Australian Open: 22ನೇ ಗ್ರ್ಯಾನ್‌ಸ್ಲಾಂ ಹೊಸ್ತಿಲಲ್ಲಿ ನೋವಾಕ್ ಜೋಕೋವಿಚ್..!
10ನೇ ಬಾರಿಗೆ ಆಸ್ಪ್ರೇಲಿಯನ್ ಓಪನ್ ಫೈನಲ್ ಪ್ರವೇಶಿಸಿದ ನೋವಾಕ್ ಜೋಕೋವಿಚ್
22ನೇ ಟೆನಿಸ್ ಗ್ರ್ಯಾನ್‌ಸ್ಲಾಂ ಮೇಲೆ ಕಣ್ಣಿಟ್ಟಿದ್ದಾರೆ ಸರ್ಬಿಯಾದ ದಿಗ್ಗಜ ಆಟಗಾರ
ಫೈನಲ್‌ನಲ್ಲಿ ಗ್ರೀಸ್‌ನ ಸ್ಟೆಫಾನೋ ಸಿಟ್ಸಿಪಾಸ್ ವಿರುದ್ಧ ಸೆಣಸಾಟ
ಮೆಲ್ಬರ್ನ್: ಸರ್ಬಿಯಾದ ದಿಗ್ಗಜ ಟೆನಿಸಿಗ ನೋವಾಕ್ ಜೋಕೋವಿಚ್ 10ನೇ ಬಾರಿಗೆ ಆಸ್ಪ್ರೇಲಿಯನ್ ಓಪನ್ ಫೈನಲ್ ಪ್ರವೇಶಿಸಿದ್ದು, ರಾಫೆಲ್ ನಡಾಲ್‌ರ 22 ಗ್ರ್ಯಾನ್ ಸ್ಲಾಂ ಗೆಲುವಿನ ದಾಖಲೆ ಸರಿಗಟ್ಟಲು ಇನ್ನೊಂದೇ ಹೆಜ್ಜೆ ದಾಟಬೇಕಿದೆ. 21 ಗ್ರ್ಯಾನ್‌ಸ್ಲಾಂಗಳ ಒಡೆಯ ಜೋಕೋವಿಚ್, ಶುಕ್ರವಾರ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಶ್ರೇಯಾಂಕರಹಿತ ಅಮೆರಿಕದ ಆಟಗಾರ ಟಾಮಿ ಪಾಲ್ ವಿರುದ್ಧ 7-5, 6-1, 6-2 ನೇರ ಸೆಟ್‌ಗಳಲ್ಲಿ ಜಯಗಳಿಸಿದರು.
ಜೋಕೋವಿಚ್ ಕಳೆದ 9 ಬಾರಿ ಫೈನಲ್ ಪ್ರವೇಶಿಸಿದಾಗಲೂ ಚಾಂಪಿಯನ್ ಪಟ್ಟಅಲಂಕರಿಸಿದ್ದು, ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ 3ನೇ ಶ್ರೇಯಾಂಕಿತ ಗ್ರೀಸ್‌ನ ಸ್ಟೆಫಾನೋ ಸಿಟ್ಸಿಪಾಸ್ ವಿರುದ್ಧ ಸೆಣಸಲಿದ್ದಾರೆ. ಈ ಪಂದ್ಯದಲ್ಲಿ ಗೆಲ್ಲುವ ಆಟಗಾರ ವಿಶ್ವ ರಾರಯಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಲಿದ್ದಾರೆ.
ಸಿಟ್ಸಿಪಾಸ್ ಶುಕ್ರವಾರ ಮೊದಲ ಸೆಮೀಸ್‌ನಲ್ಲಿ ರಷ್ಯಾದ ಕರೆನ್ ಖಚನೊವ್ ವಿರುದ್ಧ 7-6(2), 6-4, 6-7, 6-3 ಸೆಟ್‌ಗಳಲ್ಲಿ ಜಯಿಸಿ ಆಸ್ಪ್ರೇಲಿಯನ್ ಓಪನ್‌ನಲ್ಲಿ ಮೊದಲ ಹಾಗೂ ಒಟ್ಟಾರೆ 2ನೇ ಗ್ರ್ಯಾನ್ ಸ್ಲಾಂ ಫೈನಲ್ ಪ್ರವೇಶಿಸಿದರು. 2021ರ ಫ್ರೆಂಚ್ ಓಪನ್ ಫೈನಲ್‌ನಲ್ಲಿ ಜೋಕೋವಿಚ್ ವಿರುದ್ಧ ಸಿಟ್ಸಿಪಾಸ್ ಸೋಲುಂಡಿದ್ದರು.
27 ಜಯ: ಆಸ್ಪ್ರೇಲಿಯನ್ ಓಪನ್‌ನಲ್ಲಿ ಸತತ 27ನೇ ಜಯ ಸಾಧಿಸಿದ ಜೋಕೋವಿಚ್. ಅಮೆರಿಕದ ಆ್ಯಂಡ್ರೆ ಅಗಾಸ್ಸಿಯ 26 ಜಯದ ದಾಖಲೆ ಪತನ.
