ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತಾ ನೈಟ್‌'ರೈಡರ್ಸ್‌ ನೀಡಿದ ಸುಲಭ ಗುರಿಯನ್ನು ಬೆನ್ನತ್ತಲಾಗದೆ ಆರ್‌ಸಿಬಿ ಕೇವಲ 49 ರನ್‌'ಗಳಿಗೆ ಸರ್ವಪತನ ಕಂಡು, 82 ರನ್‌'ಗಳ ಅಂತರದಲ್ಲಿ ಸೋಲೊಪ್ಪಿಕೊಂಡಿತು.

ಕೋಲ್ಕತಾ(ಏ.23): 70189820250 ಇದು ಯಾರಾದ್ದೋ ಫೋನ್ ನಂಬರ್ ಎಂದು ಭಾವಿಸಬೇಡಿ. ಈಡನ್ ಗಾರ್ಡನ್ ಮೈದಾನದಲ್ಲಿ ಬಲಿಷ್ಟ ಬ್ಯಾಟಿಂಗ್ ಲೈನ್'ಅಪ್ ಎಂದೇ ಗುರುತಿಸಿಕೊಂಡಿರುವ ಆರ್'ಸಿಬಿ ಬ್ಯಾಟ್ಸ್'ಮನ್'ಗಳು ಗಳಿಸಿದ ವೈಯುಕ್ತಿಕ ರನ್..! ಹೌದು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಬ್ಯಾಟ್ಸ್'ಮನ್'ಗಳ ದಯಾನೀಯ ವೈಫಲ್ಯದಿಂದ ಐಪಿಎಲ್ ಇತಿಹಾಸದಲ್ಲೇ ಅತಿ ಕಡಿಮೆ ಮೊತ್ತಕ್ಕೆ ಸರ್ವಪತನಗೊಂಡ ನೈಟ್'ರೈಡರ್ಸ್ ಎದುರು ಹೀನಾಯ ಸೋಲನ್ನೊಪ್ಪಿತು.

ಇಲ್ಲಿನ ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತಾ ನೈಟ್‌'ರೈಡರ್ಸ್‌ ನೀಡಿದ ಸುಲಭ ಗುರಿಯನ್ನು ಬೆನ್ನತ್ತಲಾಗದೆ ಆರ್‌ಸಿಬಿ ಕೇವಲ 49 ರನ್‌'ಗಳಿಗೆ ಸರ್ವಪತನ ಕಂಡು, 82 ರನ್‌'ಗಳ ಅಂತರದಲ್ಲಿ ಸೋಲೊಪ್ಪಿಕೊಂಡಿತು.

ಮಳೆಯಿಂದಾಗಿ ಪಂದ್ಯ ಅರ್ಧ ತಾಸು ತಡವಾಗಿ ಆರಂಭಗೊಂಡರೂ, ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಮುಕ್ತಾಯಗೊಂಡಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತಾ, ಆರ್‌ಸಿಬಿಯ ಉತ್ತಮ ಬೌಲಿಂಗ್ ದಾಳಿಯ ಎದುರು 19.3 ಓವರ್‌'ಗಳಲ್ಲಿ ಕೇವಲ 131 ರನ್‌'ಗಳಿಗೆ ಆಲೌಟ್ ಆಗಿತ್ತು. ಆದರೆ ಗುರಿ ಬೆನ್ನತ್ತಿದ ಬೆಂಗಳೂರು, ಕೇವಲ 9.4 ಓವರ್ ಬ್ಯಾಟಿಂಗ್ ಮಾಡಿ, ಹೀನಾಯ ಮೊತ್ತಕ್ಕೆ ಕುಸಿಯಿತು. ಮೊದಲ ಓವರ್‌ನಲ್ಲೇ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡ ಆರ್‌ಸಿಬಿ, 24 ರನ್ ಗಳಿಸುವಷ್ಟರಲ್ಲಿ ವಿಲಿಯರ್ಸ್‌ ಸೇರಿ 4 ವಿಕೆಟ್ ಕಳೆದುಕೊಂಡಿತು. ಕ್ರಿಸ್ ಗೇಲ್ 17 ಎಸೆತ ಎದುರಿಸಿ ಕೇವಲ 7 ರನ್‌'ಗೆ ಔಟಾಗಿ ಪೆವಿಲಿಯನ್ ಸೇರುತ್ತಿದ್ದಂತೆ, ತಂಡದ ಉಳಿದ ಬ್ಯಾಟ್ಸ್‌ಮನ್‌ಗಳು ಅವರನ್ನು ಹಿಂಬಾಲಿಸಿದರು. ತಂಡದ ಯಾವೊಬ್ಬ ಬ್ಯಾಟ್ಸ್‌ಮನ್ ಕೂಡ ಎರಡಂಕಿ ಮೊತ್ತ ದಾಖಲಿಸಲಿಲ್ಲ. ಕೆಕೆಆರ್ ಪರ ವೇಗಿಗಳೇ ಎಲ್ಲಾ ೧೦ ವಿಕೆಟ್ ಕಬಳಿಸಿದ್ದು ವಿಶೇಷ. ಇದಕ್ಕೂ ಮುನ್ನ ಸುನಿಲ್ ನರೇನ್ 34 ರನ್ ನೆರವಿನಿಂದ ಕೆಕೆಆರ್ 131 ರನ್‌'ಗಳ ಗೌರವ ಮೊತ್ತ ದಾಖಲಿಸಿತು.

ಸಂಕ್ಷಿಪ್ತ ಸ್ಕೋರ್

ಕೋಲ್ಕತ ನೈಟ್'ರೈಡರ್ಸ್: 131/10

ಸುನೀಲ್ ನರೈನ್: 34

ಕ್ರಿಸ್ ವೋಕ್ಸ್ ; 18

ಯಜುವೇಂದ್ರ ಚಾಹಲ್: 16/3

ರಾಯಲ್ ಚಾಲೆಂಜರ್ಸ್ ಬೆಂಗಳೂರು: 49/10(9.4 ಓವರ್)

ಕೇದಾರ್ ಜಾಧವ್ : 09

ಎಬಿ ಡಿವಿಲಿಯರ್ಸ್ : 08

ಕಾಲಿನ್ ಡಿ ಗ್ರಾಂಡ್'ಹೋಂ: 4/3

ಪಂದ್ಯಪುರುಷೋತ್ತಮ: ನಾಥನ್ ಕೌಲ್ಟರ್ ನಿಲ್