ಢಾಕಾ[ಡಿ.03]: ವೆಸ್ಟ್ ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಬಾಂಗ್ಲಾದೇಶ 2-0ಯಿಂದ ಮುಡಿಗೇರಿಸಿಕೊಂಡಿದೆ. ಭಾನುವಾರ ಮುಕ್ತಾಯಗೊಂಡ 2ನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ, ವಿಂಡೀಸ್ ವಿರುದ್ಧ ಇನ್ನಿಂಗ್ಸ್ ಹಾಗೂ 184 ರಗಳ ಗೆಲುವು ಸಾಧಿಸಿದೆ. ಬಾಂಗ್ಲಾದೇಶ ಇದೇ ಮೊದಲ ಬಾರಿಗೆ ಇನ್ನಿಂಗ್ಸ್ ಜಯದೊಂದಿಗೆ ಸರಣಿ ಜಯಿಸಿದ ಸಾಧನೆ ಮಾಡಿದೆ.

ಆತಿಥೇಯ ಬಾಂಗ್ಲಾ ಮೊದಲ ಇನ್ನಿಂಗ್ಸ್’ನಲ್ಲಿ 508 ರನ್’ಗಳ ಬೃಹತ್ ಮೊತ್ತ ಪೇರಿಸಿತ್ತು. ಪಂದ್ಯದ 3ನೇ ದಿನವಾದ ಭಾನುವಾರ, 75ರನ್’ಗಳಿಂದ ಆಟ ಆರಂಭಿಸಿದ ವಿಂಡೀಸ್ ತಂಡವನ್ನು ಮೊದಲ ಇನ್ನಿಂಗ್ಸ್’ನಲ್ಲಿ 111 ರನ್’ಗಳಿಗೆ ಕಟ್ಟಿ ಹಾಕಿದ ಬಾಂಗ್ಲಾ, ಫಾಲೋ ಆನ್ ಹೇರಿತು. ವಿಂಡೀಸ್ 2ನೇ ಇನ್ನಿಂಗ್ಸ್’ನಲ್ಲಿ ಸ್ವಲ್ಪ ಪ್ರತಿರೋಧ ಒಡ್ಡಿತಾದರೂ 213 ರಗಳಿಗೆ ಆಲೌಟ್ ಆಗಿ ಹೀನಾಯ ಸೋಲನುಭವಿಸಿತು. ಪಂದ್ಯದಲ್ಲಿ 12 ವಿಕೆಟ್ ಗಳಿಸಿದ ಬಾಂಗ್ಲಾ ಆಫ್’ಸ್ಪಿನ್ನರ್ ಮೆಹದಿ ಹಸನ್, ತಮ್ಮ ವೃತ್ತಿ ಜೀವನದ ಶ್ರೇಷ್ಠ ಪ್ರದರ್ಶನ ತೋರಿದರು.

ಇತಿಹಾಸದಲ್ಲಿ ಮೊತ್ತಮೊದಲ ಬಾರಿಗೆ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬಾಂಗ್ಲಾದೇಶ ಸ್ಪಿನ್ನರ್’ಗಳು ಎದುರಾಳಿ ಪಡೆಯ ಎಲ್ಲಾ 40 ವಿಕೆಟ್ ಕಬಳಿಸಿ ವಿಶ್ವದಾಖಲೆ ಬರೆದಿದ್ದಾರೆ. ಈ ಸರಣಿಯಲ್ಲಿ ಮೆಹದಿ ಹಸನ್ 15 ಹಾಗೂ ತೈಜುಲ್ ಇಸ್ಲಾಮ್ 10 ವಿಕೆಟ್ ಕಬಳಿಸಿದ್ದಾರೆ.