ಇಂದು ಮಹಿಳಾ ಸಿಂಗಲ್ಸ್ ಫೈನಲ್: ರಬೈಕೆನಾ vs ಸಬೆಲೆಂಕಾ ಫೈಟ್
ಮೆಲ್ಬರ್ನ್: ಮಹಿಳಾ ಸಿಂಗಲ್ಸ್ ಫೈನಲ್ ಶನಿವಾರ ನಡೆಯಲಿದ್ದು ಬೆಲಾರಸ್‌ನ ಅರಿನಾ ಸಬಲೆಂಕಾ ಹಾಗೂ ಕಜಕಸ್ತಾನದ ಎಲೈನಾ ರಬೈಕೆನಾ ಮುಖಾಮುಖಿಯಾಗಲಿದ್ದಾರೆ. ಮೊದಲ ಬಾರಿಗೆ ಗ್ರ್ಯಾನ್‌ಸ್ಲಾಂ ಸಿಂಗಲ್ಸ್ ಫೈನಲ್ ಪ್ರವೇಶಿಸಿರುವ ಸಬಲೆಂಕಾ ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು, ಕಳೆದ ವರ್ಷ ವಿಂಬಲ್ಡನ್ ಚಾಂಪಿಯನ್ ಆಗಿದ್ದ ರಬೈಕೆನಾ 2ನೇ ಪ್ರಶಸ್ತಿ ಜಯಿಸಲು ಕಾತರಿಸುತ್ತಿದ್ದಾರೆ.
'ಲಕ್ಷಾಂತರ ಮಂದಿಯನ್ನು ಪ್ರಭಾವಿಸಿದ್ದಕ್ಕೆ ಥ್ಯಾಂಕ್ಯೂ': ಸಾನಿಯಾ ಮಿರ್ಜಾಗೆ ಹರಿದುಬಂತು ಅಭಿನಂದನೆಗಳ ಮಹಾಪೂರ
2001ರಲ್ಲಿ ಜೆನಿಫರ್ ಕ್ಯಾಪ್ರಿಯಾಟಿ ಬಳಿಕ ಟೂರ್ನಿಯೊಂದರಲ್ಲಿ ಮೂವರು ಮಾಜಿ ಗ್ರ್ಯಾನ್ ಸ್ಲಾಂ ವಿಜೇತರನ್ನು ಸೋಲಿಸಿದ ದಾಖಲೆ ಬರೆದ ರಬೈಕೆನಾ, ಮೇಲ್ನೋಟಕ್ಕೆ ಪ್ರಶಸ್ತಿ ಜಯಿಸುವ ಫೇವರಿಟ್ ಎನಿಸಿದ್ದಾರೆ. ಫೈನಲ್ ಹಾದಿಯಲ್ಲಿ ಅವರು 3 ಗ್ರ್ಯಾನ್‌ಸ್ಲಾಂ ವಿಜೇತೆ ಇಗಾ ಸ್ವಿಯಾಟೆಕ್, 2012, 13ರ ಆಸ್ಪ್ರೇಲಿಯನ್ ಓಪನ್ ಚಾಂಪಿಯನ್ ವಿಕ್ಟೋರಿಯಾ ಅಜರೆಂಕಾ, 2017ರ ಫ್ರೆಂಚ್ ಓಪನ್ ಚಾಂಪಿಯನ್ ಎಲೆನಾ ಓಸ್ಟಪೆಂಕೊ ವಿರುದ್ಧ ಗೆಲುವು ಸಾಧಿಸಿದರು. ಕಳೆದ ವರ್ಷ ಆಸ್ಪ್ರೇಲಿಯನ್ ಓಪನ್ ರನ್ನರ್-ಅಪ್ ಡೇನಿಯಲ್ ಕಾಲಿನ್ಸ್‌ಗೂ ಸೋಲುಣಿಸಿದರು. ಇಬ್ಬರೂ ಬಲವಾದ ಸರ್ವ್ ಹಾಗೂ ಗ್ರೌಂಡ್‌ಸ್ಟ್ರೋಕ್‌ಗಳನ್ನು ಸಮರ್ಪಕವಾಗಿ ಬಳಸಲು ಹೆಸರುವಾಸಿಯಾಗಿದ್ದು, ಉತ್ತಮ ಪೈಪೋಟಿ ನಿರೀಕ್ಷಿಸಲಾಗಿದೆ.
ಪಂದ್ಯ ಆರಂಭ: ಮಧ್ಯಾಹ್ನ 2ಕ್ಕೆ
ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್
ಟೆನಿಸ್ ಗ್ರ್ಯಾನ್‌ಸ್ಲಾಂಗೆ ಸಾನಿಯಾ ಮಿರ್ಜಾ ಗುಡ್ ಬೈ..!
