ಡೇನಿಸ್ ಲಿಲ್ಲಿ ದಾಖಲೆ ಅಳಿಸಿ ಹಾಕಿದ ನೇಥನ್ ಲಯನ್..!
ಕೆಲ ವರ್ಷಗಳ ಹಿಂದಷ್ಟೇ ಕ್ರಿಕೆಟ್ ಮೈದಾನದ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ನೇಥನ್ ಲಯನ್ ಇದೀಗ ಆಸ್ಟ್ರೇಲಿಯಾ ಪರ ಗರಿಷ್ಠ ವಿಕೆಟ್ ಪಡೆದ ಮೂರನೇ ಬೌಲರ್ ಎನ್ನುವ ದಾಖಲೆ ಬರೆದಿದ್ದಾರೆ. ಆಸೀಸ್ ದಿಗ್ಗಜ ವೇಗಿ ಡೇನಿಸ್ ಲಿಲ್ಲಿ ಹಿಂದಿಕ್ಕಿ ಲಯನ್ ಈ ಸಾಧನೆ ಮಾಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಲೀಡ್ಸ್[ಆ.25]: ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಜಗತ್ತಿಗೆ ಪರಿಚಯಿಸಿದ ದಿಗ್ಗಜ ವೇಗದ ಬೌಲರ್’ಗಳಲ್ಲಿ ಒಬ್ಬರು ಎನಿಸಿಕೊಂಡಿದ್ದ ಡೇನಿಸ್ ಲಿಲ್ಲಿ ಹೆಸರಿನಲ್ಲಿದ್ದ ದಾಖಲೆ ಇದೀಗ ಆಸೀಸ್ ಸ್ಪಿನ್ನರ್ ನೇಥನ್ ಲಯನ್ ಪಾಲಾಗಿದೆ. 2010ರಲ್ಲಿ ಆಸ್ಟ್ರೇಲಿಯಾದ ಕ್ರಿಕೆಟ್ ಮೈದಾನದಲ್ಲಿ ಗ್ರೌಂಡ್ ಸ್ಟಾಪ್ ಆಗಿ ಕೆಲಸ ಮಾಡುತ್ತಿದ್ದ ಲಯನ್ ಇದೀಗ ಆಸೀಸ್ ಪರ ಟೆಸ್ಟ್ ಕ್ರಿಕೆಟ್’ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿ ಬೆಳೆದು ನಿಂತಿದ್ದಾರೆ.
ಆ್ಯಷಸ್ ಕದನ: ಲೀಡ್ಸ್ ಟೆಸ್ಟ್‌ನಲ್ಲಿ ಇತಿಹಾಸ ಬರೆಯುತ್ತಾ ಇಂಗ್ಲೆಂಡ್..?
ಆ್ಯಷಸ್ ಸರಣಿಯ ಲೀಡ್ಸ್ ಟೆಸ್ಟ್’ನ ಎರಡನೇ ಇನಿಂಗ್ಸ್’ನಲ್ಲಿ ಇಂಗ್ಲೆಂಡ್ ನಾಯಕ ಜೋ ರೂಟ್ ವಿಕೆಟ್ ಪಡೆಯುವುರೊಂದಿಗೆ ಆಸ್ಟ್ರೇಲಿಯಾ ಪರ ಗರಿಷ್ಠ ಟೆಸ್ಟ್ ವಿಕೆಟ್ ಪಡೆದ ಮೂರನೇ ಬೌಲರ್ ಎನ್ನುವ ದಾಖಲೆ ನಿರ್ಮಿಸಿದರು. ಮೊದಲೆರಡು ಸ್ಥಾನಗಳಲ್ಲಿ ಶೇನ್ ವಾರ್ನ್ ಹಾಗೂ ಗ್ಲೇನ್ ಮೆಗ್ರಾತ್ ಇದ್ದಾರೆ.
