ಕೋಲ್ಕತಾ(ಮೇ.17): ಭಾರತ ಕ್ರಿಕೆಟ್‌ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ವಾಸಿಂ ಜಾಫರ್‌ರನ್ನು ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ(ಬಿಸಿಬಿ), ಮೀರ್‌ಪುರ್‌ನಲ್ಲಿರುವ ತನ್ನ ಅಕಾಡೆಮಿಯ ಬ್ಯಾಟಿಂಗ್‌ ಕೋಚ್‌ ಆಗಿ ನೇಮಕ ಮಾಡಿಕೊಂಡಿದೆ.

ಒಂದು ವರ್ಷ ಅವಧಿಗೆ ಜಾಫರ್‌, ಬಿಸಿಬಿ ಜತೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ‘ಆರಂಭದಲ್ಲಿ ಅವರು ಅಂಡರ್‌-16ರಿಂದ ಅಂಡರ್‌-19 ವರೆಗಿನ ತಂಡಗಳೊಂದಿಗೆ ಕೆಲಸ ಮಾಡಲಿದ್ದಾರೆ. ಬಳಿಕ ಅವರನ್ನು ಬಿಸಿಬಿಯ ಉನ್ನತ ಪ್ರದರ್ಶನ ಘಟಕದ ಬ್ಯಾಟಿಂಗ್‌ ಸಲಹೆಗಾರರಾಗಿ ನೇಮಕ ಮಾಡಿಕೊಳ್ಳುವ ಬಗ್ಗೆ ಯೋಚಿಸಲಿದ್ದೇವೆ’ ಎಂದು ಬಿಸಿಬಿ ಅಧಿಕಾರಿ ಕೈಸಾರ್‌ ಅಹ್ಮದ್‌ ಹೇಳಿದ್ದಾರೆ. 41 ವರ್ಷದ ಜಾಫರ್‌, ವರ್ಷದಲ್ಲಿ 6 ತಿಂಗಳು ಬಾಂಗ್ಲಾದೇಶದಲ್ಲಿ ಕೋಚಿಂಗ್‌ ನಡೆಸಲಿದ್ದಾರೆ.

ಭಾರತ ಪರ 31 ಟೆಸ್ಟ್(5 ಶತಕ ಹಾಗೂ 11 ಅರ್ಧಶತಕ) ಹಾಗೂ ಎರಡು ಏಕದಿನ ಪಂದ್ಯಗಳನ್ನಾಡಿರುವ ಅವರು ಲಿಸ್ಟ್ ಎ ಕ್ರಿಕೆಟ್ ಸೇರಿದಂತೆ ನಲವತ್ತು ಸಾವಿರಕ್ಕೂ ಹೆಚ್ಚು ರನ್ ಬಾರಿಸಿದ್ದಾರೆ.