ಮೆಲ್ಬರ್ನ್: ಭಾರತದ ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಆಸ್ಪ್ರೇಲಿಯನ್ ಓಪನ್ ಮಿಶ್ರ ಡಬಲ್ಸ್‌ನ ರನ್ನರ್-ಅಪ್ ಪ್ರಶಸ್ತಿಯೊಂದಿಗೆ ತಮ್ಮ ಗ್ರ್ಯಾನ್‌ಸ್ಲಾಂ ಪಯಣವನ್ನು ಕೊನೆಗೊಳಿಸಿದ್ದಾರೆ. ವೃತ್ತಿಬದುಕಿನ ಕೊನೆ ಗ್ರ್ಯಾನ್‌ಸ್ಲಾಂ ಆಡಿದ ಸಾನಿಯಾರ 7ನೇ ಪ್ರಶಸ್ತಿ ಕನಸು ನನಸಾಗಿಲಿಲ್ಲ.
ಕನ್ನಡಿಗ ರೋಹನ್ ಬೋಪಣ್ಣ ಅವರೊಂದಿಗೆ ಕಣಕ್ಕಿಳಿದ ಸಾನಿಯಾ ಶುಕ್ರವಾರ ನಡೆದ ಫೈನಲ್ ಹಣಾಹಣಿಯಲ್ಲಿ ಬ್ರೆಜಿಲ್‌ನ ಲೂಯಿಸಾ ಸ್ಟೆಫಾನಿ-ರಾಫೆಲ್ ಮಾಟೋಸ್ ಜೋಡಿಗೆ 6-7(2/7), 2-6 ನೇರ ಸೆಟ್‌ಗಳಿಂದ ಶರಣಾದರು. 2009ರಲ್ಲಿ ಮಹೇಶ್ ಭೂಪತಿ ಜೊತೆ ಆಸ್ಪ್ರೇಲಿಯನ್ ಓಪನ್ ಮಿಶ್ರ ಡಬಲ್ಸ್ ಪ್ರಶಸ್ತಿ ಗೆದ್ದಿದ್ದ ಸಾನಿಯಾರ ಮತ್ತೊಂದು ಪ್ರಶಸ್ತಿ ಗೆಲ್ಲಲು ವಿಫಲರಾದರು. 36 ವರ್ಷದ ಸಾನಿಯಾ ಗ್ರ್ಯಾನ್‌ಸ್ಲಾಂನಲ್ಲಿ ಒಟ್ಟು 6 ಬಾರಿ ಚಾಂಪಿಯನ್ ಎನಿಸಿಕೊಂಡಿದ್ದಾರೆ. ಮಿಶ್ರ ಡಬಲ್ಸ್‌ನಲ್ಲಿ 2012ರಲ್ಲಿ ಫ್ರೆಂಚ್ ಓಪನ್, 2014ರಲ್ಲಿ ಯುಎಸ್ ಓಪನ್ ಗೆದ್ದಿದ್ದ ಸಾನಿಯಾ, ಮಹಿಳಾ ಡಬಲ್ಸ್‌ನಲ್ಲಿ 2015ರಲ್ಲಿ ವಿಂಬಲ್ಡನ್, ಯುಎಸ್ ಓಪನ್, 2016ರಲ್ಲಿ ಆಸ್ಪ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದಿದ್ದರು. ಬೋಪಣ್ಣ 2017ರ ಫ್ರೆಂಚ್ ಓಪನ್ ಮಿಶ್ರ ಡಬಲ್ಸ್ ಚಾಂಪಿಯನ್ ಆಗಿದ್ದರು. ಸಾನಿಯಾ ಮುಂದಿನ ತಿಂಗಳು ದುಬೈ ಓಪನ್ ಬಳಿಕ ವೃತ್ತಿಪರ ಟೆನಿಸ್‌ಗೆ ಗುಡ್‌ಬೈ ಹೇಳಲಿದ್ದಾರೆ.
'ಮೆಲ್ಬರ್ನ್‌ನಲ್ಲೇ ನನ್ನ ವೃತ್ತಿಬದುಕು ಆರಂಭಸಿದ್ದೆ. ಇದೇ ಅಂಗಳದಲ್ಲಿ ಗ್ರ್ಯಾನ್‌ಸ್ಲಾಂ ಪಯಣ ಕೊನೆಗೊಳುತ್ತಿರುವುದು ಖುಷಿಗೆ ಕಾರಣ. ಬೋಪಣ್ಣ ಜೊತೆ 14 ವರ್ಷದವಳಿದ್ದಾಗಲೇ ಮಿಶ್ರ ಡಬಲ್ಸ್ ಆಡಿದ್ದೆ. 22 ವರ್ಷ ಬಳಿಕವೂ ಅವರ ಜೊತೆ ಆಡುತ್ತಿದ್ದೇನೆ. ಅವರು ನನ್ನ ಆತ್ಮೀಯ ಸ್ನೇಹಿತ. ನನ್ನ ಮಗನ ಮುಂದೆ ಗ್ರ್ಯಾನ್‌ಸ್ಲಾಂ ಫೈನಲ್ ಆಡುತ್ತೇನೆಂದು ಭಾವಿಸಿರಲಿಲ್ಲ. ಆ ಆಸೆ ಈಡೇರಿದ್ದು ಸಂಭ್ರಮ ಇಮ್ಮಡಿಗೊಳಿಸಿದೆ.' -ಸಾನಿಯಾ ಮಿರ್ಜಾ