Asianet Suvarna News Asianet Suvarna News

Australian Open: ಸಬಲೆಂಕಾಗೆ ಚೊಚ್ಚಲ ಗ್ರ್ಯಾನ್‌ಸ್ಲಾಂ!

ಆಸ್ಟ್ರೇಲಿಯನ್ ಓಪನ್ ಟೆನಿಸ್ ಮಹಿಳಾ ಸಿಂಗಲ್ಸ್‌ನಲ್ಲಿ ಅರಿನಾ ಸಬಲೆಂಕಾ ಚಾಂಪಿಯನ್
ಚೊಚ್ಚಲ ಟೆನಿಸ್ ಗ್ರ್ಯಾನ್‌ಸ್ಲಾಂ ಜಯಿಸಿದ ಬೆಲಾರಸ್‌ನ ಟೆನಿಸ್ ಆಟಗಾರ್ತಿ
ಕಜಕಸ್ತಾನದ ಎಲೈನಾ ರಬೈಕೆನಾ ವಿರುದ್ಧ ಫೈನಲ್‌ನಲ್ಲಿ ಜಯಭೇರಿ

Australian Open 2023 Belarusian Aryna Sabalenka Crowned First Grand Slam Champion kvn
Author
First Published Jan 29, 2023, 9:55 AM IST

ಮೆಲ್ಬರ್ನ್‌(ಜ.29): 3 ಬಾರಿ ಗ್ರ್ಯಾನ್‌ ಸ್ಲಾಂ ಸೆಮಿಫೈನಲ್‌ಗಳಲ್ಲಿ ಸೋತು ಪ್ರಶಸ್ತಿಯಿಂದ ದೂರ ಉಳಿದಿದ್ದ ಬೆಲಾರಸ್‌ನ ಅರಿನಾ ಸಬಲೆಂಕಾ, ಆಸ್ಪ್ರೇಲಿಯನ್‌ ಓಪನ್‌ ಗೆಲ್ಲುವ ಮೂಲಕ ಸಿಂಗಲ್ಸ್‌ ವಿಭಾಗದಲ್ಲಿ ಚೊಚ್ಚಲ ಗ್ರ್ಯಾನ್‌ಸ್ಲಾಂ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ. ಡಬಲ್ಸ್‌ನಲ್ಲಿ 2 ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ಹೊಂದಿರುವ ಸಬಲೆಂಕಾ, ಶನಿವಾರ ನಡೆದ ಫೈನಲ್‌ನಲ್ಲಿ ಹಾಲಿ ವಿಂಬಲ್ಡನ್‌ ಚಾಂಪಿಯನ್‌, ಕಜಕಸ್ತಾನದ ಎಲೈನಾ ರಬೈಕೆನಾ ವಿರುದ್ಧ 4-6, 6-3, 6-4 ಸೆಟ್‌ಗಳಲ್ಲಿ ಜಯಿಸಿದರು.

2 ಗಂಟೆ 28 ನಿಮಿಷಗಳ ಕಾಲ ನಡೆದ ಸೆಣಸಾಟದಲ್ಲಿ ಮೊದಲ ಸೆಟ್‌ ಗೆದ್ದ 23 ವರ್ಷದ ರಬೈಕೆನಾ, 2ನೇ ಗ್ರ್ಯಾನ್‌ ಸ್ಲಾಂ ಟ್ರೋಫಿ ಎತ್ತಿಹಿಡಿಯವ ವಿಶ್ವಾಸದಲ್ಲಿದ್ದರು. ಆದರೆ ತಮ್ಮ ಬಲಿಷ್ಠ ಸವ್‌ರ್‍ ಹಾಗೂ ಆಕರ್ಷಕ ರಿಟರ್ನ್‌ಗಳ ಮೂಲಕ ಪುಟಿದೆದ್ದ ಸಬಲೆಂಕಾ ಪಂದ್ಯವನ್ನು 3ನೇ ಸೆಟ್‌ಗೆ ಕೊಂಡೊಯ್ದರು. 3ನೇ ಸೆಟ್‌ನಲ್ಲಿ 2 ಬಾರಿ ರಬೈಕೆನಾರ ಸವ್‌ರ್‍ ಮುರಿದ ಸಬಲೆಂಕಾ, ಜಯದ ಹೊಸ್ತಿಲಲ್ಲೂ ಭರ್ಜರಿ ಪೈಪೋಟಿ ಎದುರಿಸಿದರು.

Australian Open: 22ನೇ ಗ್ರ್ಯಾನ್‌ಸ್ಲಾಂ ಹೊಸ್ತಿಲಲ್ಲಿ ನೋವಾಕ್ ಜೋಕೋವಿಚ್..!

ಚಾಂಪಿಯನ್‌ಶಿಪ್‌ಗೆ ಸರ್ವ್ ಮಾಡಿದ ಸಬಲೆಂಕಾ 4 ಬಾರಿ 40-40ರಲ್ಲಿ ಡ್ಯೂಸ್‌ ಎದುರಿಸಬೇಕಾಯಿತು. ತಾಳ್ಮೆ ಕಳೆದುಕೊಳ್ಳದ ಬೆಲಾರಸ್‌ ಆಟಗಾರ್ತಿ ಪಂದ್ಯ ಕೈಜಾರದಂತೆ ಎಚ್ಚರ ವಹಿಸಿದರು. ಪಂದ್ಯದಲ್ಲಿ ಬರೋಬ್ಬರಿ 17 ಏಸ್‌ಗಳನ್ನು ಹಾಕಿದ್ದು, ಸಬಲೆಂಕಾರ ಸವ್‌ರ್‍ ಎಷ್ಟುಬಲಿಷ್ಠವಾಗಿತ್ತು ಎನ್ನುವುದಕ್ಕೆ ಉದಾಹರಣೆ.

ವಿಶ್ವ ರ‍್ಯಾಂಕಿಂಗ್‌‌ನಲ್ಲಿ ನಂ.2

ಪ್ರಶಸ್ತಿ ಗೆಲ್ಲುವ ಮೂಲಕ ಸಬಲೆಂಕಾ 2000 ರೇಟಿಂಗ್‌ ಅಂಕಗಳನ್ನು ಗಳಿಸಿದ್ದು, ಮುಂದಿನ ವಾರ ವಿಶ್ವ ರ‍್ಯಾಂಕಿಂಗ್‌‌ 2ನೇ ಸ್ಥಾನಕ್ಕೇರಲಿದ್ದಾರೆ. ಸದ್ಯ 4340 ರೇಟಿಂಗ್‌ ಅಂಕಗಳೊಂದಿಗೆ 5ನೇ ಸ್ಥಾನದಲ್ಲಿರುವ ಸಬಲೆಂಕಾ 6000 ರೇಟಿಂಗ್‌ ದಾಟಲಿದ್ದಾರೆ. 11025 ರೇಟಿಂಗ್‌ ಅಂಕ ಹೊಂದಿರುವ ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ ನಂ.1 ಸ್ಥಾನದಲ್ಲೇ ಮುಂದುವರಿಯಲಿದ್ದಾರೆ. 22ನೇ ಸ್ಥಾನದಲ್ಲಿರುವ ರಬೈಕೆನಾ ಅಗ್ರ 10ರೊಳಗೆ ಪ್ರವೇಶಿಸುವ ನಿರೀಕ್ಷೆ ಇದೆ.

17.34 ಕೋಟಿ ರು: ಚಾಂಪಿಯನ್‌ ಸಬಲೆಂಕಾಗೆ 17.34 ಕೋಟಿ ರು. ಬಹುಮಾನ ಮೊತ್ತ ದೊರೆಯಿತು.

9.47 ಕೋಟಿ ರು: ರನ್ನರ್‌-ಅಪ್‌ ರಬೈಕೆನಾಗೆ 9.47 ಕೋಟಿ ರು. ಬಹುಮಾನ ಮೊತ್ತ ದೊರೆಯಿತು.

ಈ ಗೆಲುವಿಗಾಗಿ ಸಾಕಷ್ಟು ಶ್ರಮಿಸಿದ್ದೇನೆ. ಇದು ನನ್ನೊಬ್ಬಳ ಜಯವಲ್ಲ, ನನ್ನ ತಂಡದ ಜಯ. ಬಹುಶಃ ಇದು ನನ್ನ ವೃತ್ತಿಬದುಕಿನ ಶ್ರೇಷ್ಠ ಪಂದ್ಯ - ಅರಿನಾ ಸಬಲೆಂಕಾ

ಜೋಕೋ vs ಸಿಟ್ಸಿಪಾಸ್‌ ಫೈನಲ್‌ ಸೆಣಸಾಟ ಇಂದು

ಮೆಲ್ಬರ್ನ್‌: ಪುರುಷರ ಸಿಂಗಲ್ಸ್‌ ಫೈನಲ್‌ ಭಾನುವಾರ ನಡೆಯಲಿದ್ದು ಸರ್ಬಿಯಾದ ನೋವಾಕ್‌ ಜೋಕೋವಿಚ್‌ ಹಾಗೂ ಗ್ರೀಸ್‌ನ ಸ್ಟೆಫಾನೋಸ್‌ ಸಿಟ್ಸಿಪಾಸ್‌ ಮುಖಾಮುಖಿಯಾಗಲಿದ್ದಾರೆ. 21 ಗ್ರ್ಯಾನ್‌ಸ್ಲಾಂ ಒಡೆಯ ಜೋಕೋವಿಚ್‌ ಗೆದ್ದರೆ ಸ್ಪೇನ್‌ರ ರಾಫೆಲ್‌ ನಡಾಲ್‌ರ ದಾಖಲೆಯ 22 ಗ್ರ್ಯಾನ್‌ಸ್ಲಾಂ ಗೆಲುವುಗಳ ದಾಖಲೆ ಸರಿಗಟ್ಟಲಿದ್ದಾರೆ. ಸಿಟ್ಸಿಪಾಸ್‌ ಚೊಚ್ಚಲ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದ್ದಾರೆ. 2021ರ ಫ್ರೆಂಚ್‌ ಓಪನ್‌ ಫೈನಲಲ್ಲಿ ಜೋಕೋವಿಚ್‌ ವಿರುದ್ಧ ಸಿಟ್ಸಿಪಾಸ್‌ ಸೋತಿದ್ದರು. ಭಾನುವಾರದ ಪಂದ್ಯ ಗೆಲ್ಲುವ ಆಟಗಾರ ವಿಶ್ವ ರಾರ‍ಯಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಲಿದ್ದಾರೆ.

ಪಂದ್ಯ ಆರಂಭ: ಮಧ್ಯಾಹ್ನ 2ಕ್ಕೆ, ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್


 

Follow Us:
Download App:
  • android
  • ios