Australian Open: ನೋವಾಕ್ ಜೋಕೋವಿಚ್ ಅನಾಯಾಸವಾಗಿ ಕ್ವಾರ್ಟರ್‌ಗೆ ಲಗ್ಗೆ
ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮುಂದುವರೆದ ಜೋಕೋ ಗೆಲುವಿನ ಓಟ
ರಾಫೆಲ್ ನಡಾಲ್ ದಾಖಲೆ ಸರಿಗಟ್ಟುವ ವಿಶ್ವಾಸದಲ್ಲಿ ಸರ್ಬಿಯಾದ ಟೆನಿಸಿಗ
4 ಸುತ್ತಿನ ಪಂದ್ಯದಲ್ಲಿ ಸುಲಭ ಗೆಲುವು ದಾಖಲಿಸಿದ ನೋವಾಕ್ ಜೋಕೋವಿಚ್
ಮೆಲ್ಬರ್ನ್(ಜ.24): ರಾಫೆಲ್ ನಡಾಲ್‌ರ 23 ಗ್ರ್ಯಾನ್ ಸ್ಲಾಂ ಪ್ರಶಸ್ತಿಗಳ ದಾಖಲೆ ಸರಿಗಟ್ಟುವ ಉತ್ಸಾಹದಲ್ಲಿರುವ ಮಾಜಿ ನಂ.1, ಸರ್ಬಿಯಾದ ನೋವಾಕ್ ಜೋಕೋವಿಚ್ ಆಸ್ಪ್ರೇಲಿಯನ್ ಓಪನ್‌ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಸೋಮವಾರ ಪುರುಷರ ಸಿಂಗಲ್ಸ್ 4ನೇ ಸುತ್ತಿನಲ್ಲಿ 22ನೇ ಶ್ರೇಯಾಂಕಿತ, ಆಸ್ಪ್ರೇಲಿಯಾದ ಅಲೆಕ್ಸ್ ಡಿ ಮಿನಾರ್ ವಿರುದ್ಧ 6-2, 6-1, 6-2 ನೇರ ಸೆಟ್‌ಗಳಲ್ಲಿ ಸುಲಭ ಜಯ ಸಾಧಿಸಿದರು.
ಕೆಲ ದಿನಗಳ ಎಡಗಾಲಿನ ಸ್ನಾಯು ಸೆಳೆತಕ್ಕೆ ಒಳಗಾಗಿ ಟೂರ್ನಿಯಲ್ಲಿ ಮುಂದುವರಿಯುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಜೋಕೋವಿಚ್, ಈ ಪಂದ್ಯದಲ್ಲಿ ತಮ್ಮ ಎಂದಿನ ಶೈಲಿಯಲ್ಲಿ ಆಡಿ ಅನುಮಾನ ದೂರವಾಗಿಸಿದರು. ‘ಈ ಪಂದ್ಯದಲ್ಲಿ ನಾನಾಡಿದ ರೀತಿ ನಾನು ಪ್ರಶಸ್ತಿ ಗೆಲ್ಲಬಹುದು ಎನ್ನುವ ಆತ್ಮವಿಶ್ವಾಸ ಮರಳಿ ಪಡೆಯುವಂತೆ ಮಾಡಿದೆ’ ಎಂದು ಜೋಕೋ ಗೆಲುವಿನ ಬಳಿಕ ಹೇಳಿ ಸಂತಸ ವ್ಯಕ್ತಪಡಿಸಿದರು.
ಗ್ರ್ಯಾನ್ ಸ್ಲಾಂನಲ್ಲಿ ಒಟ್ಟಾರೆ 54ನೇ ಬಾರಿ, ಆಸ್ಪ್ರೇಲಿಯನ್ ಓಪನ್‌ನಲ್ಲಿ 13ನೇ ಬಾರಿ ಅಂತಿಮ 8ರ ಸುತ್ತು ಪ್ರವೇಶಿಸಿರುವ ಜೋಕೋವಿಚ್‌ಗೆ ರಷ್ಯಾದ ಆ್ಯಂಡ್ರೆ ರುಬ್ಲೆವ್ ಸವಾಲು ಎದುರಾಗಲಿದೆ. ಉಳಿದ 3 ಕ್ವಾರ್ಟರ್ ಫೈನಲ್‌ಗಳಲ್ಲಿ ಅಮೆರಿಕದ ಬೆನ್ ಶೆಲ್ಟನ್-ಟಾಮಿ ಪಾಲ್, ಗ್ರೀಸ್‌ನ ಸ್ಟೆಫಾನೋಸ್ ಸಿಟ್ಸಿಪಾಸ್-ಚೆಕ್ ಗಣರಾಜ್ಯದ ಇಜಿ ಲೆಹೆಚ್ಕಾ, ರಷ್ಯಾದ ಕರೆನ್ ಖಚನೊವ್-ಅಮೆರಿಕದ ಸೆಬಾಸ್ಟಿಯನ್ ಕೋರ್ಡಾ ಸೆಣಸಲಿದ್ದಾರೆ.