ಹೌದು, ಲೀಡ್ಸ್ ಟೆಸ್ಟ್’ನ ಮೊದಲ ಇನಿಂಗ್ಸ್’ನಲ್ಲಿ ಆಫ್ ಸ್ಪಿನ್ನರ್ ನೇಥನ್ ಲಯನ್ 68 ರನ್ ನೀಡಿ 3 ವಿಕೆಟ್ ಪಡೆಯುವುದರೊಂದಿಗೆ ಡೇನಿಸ್ ಲಿಲ್ಲಿ[355 ವಿಕೆಟ್] ಅವರ ವಿಕೆಟ್ ಸಾಧನೆಯನ್ನು ಸರಿಗಟ್ಟಿದ್ದರು. ಇದೀಗ ಎರಡನೇ ಇನಿಂಗ್ಸ್’ನಲ್ಲಿ ರೂಟ್ ವಿಕೆಟ್ ಪಡೆಯುವುದರೊಂದಿಗೆ ಲಿಲ್ಲಿ ಹಿಂದಿಕ್ಕಿ ಲಯನ್ ಇದೀಗ ಮೂರನೇ ಸ್ಥಾನಕ್ಕೇರಿದ್ದಾರೆ. ಡೇನಿಸ್ ಲಿಲ್ಲಿ 70 ಟೆಸ್ಟ್ ಪಂದ್ಯಗಳಲ್ಲಿ 355 ವಿಕೆಟ್ ಪಡೆದರೆ, ನೇಥನ್ ಲಯನ್ 89ನೇ ಪಂದ್ಯದಲ್ಲಿ 356 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಶೇನ್ ವಾರ್ನ್ ನಿವೃತ್ತಿಯ ಬಳಿಕ ಆಸ್ಟ್ರೇಲಿಯಾ ತಂಡದ ಪ್ರಮುಖ ಸ್ಪಿನ್ನರ್ ಆಗಿ ಬೆಳೆದು ನಿಂತಿರುವ ಲಯನ್ ಕಾಂಗರೂ ಪಡೆಗೆ ಹಲವಾರು ಸ್ಮರಣೀಯ ಗೆಲುವು ತಂದುಕೊಟ್ಟಿದ್ದಾರೆ.
ಟೆಸ್ಟ್ ಪಂದ್ಯದ ನಡುವೆ 'ಇಗೋ' ಬುಕ್ ಓದಿದ ಕೊಹ್ಲಿ ಟ್ರೋಲ್!
ಆಸ್ಟ್ರೇಲಿಯಾ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನ್ನುವ ದಾಖಲೆ ಲೆಗ್ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಹೆಸರಿನಲ್ಲಿದೆ. ವಾರ್ನ್ 145 ಪಂದ್ಯಗಳಲ್ಲಿ 708 ವಿಕೆಟ್ ಪಡೆದರೆ, ಗ್ಲೇನ್ ಮೆಗ್ರಾತ್ 124 ಪಂದ್ಯಗಳನ್ನಾಡಿ 563 ವಿಕೆಟ್ ಪಡೆದಿದ್ದಾರೆ. ಇನ್ನು ಒಟ್ಟಾರೆ ಟೆಸ್ಟ್ ಕ್ರಿಕೆಟ್’ನಲ್ಲಿ ಗರಿಷ್ಠ ವಿಕೆಟ್ ಪಡೆದ ದಾಖಲೆ ಶ್ರೀಲಂಕಾ ಮಾಜಿ ಸ್ಪಿನ್ನರ್ ಮುತ್ತಯ್ಯ ಮುರುಳೀಧರನ್ ಹೆಸರಿನಲ್ಲಿದೆ. ಮುರುಳಿ ಟೆಸ್ಟ್ ಕ್ರಿಕೆಟ್’ನಲ್ಲಿ 800 ವಿಕೆಟ್ ಕಬಳಿಸಿದ್ದಾರೆ.