ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಸಾತ್ವಿಕ್-ಚಿರಾಗ್ ಜೋಡಿಪುರುಷರ ಡಬಲ್ಸ್ನಲ್ಲಿ ದೇಶಕ್ಕೆ ಮೊದಲ ಚಿನ್ನಸಾತ್ವಿಕ್-ಚಿರಾಗ್ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ಸ್ ಪಟ್ಟ
ದುಬೈ(ಮೇ.01): ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನ ಪುರುಷರ ಡಬಲ್ಸ್ನಲ್ಲಿ ಚಿನ್ನ ಗೆಲ್ಲುವ ಭಾರತ 6 ದಶಕಗಳ ಕನಸು ಕೊನೆಗೂ ನನಸಾಗಿದೆ. ದೇಶದ ತಾರಾ ಜೋಡಿ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿಭಾನುವಾರ ಐತಿಹಾಸಿಕ ಬಂಗಾರದ ಪದಕ ಗೆದ್ದಿದ್ದು, 58 ವರ್ಷಗಳ ಬಳಿಕ ದೇಶಕ್ಕೆ ಯಾವುದೇ ವಿಭಾಗದಲ್ಲಿ ಸಿಕ್ಕ ಮೊದಲ ಚಿನ್ನ ಎನಿಸಿಕೊಂಡಿದೆ.
ಫೈನಲ್ನಲ್ಲಿ ಭಾರತೀಯ ಜೋಡಿ ಮಲೇಷ್ಯಾದ ಒಂಗ್ ಸಿನ್ ಹಾಗೂ ಟಿಯೊ ಯೀ ವಿರುದ್ಧ 16-21, 21-17, 21-19 ಗೇಮ್ಗಳಲ್ಲಿ ರೋಚಕ ಗೆಲುವು ಸಾಧಿಸಿತು. ಮೊದಲ ಗೇಮ್ ಕಳೆದುಕೊಂಡ ಬಳಿಕ 2ನೇ ಗೇಮ್‌ನಲ್ಲಿ 7-13ರಿಂದ ಹಿಂದಿದ್ದ ಭಾರತೀಯ ಜೋಡಿ, ಪುಟಿದೆದ್ದು ಚಿನ್ನದ ಪದಕ ಗೆಲ್ಲಲು ಯಶಸ್ವಿಯಾಯಿತು.
1965ರಲ್ಲಿ ದಿನೇಶ್ ಖನ್ನಾ ಪುರುಷರ ಸಿಂಗಲ್ಸ್‌ನಲ್ಲಿ ಬಂಗಾರದ ಸಾಧನೆ ಮಾಡಿದ್ದರು. ಇನ್ನು ಪುರುಷರ ಡಬಲ್ಸ್ನಲ್ಲಿ 1971ರಲ್ಲಿ ದೀಪು ಘೋಷ್-ರಮನ್ ಘೋಷ್ ಕಂಚು ಗೆದ್ದಿದ್ದು ಈ ವರೆಗಿನ ಶ್ರೇಷ್ಠ ಸಾಧನೆಯಾಗಿತ್ತು. ಈ ಪಂದ್ಯಕ್ಕೂ ಮುನ್ನ ಭಾರತ 1962ರಿಂದ ವಿವಿಧ ವಿಭಾಗಗಳಲ್ಲಿ 1 ಚಿನ್ನ, 17 ಕಂಚಿನ ಪದಕ ಜಯಿಸಿತ್ತು.
ರೋಮ್ ಚಾಲೆಂಜರ್ ಟೆನಿಸ್: ನಗಾಲ್ಗೆ ಪ್ರಶಸ್ತಿ
ರೋಮ್: ಭಾರತದ ತಾರಾ ಟೆನಿಸಿಗ ಸುಮಿತ್ ನಗಾಲ್ ಭಾನುವಾರ ರೋಮ್ ಚಾಲೆಂಜರ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇದರೊಂದಿಗೆ 25 ವರ್ಷದ ಸುಮಿತ್ ಯುರೋಪಿನ ಮಣ್ಣಿನ ಅಂಕಣದಲ್ಲಿ ಎಟಿಪಿ ಪ್ರಶಸ್ತಿ ಗೆದ್ದ ಭಾರತದ ಮೊದಲಿಗ ಎಂಬ ಹಿರಿಮೆಗೆ ಪಾತ್ರರಾದರು.
ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್: ಐತಿಹಾಸಿಕ ಫೈನಲ್‌ಗೆ ಸಾತ್ವಿಕ್-ಚಿರಾಗ್ ಶೆಟ್ಟಿ!
ಭಾನುವಾರ ಫೈನಲ್ನಲ್ಲಿ ಅವರು ನೆದರ್‌ಲೆಂಡ್‌್ಸನ ಜೆಸ್ಪರ್ ಡೆ ಜೊಂಗ್ ವಿರುದ್ಧ 6-3, 6-2 ಸೆಟ್ಗಳಲ್ಲಿ ಜಯಗಳಿಸಿದರು. ಇದು ನಗಾಲ್ರ ವೃತ್ತಿಬದುಕಿನ 3ನೇ ಎಟಿಪಿ ಪ್ರಶಸ್ತಿಯಾಗಿದ್ದು, 2019ರ ಬಳಿಕ ಮೊದಲನೇಯದ್ದು. ಈ ಗೆಲುವಿನೊಂದಿಗೆ ನಗಾಲ್ರ ವಿಶ್ವ ರಾರಯಂಕಿಂಗ್ ಕೂಡಾ ಏರಿಕೆಯಾಗಿದ್ದು, ನೂತನ ಪಟ್ಟಿಯಲ್ಲಿ 93 ಸ್ಥಾನ ಪ್ರಗತಿ ಸಾಧಿಸಿ 254ನೇ ಸ್ಥಾನಕ್ಕೇರಿದ್ದಾರೆ. 2020ರಲ್ಲಿ 122ನೇ ಸ್ಥಾನಕ್ಕೇರಿದ್ದು ಅವರ ಜೀವನಶ್ರೇಷ್ಠ ಸಾಧನೆ.
ಇಂದಿನಿಂದ ಪುರುಷರ ವಿಶ್ವ ಬಾಕ್ಸಿಂಗ್ ಕೂಟ
ತಾಷ್ಕೆಂಟ್: ವಿಶ್ವ ಪುರುಷರ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಸೋಮವಾರದಿಂದ ಉಜ್ಬೇಕಿಸ್ತಾನದ ತಾಷ್ಕೆಂಟ್‌ನಲ್ಲಿ ಆರಂಭವಾಗಲಿದ್ದು, ಕಳೆದ ಬಾರಿ 1 ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದ ಭಾರತದ ಬಾಕ್ಸರ್‌ಗಳು ಈ ವರ್ಷ ಸುಧಾರಿತ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದಾರೆ. ಮೇ 14ರ ವರೆಗೂ ನಡೆಯಲಿರುವ ಕೂಟದಲ್ಲಿ ಭಾರತದ 13 ಬಾಕ್ಸರ್‌ಗಳು ಕಣಕ್ಕಿಳಿಯಲಿದ್ದಾರೆ. ಚಾಂಪಿಯನ್‌ಶಿಪ್‌ನಲ್ಲಿ 104 ದೇಶಗಳ ಒಟ್ಟು 640 ಬಾಕ್ಸರ್‌ಗಳು ಸ್ಪರ್ಧಿಸಲಿದ್ದಾರೆ. ಪುರುಷರ ಬಾಕ್ಸಿಂಗ್ನಲ್ಲಿ ಭಾರತ ಈವರೆಗೆ 1 ಬೆಳ್ಳಿ, 6 ಕಂಚು ಮಾತ್ರ ಗೆದ್ದಿದೆ.