ಹಿಜಾಬ್ ಧರಿಸಿದರೆ ನಾ ನಾನಾಗಿರಲ್ಲ ಎಂದ ಇರಾನ್‌ನ ಚೆಸ್ ಆಟಗಾರ್ತಿ
ಇನ್ನು ಮಹಿಳಾ ಸಿಂಗಲ್ಸ್‌ನಲ್ಲಿ 4ನೇ ಶ್ರೇಯಾಂಕಿತೆ ಫ್ರಾನ್ಸ್‌ನ ಕ್ಯಾರೋಲಿನ್ ಗಾರ್ಸಿಯಾ 4ನೇ ಸುತ್ತಿನಲ್ಲಿ ಪೋಲೆಂಡ್‌ನ ಮಗ್ಡಾ ಲೆನೆಟ್ಟೆವಿರುದ್ಧ ಸೋಲುಂಡರು. 5ನೇ ಶ್ರೇಯಾಂಕಿತೆ ಅರೈನಾ ಸಬಲೆಂಕಾ, ಕ್ಯಾರೋಲಿನಾ ಪ್ಲಿಸ್ಕೋವಾ, ಡೊನ್ನಾ ವೆಕಿಚ್ ಅಂತಿಮ 8ರ ಸುತ್ತಿಗೇರಿದ್ದಾರೆ.
ಕ್ವಾರ್ಟರ್‌ಗೆ ಸಾನಿಯಾ-ಬೋಪಣ್ಣ
ಮಿಶ್ರ ಡಬಲ್ಸ್‌ನಲ್ಲಿ ಭಾರತದ ಸಾನಿಯಾ ಮಿರ್ಜಾ ಹಾಗೂ ರೋಹನ್ ಬೋಪಣ್ಣ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. 2ನೇ ಸುತ್ತಿನ ಪಂದ್ಯದಲ್ಲಿ ಅರ್ಜೆಂಟೀನಾದ ಬೆಹರ್ ಹಾಗೂ ಜಪಾನ್‌ನ ನಿನೊಮಿಯಾ ವಿರುದ್ಧ 6-4, 7-6(11/9)ರಲ್ಲಿ ಜಯಿಸಿದರು.
ಇಂಡೋನೇಷ್ಯಾ ಮಾಸ್ಟರ್ಸ್: ಬ್ಯಾಡ್ಮಿಂಟನ್ ಇಂದಿನಿಂದ
ಜಕಾರ್ತ: ಭಾರತದ ಅಗ್ರ ಶಟ್ಲರ್‌ಗಳಾದ ಲಕ್ಷ್ಯ ಸೇನ್, ಎಚ್.ಎಸ್.ಪ್ರಣಯ್, ಕಿದಂಬಿ ಶ್ರೀಕಾಂತ್, ಸೈನಾ ನೆಹ್ವಾಲ್ ಮಂಗಳವಾರದಿಂದ ಆರಂಭಗೊಳ್ಳಲಿರುವ ಇಂಡೋನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದ್ದಾರೆ. ಈ ವರ್ಷದ ಮೊದಲೆರಡು ಟೂರ್ನಿಗಳಲ್ಲಿ ನಿರಾಸೆ ಅನುಭವಿಸಿರುವ ಭಾರತೀಯರು, ವರ್ಷದ ಮೊದಲ ಪ್ರಶಸ್ತಿಗಾಗಿ ಕಾಯುತ್ತಿದ್ದಾರೆ. ಪಿ.ವಿ.ಸಿಂಧು, ಸಾತ್ವಿಕ್-ಚಿರಾಗ್ ಟೂರ್ನಿಯಲ್ಲಿ ಸ್ಪರ್ಧಿಸುತ್ತಿಲ್ಲ.
ಕುಸ್ತಿ ಸಂಸ್ಥೆ ಅಧ್ಯಕ್ಷ ವಿರುದ್ಧ ತನಿಖೆ: ಮೇಲ್ವಿಚಾರಣೆಗೆ ಸಮಿತಿ
ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್(ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷಣ್ ವಿರುದ್ಧದ ಲೈಂಗಿಕ ಕಿರುಕುಳ, ಕೊಲೆ ಬೆದರಿಕೆ ಆರೋಪಗಳ ತನಿಖೆ ನಡೆಸಲು ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ರಚಿಸಿರುವ 7 ಸದಸ್ಯರ ಸಮಿತಿಯ ಮೇಲ್ವಿಚಾರಣೆಗೆ ಕೇಂದ್ರ ಕ್ರೀಡಾ ಸಚಿವಾಲಯ ಐವರು ಸದಸ್ಯರ ಸಮಿತಿಯೊಂದನ್ನು ರಚಿಸಿದೆ. ಕುತೂಹಲಕಾರಿ ಅಂಶವೆಂದರೆ, ಐಒಎ ಸಮಿತಿಯಲ್ಲಿರುವ ಬಾಕ್ಸಿಂಗ್ ದಿಗ್ಗಜೆ ಮೇರಿ ಕೋಮ್ ಅವರನ್ನೇ ಮೇಲ್ವಿಚಾರಣ ಸಮಿತಿಗೆ ಮುಖ್ಯಸ್ಥೆಯಾಗಿ ನೇಮಿಸಲಾಗಿದೆ.
ಯೋಗೇಶ್ವರ್ ದತ್ ಕೂಡಾ ಎರಡೂ ಸಮಿತಿಗಳಲ್ಲಿದ್ದಾರೆ. ಮಿಷನ್ ಒಲಿಂಪಿಕ್ಸ್ ಸಮಿತಿ ಸದಸ್ಯೆ ತೃಪ್ತಿ ಮುರುಗುಂದೆ, ಟಾಫ್ಸ್‌ನ ಮಾಜಿ ಸಿಇಒ ರಾಜಗೋಪಾಲನ್ ಹಾಗೂ ಸಾಯ್‌ನ ಮಾಜಿ ಕಾರ್ಯನಿವಾರ್ಹಕ ನಿರ್ದೇಶಕಿ ರಾಧಿಕಾ ಶ್ರೀಮಾನ್ ಉಳಿದ ಮೂರು ಸದಸ್ಯರು. ಐಒಎ ಸಮಿತಿಯು 4 ವಾರಗಳಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕಿದೆ.