ಆಸ್ಟ್ರೇಲಿಯಾ ಕ್ರಿಕೆಟಿಗರು ಬಾಲ್ ಟ್ಯಾಂಪರಿಂಗ್ ಮೂಲಕ ಸಿಕ್ಕಿ ಬಿದ್ದು ಒಂದು ತಿಂಗಳಾಗುವ ಮುನ್ನವೇ ಇದೀಗ ಮತ್ತೊಂದು ಬಾಲ್ ಟ್ಯಾಂಪರಿಂಗ್ ಆರೋಪ ಕೇಳಿಬಂದಿದೆ. ಶ್ರೀಲಂಕಾ ಹಾಗೂ ವೆಸ್ಟ್ಇಂಡೀಸ್ ನಡುವಿನ 2ನೇ ಟೆಸ್ಟ್ ಪಂದ್ಯಕ್ಕೆ ಚೆಂಡು ವಿರೂಪಗೊಳಿಸಿದ ಕಳಂಕ ಅಂಟಿಕೊಂಡಿದೆ.
ಗ್ರಾಸ್ ಐಸ್‌ಲೆಟ್(ಜೂ.16): ಆಸ್ಟ್ರೇಲಿಯಾ ಬಾಲ್ ಟ್ಯಾಂಪರಿಂಗ್ ಪ್ರಕರಣ ಮಾಸುವ ಮುನ್ನವೇ ಇದೀಗ ವೆಸ್ಟ್ಇಂಡೀಸ್ ಹಾಗೂ ಶ್ರೀಲಂಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಆರೋಪ ಕೇಳಿಬಂದಿದೆ.
ದ್ವಿತೀಯ ದಿನದಾಟದ ಅಂತ್ಯದಲ್ಲಿ ಶ್ರೀಲಂಕಾ ಕ್ರಿಕೆಟಿಗರು ಚೆಂಡು ವಿರೂಪಗೊಳಿಸಿದ್ದಾರೆ ಎಂದು ಅಂಪೈರ್ ಅಲೀಮ್‌ದಾರ್ ಹಾಗೂ ಇಯಾನ್ ಗೊಲ್ಡ್ ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ತೃತೀಯ ದಿನದದಾಟದ ಆರಂಭದಲ್ಲೇ ಅಂಪೈರ್‌ಗಳು ಚೆಂಡು ಬದಲಾಯಿಸಲು ನಿರ್ಧರಿಸಿದ್ದಾರೆ. ಇದರಿಂದ ಕುಪಿತಗೊಂಡ ದಿನೇಶ್ ಚಾಂಡಿಮಾಲ್ ನೇತೃತ್ವದ ಶ್ರೀಲಂಕಾ ತಂಡ ನಿಗಧಿತ ಸಮಯದಲ್ಲಿ ಮೈದಾನಕ್ಕಿಳಿಯದೇ ಅಂಪೈರ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ತಕ್ಷಣ ಮಧ್ಯಪ್ರವೇಶಿಸಿದ ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್, ಶ್ರೀಲಂಕಾ ಕೋಚ್ ಜೊತೆ ಮಾತುಕತೆ ನಡೆಸಿದ್ದಾರೆ. ಬಳಿಕ ಲಂಕಾ ಕ್ರಿಕೆಟಿಗರು ತಡವಾಗಿ ದಿನದಾಟ ಆರಂಭಿಸಲು ಮೈದಾನಕ್ಕಿಳಿದಿದ್ದಾರೆ. ಲಂಕಾ ತಂಡ ಐಸಿಸಿ ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ ವೆಸ್ಟ್ಇಂಡೀಸ್ ತಂಡಕ್ಕೆ 5 ರನ್‌ಗಳನ್ನ ಹೆಚ್ಚುವರಿಯಾಗಿ ನೀಡಲಾಗಿದೆ.
ಸೌತ್ಆಫ್ರಿಕಾ ವಿರುದ್ಧ ಬಾಲ್ ಟ್ಯಾಂಪರಿಂಗ್ ನಡೆಸಿದ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಹಾಗೂ ಕ್ಯಾಮರಾನ್ ಬೆನ್‌ಕ್ರಾಫ್ಟ್ ನಿಷೇಧದ ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ಪ್ರಕರಣ ಮಾಸುವ ಮುನ್ನವೇ ಇದೀಗ ವಿಂಡೀಸ್ ಹಾಗೂ ಲಂಕಾ ಟೆಸ್ಟ್ ಪಂದ್ಯದಲ್ಲೂ ಚೆಂಡು ವಿರೂಪಗೊಳಿಸಿದ ಆರೋಪ ಕೇಳಿಬಂದಿರೋದು ದುರದೃಷ್ಟಕರ.
