ಭಾರತ ನೀಡಿದ್ದ ಸುಲಭ ಗುರಿ ಬೆನ್ನತ್ತಿದ ಬಾಂಗ್ಲಾದೇಶ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್’ಗೆ ಸುಲ್ತಾನಾ ಹಾಗೂ ಆಯೇಷಾ ರೆಹಮಾನ್ 35 ರನ್’ಗಳ ಜತೆಯಾಟವಾಡಿತು.

ಕೌಲಲಾಂಪುರ[ಜೂ.10]: ಬೌಲಿಂಗ್ ಹಾಗೂ ಬ್ಯಾಟಿಂಗ್’ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಬಾಂಗ್ಲಾದೇಶ ಮಹಿಳಾ ತಂಡ ಭಾರತ ತಂಡವನ್ನು ರೋಚಕವಾಗಿ ಮಣಿಸಿ ಏಷ್ಯಾಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ಸತತ 6 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಭಾರತದ ಗೆಲುವಿನ ನಾಗಾಲೋಟಕ್ಕೆ ಬಾಂಗ್ಲಾದೇಶ ಬ್ರೇಕ್ ಹಾಕಿದೆ.
ಭಾರತ ನೀಡಿದ್ದ ಸುಲಭ ಗುರಿ ಬೆನ್ನತ್ತಿದ ಬಾಂಗ್ಲಾದೇಶ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್’ಗೆ ಸುಲ್ತಾನಾ ಹಾಗೂ ಆಯೇಷಾ ರೆಹಮಾನ್ 35 ರನ್’ಗಳ ಜತೆಯಾಟವಾಡಿತು. ಈ ಜೋಡಿಯನ್ನು ಪೂನಂ ಯಾದವ್ 7ನೇ ಓವರ್’ನಲ್ಲಿ ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಶಮಿಮಾ ಸುಲ್ತಾನಾ[16] ಹಾಘೂ ಆಯೇಷಾ[17] ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಫರ್ಗಾನಾ ಹಕ್[11] ನಿಗರ್ ಸುಲ್ತಾನಾ[27] ಹಾಗೂ ರುಮಾನ ಅಹಮ್ಮದ್[23] ಉಪಯುಕ್ತ ಬ್ಯಾಟಿಂಗ್ ನಡೆಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ನೆರವಾಯಿತು.
ಎದೆಬಡಿತ ಹೆಚ್ಚಿಸಿದ ಕೊನೆಯ ಓವರ್:
ಬಾಂಗ್ಲಾದೇಶ ಕೊನೆಯ ಓವರ್’ನಲ್ಲಿ ಗೆಲ್ಲಲು 9 ರನ್’ಗಳ ಅವಶ್ಯಕತೆಯಿತ್ತು. ಭಾರತದ ನಾಯಕಿ ಕೌರ್ ಮೊದಲ ಎಸೆತದಲ್ಲಿ ಕೇವಲ 1 ರನ್’ಗಳನ್ನು ಬಿಟ್ಟುಕೊಟ್ಟರು. ಮರು ಎಸೆತದಲ್ಲಿ ರುಮಾನ ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದರು. ಮೂರನೇ ಎಸೆತದಲ್ಲಿ ರುಮಾನ ಒಂದು ರನ್ ಬಾರಿಸಿ, ಎರಡನೇ ರನ್ ಕಡಿಯುವಾಗ ರನೌಟ್’ಗೆ ಬಲಿಯಾದರು. ನಾಲ್ಕನೇ ಎಸೆತದಲ್ಲಿ ಸಂಜಿದಾ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದರು. ಹೀಗಾಗಿ ಕೊನೆಯ 2 ಎಸೆತಗಳಲ್ಲಿ ಬಾಂಗ್ಲಾ ಗೆಲ್ಲಲು 3 ರನ್’ಗಳ ಅವಶ್ಯಕತೆಯಿತ್ತು. 5ನೇ ಎಸೆತದಲ್ಲಿ ಒಂದು ರನ್ ಪಡೆದ ಬಾಂಗ್ಲಾ ಕೊನೆಯ ಎಸೆತದಲ್ಲಿ ಮಿಡ್’ವಿಕೆಟ್’ನತ್ತ ಬಾರಿಸಿ 2 ರನ್ ದೋಚಿದ ಬಾಂಗ್ಲಾ ಚೊಚ್ಚಲ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ನಾಯಕಿ ಹರ್ಮನ್’ಪ್ರೀತ್ ಕೌರ್[56] ಏಕಾಂಗಿ ಹೋರಾಟದ ನೆರವಿನಿಂದ ನಿಗದಿತ 20 ಓವರ್’ಗಳಲ್ಲಿ 112 ರನ್ ಕಲೆಹಾಕಿತ್ತು.
ರುಮಾನಾ ಅಹಮ್ಮದ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರೆ, ಹರ್ಮನ್’ಪ್ರೀತ್ ಕೌರ್ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದಾರೆ.