೆ ಶಿಫಾರಸು ಜಾರಿಗೆ ತರಲು ಅಂತರಾಷ್ಟ್ರಿಯ ಕ್ರಿಕೆಟ್ ಸಮಿತಿ ತೀರ್ಮಾನಿಸಿದೆ
ನೂತನ ಶಿಫಾರನಿನ ಪ್ರಕಾರ ಬ್ಯಾಟ್ ಗಾತ್ರದಲ್ಲಿ ವ್ಯತ್ಯಾಸವಾಗಲಿದೆ. ಬ್ಯಾಟ್ ಅಂಚುಗಳ ದಪ್ಪ 40 ಮಿಲಿ ಮೀಟರ್ ಹಾಗೂ ಬ್ಲೇಡ್'ನ ದಪ್ಪ 67 ಮಿಲಿ ಮೀಟರ್ ಮೀರಬಾರದು. ಸದ್ಯ ಹಲವು ಆಟಗಾರರು 50 ಮಿಲಿ ಮೀಟರ್ ಗಾತ್ರದ ಬ್ಯಾಟ್‌ಗಳನ್ನು ಬಳಕೆ ಮಾಡುತ್ತಿದ್ದು, ಇನ್ಮುಂದೆ ಅದರ ಬಳಕೆಗೆ ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಬ್ಯಾಟ್ಸ್‌ಮನ್ ಒಮ್ಮೆ ಕ್ರೀಸ್'ನಲ್ಲಿ ಬ್ಯಾಟ್ ಇಟ್ಟಿದ್ದರೆ ಸಾಕು, ಬೇಲ್ಸ್ ಹಾರುವಾಗ ಬ್ಯಾಟ್ ಗಾಳಿಯಲ್ಲಿದ್ದರೂ ಔಟ್ ಎಂದು ನಿರ್ಧರಿಸುವಂತಿಲ್ಲ ಎಂಬ ಬದಲಾವಣೆಯನ್ನೂ ತರಲಾಗುತ್ತಿದೆ. ಈ ನಿಯಮ ಹಾಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಜಾರಿಗೆ ಬಂದಿದ್ದರೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 91ರನ್ ಗಳಿಸಿದ್ದ ರೋಹಿತ್ ಶರ್ಮಾ'ಗೆ ಜೀವದಾನ ಸಿಗುತ್ತಿತ್ತು. ಎಡ್ಜ್'ಬಾಸ್ಟನ್'ನಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ರನೌಟ್'ಗೆ ಬಲಿಯಾಗಿದ್ದರು.
ಇದೇ ವೇಳೆ ಆಟಗಾರರು ಮೈದಾನದಲ್ಲಿ ಅನುಚಿತವಾಗಿ ವರ್ತಿಸಿದ ಸಂದರ್ಭದಲ್ಲಿ ಫುಟ್ಬಾಲ್'ನಲ್ಲಿ ಚಾಲ್ತಿಯಲ್ಲಿರುವಂತೆ, ಅಂಪೈರ್ ಕೆಂಪು ಕಾರ್ಡ್ ನೀಡಿ ಆತನನ್ನು ಮೈದಾನದಿಂದ ಹೊರಹಾಕುವ ಅಧಿಕಾರ ಸಹ ನೀಡಲಾಗುತ್ತಿದೆ. ಒಂದೊಮ್ಮೆ ಆಟಗಾರ ಕೆಂಪು ಕಾರ್ಡ್ ಪಡೆದರೆ ಆತ ಇಡೀ ಪಂದ್ಯದಿಂದಲೇ ಹೊರಬೀಳಲಿದ್ದಾನೆ ಎಂದು ಹೇಳಲಾಗಿದೆ.
ಈ ಎಲ್ಲಾ ಪ್ರಮುಖ ಬದಲಾವಣೆಗಳು ಅಕ್ಟೋಬರ್ ಒಂದರಿಂದ ಜಾರಿಗೆ ಬರಲಿವೆ ಎಂದು ಐಸಿಸಿ ಮೂಲಗಳು ತಿಳಿಸಿವೆ.
