ಕಳೆದ 5 ದಿನಗಳಲ್ಲಿ ವಿಶ್ವ ನಂ.1 ಆಟಗಾರನ ವಿರುದ್ಧ ಶ್ರೀಕಾಂತ್ ಸಾಧಿಸುತ್ತಿರುವ 2ನೇ ಗೆಲುವು ಇದಾಗಿದೆ.

ಸಿಡ್ನಿ(ಜೂ.22): ಆಸ್ಟ್ರೇಲಿಯನ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತೀಯರ ಪ್ರಾಬಲ್ಯ ಮುಂದುವರಿದಿದೆ. ಪುರುಷರ ಸಿಂಗಲ್ಸ್‌ನಲ್ಲಿ ಕಿದಾಂಬಿ ಶ್ರೀಕಾಂತ್ ಹಾಗೂ ಸಾಯಿ ಪ್ರಣೀತ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದರೆ, ಮಹಿಳಾ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್ ಹಾಗೂ ಪಿ.ವಿ.ಸಿಂಧು ಎಂಟರ ಘಟ್ಟಕ್ಕೇರಿದ್ದಾರೆ.

ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಶ್ರೀಕಾಂತ್, ವಿಶ್ವದ ನಂ.1 ಆಟಗಾರ ಕೊರಿಯಾದ ಸೊನ್ ವಾನ್ ಹೊ ವಿರುದ್ಧ 15-21, 21-13, 21-13 ಗೇಮ್‌'ಗಳಲ್ಲಿ ಗೆಲುವು ಸಾಧಿಸಿದರು. ಕಳೆದ 5 ದಿನಗಳಲ್ಲಿ ವಿಶ್ವ ನಂ.1 ಆಟಗಾರನ ವಿರುದ್ಧ ಶ್ರೀಕಾಂತ್ ಸಾಧಿಸುತ್ತಿರುವ 2ನೇ ಗೆಲುವು ಇದಾಗಿದೆ.

ಮತ್ತೊಂದು ಪಂದ್ಯದಲ್ಲಿ ಸಾಯಿ ಪ್ರಣೀತ್, 21-15,18-21,21-13 ಗೇಮ್‌'ಗಳಲ್ಲಿ ಚೀನಾದ ಹುವಾಂಗ್ ಯುಕ್ಸಿಯಾಂಗ್ ವಿರುದ್ಧ ಜಯಿಸಿದರು. ಕ್ವಾರ್ಟರ್‌'ನಲ್ಲಿ ಶ್ರೀಕಾಂತ್ ಹಾಗೂ ಪ್ರಣೀತ್ ಮುಖಾಮುಖಿಯಾಗಲಿದ್ದಾರೆ.

ಅಮೆರಿಕದ ಸೊನಿಯಾ ಚೆಹಾ ವಿರುದ್ಧ 21-15, 20-22, 21-14 ಗೇಮ್‌'ಗಳಲ್ಲಿ ಗೆದ್ದ ಸೈನಾ 6ನೇ ಶ್ರೇಯಾಂಕಿತೆ ಚೀನಾದ ಸುನ್ ಯು ವಿರುದ್ಧ ಕ್ವಾರ್ಟರ್ ಕದನಕ್ಕೆ ಸಜ್ಜಾದರೆ, ಸಿಂಧು ಚೀನಾದ ಚೆನ್ ಕ್ಸಿಯೊಕ್ಸಿನ್ ವಿರುದ್ಧ 21-13, 21-18 ನೇರ ಗೇಮ್‌'ಗಳಲ್ಲಿ ಗೆದ್ದರು. ಕ್ವಾರ್ಟರ್ ಫೈನಲ್‌'ನಲ್ಲಿ ಸಿಂಧು ವಿಶ್ವ ನಂ.1 ತೈ ತ್ಸು ಯಿಂಗ್ ವಿರುದ್ಧ ಸೆಣಸಲಿದ್ದಾರೆ.