ವುಹಾನ್‌(ಚೀನಾ): ಭಾರತದ ತಾರಾ ಶಟ್ಲರ್‌ಗಳಾದ ಸೈನಾ ನೆಹ್ವಾಲ್‌ ಹಾಗೂ ಪಿ.ವಿ.ಸಿಂಧು, ಇಲ್ಲಿ ನಡೆಯುತ್ತಿರುವ ಏಷ್ಯನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಗುರುವಾರ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಪುರುಷರ ಸಿಂಗಲ್ಸ್‌ನಲ್ಲಿ ಸಮೀರ್‌ ವರ್ಮಾ ಸಹ ಗೆಲುವಿನ ಓಟ ಮುಂದುವರಿಸಿದ್ದು, ಅಂತಿಮ 8ರ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ 2ನೇ ಸುತ್ತಿನ ಪಂದ್ಯದಲ್ಲಿ ಸೈನಾ, ಕೊರಿಯಾದ ಕಿಮ್‌ ಗಾ ಯುನ್‌ ವಿರುದ್ಧ 21-13, 21-13 ನೇರ ಗೇಮ್‌ಗಳಲ್ಲಿ ಜಯಗಳಿಸಿದರು. ಕ್ವಾರ್ಟರ್‌ ಫೈನಲ್‌ನಲ್ಲಿ ಸೈನಾಗೆ ಕಠಿಣ ಸವಾಲು ಎದುರಾಗಲಿದೆ. 3ನೇ ಶ್ರೇಯಾಂಕಿತೆ ಜಪಾನ್‌ನ ಅಕಾನೆ ಯಮಗುಚಿ ವಿರುದ್ಧ ವಿಶ್ವ ನಂ.9 ಆಟಗಾರ್ತಿ ಸೆಣಸಲಿದ್ದಾರೆ.

ಮತ್ತೊಂದು 2ನೇ ಸುತ್ತಿನ ಪಂದ್ಯದಲ್ಲಿ ಪಿ.ವಿ.ಸಿಂಧು, ಇಂಡೋನೇಷ್ಯಾದ ಚೊಯುರುನ್ನಿಸಾ ವಿರುದ್ಧ 21-15, 21-19 ಗೇಮ್‌ಗಳಲ್ಲಿ ಜಯಗಳಿಸಿದರು. ವಿಶ್ವ ನಂ.6 ಸಿಂಧು, ಕ್ವಾರ್ಟರ್‌ ಫೈನಲ್‌ನಲ್ಲಿ ಶ್ರೇಯಾಂಕ ರಹಿತ ಚೀನಾ ಆಟಗಾರ್ತಿ ಕೇ ಯಾನ್‌ಯಾನ್‌ ವಿರುದ್ಧ ಆಡಲಿದ್ದಾರೆ.

ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಸಸಮೀರ್‌ ವರ್ಮಾ, ಹಾಂಕಾಂಗ್‌ನ ಲಾಂಗ್‌ ಕಾ ಅಂಗುಸ್‌ ವಿರುದ್ಧ 21-12, 21-19 ಗೇಮ್‌ಗಳಲ್ಲಿ ಜಯಗಳಿಸಿದರು. ಕ್ವಾರ್ಟರ್‌ ಫೈನಲ್‌ನಲ್ಲಿ ಸಮೀರ್‌ಗೆ 2ನೇ ಶ್ರೇಯಾಂಕಿತ ಚೀನಾದ ಶಿ ಯುಕಿಯಿಂದ ಕಠಿಣ ಸವಾಲು ಎದುರಾಗಲಿದೆ.