ಲೀಡ್ಸ್[ಆ.25]: ಆತಿಥೇಯ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಆ್ಯಷಸ್ ಸರಣಿಯ ಮೂರನೇ ಟೆಸ್ಟ್ ರೋಚಕಘಟ್ಟದತ್ತ ಸಾಗುತ್ತಿದ್ದು, ಮೂರನೇ ದಿನದಂತ್ಯಕ್ಕೆ ಇಂಗ್ಲೆಂಡ್ 3 ವಿಕೆಟ್ ಕಳೆದುಕೊಂಡು 156 ರನ್ ಬಾರಿಸಿದೆ. ಇನ್ನು 203 ರನ್ ಬಾರಿಸಿದರೆ ಇಂಗ್ಲೆಂಡ್ ಆ್ಯಷಸ್ ಕ್ರಿಕೆಟ್ ಇತಿಹಾಸದಲ್ಲೇ ಅಪರೂಪದ ದಾಖಲೆ ಬರೆಯಲಿದೆ.

ಆ್ಯಷಸ್ ಟೆಸ್ಟ್: 67ಕ್ಕೆ ಇಂಗ್ಲೆಂಡ್ ಆಲೌಟ್, ಆಂಗ್ಲರ ಬೆಂಡೆತ್ತಿದ ಫ್ಯಾನ್ಸ್!

ಹೌದು, 1882ರಿಂದ ಆರಂಭವಾಗಿರುವ ಆ್ಯಷಸ್ ಸರಣಿಯಲ್ಲಿ ಇಂಗ್ಲೆಂಡ್ ನಾಲ್ಕನೇ ಇನಿಂಗ್ಸ್’ನಲ್ಲಿ 340+ ರನ್’ಗಳ ಗುರಿಯನ್ನು ಇದುವರೆಗೂ ಬೆನ್ನಟ್ಟಿ ಯಶಸ್ವಿಯಾಗಿಲ್ಲ. ಆದರೆ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು 359 ರನ್’ಗಳ ಗುರಿ ಬೆನ್ನತ್ತಿದ್ದು, ಈಗಾಗಲೇ 3 ವಿಕೆಟ್ ಕಳೆದುಕೊಂಡು 150+ ರನ್ ಬಾರಿಸಿದೆ. ಇನ್ನೆರಡು ದಿನ ಪಂದ್ಯ ಬಾಕಿಯಿದ್ದು, ಒಂದು ವೇಳೆ ಇನ್ನು ಕೇವಲ 203 ರನ್ ಬಾರಿಸಿದರೆ ಇಂಗ್ಲೆಂಡ್ ಚಾರಿತ್ರಿಕ ಸಾಧನೆ ಮಾಡಲಿದೆ. ಕೆಲ ತಿಂಗಳ ಹಿಂದಷ್ಟೇ ಇಂಗ್ಲೆಂಡ್ ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದು ಸಂಭ್ರಮಿಸಿತ್ತು. ಇದೀಗ ಆ್ಯಷಸ್ ಸರಣಿಯ ಈ ಪಂದ್ಯ ಗೆದ್ದು, ಸರಣಿಯಲ್ಲಿ ಸಮಬಲ ಸಾಧಿಸಲು ಎದುರು ನೋಡುತ್ತಿದೆ ಆಂಗ್ಲರ ಪಡೆ.

ಒಂದು ವಿಕೆಟ್, 3 ಅಪರೂಪದ ದಾಖಲೆ: ಇದು ಬುಮ್ರಾ ಮ್ಯಾಜಿಕ್..!

ಇಂಗ್ಲೆಂಡ್’ಗಿದೆ ಆತ್ಮವಿಶ್ವಾಸದ ಬಲ: ಹೌದು, ಈ ಪಂದ್ಯ ಗೆಲ್ಲಲು ಇಂಗ್ಲೆಂಡ್ ಸಾಕಷ್ಟು ಬೆವರು ಹರಿಸಲಿದೆ. ಕಳೆದೆರಡು ಟೆಸ್ಟ್ ಪಂದ್ಯಗಳಲ್ಲಿ ಹೀನಾಯ ಪ್ರದರ್ಶನ ತೋರಿದ್ದ ಇಂಗ್ಲೆಂಡ್ ನಾಯಕ ಜೋ ರೂಟ್ ಅಜೇಯ 75 ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದರೆ, ಇನ್ನು ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಸಿ ಮಿಂಚಿದ್ದ ಬೆನ್ ಸ್ಟೋಕ್ಸ್ ಮತ್ತೊಮ್ಮೆ ತಂಡದ ಪಾಲಿಗೆ ಹೀರೋ ಎನಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಇದಷ್ಟೇ ಅಲ್ಲದೇ ತಂಡದ ಪ್ರಮುಖ ಬ್ಯಾಟ್ಸ್’ಮನ್’ಗಳಾದ ಜೋಸ್ ಬಟ್ಲರ್, ಜಾನಿ ಬೇರ್’ಸ್ಟೋ ಹಾಗೂ ಆಲ್ರೌಂಡರ್ ಕ್ರಿಸ್ ವೋಕ್ಸ್ ಕೂಡಾ ತಂಡಕ್ಕೆ ಉಪಯುಕ್ತ ರನ್ ಕೊಡುಗೆ ನೀಡುವ ಕ್ಷಮತೆ ಹೊಂದಿದ್ದಾರೆ. ಹೀಗಾಗಿ ಈ ಪಂದ್ಯವನ್ನು ಇನ್ನೊಂದು ದಿನ ಬಾಕಿ ಇರುವಾಗಲೇ ಇಂಗ್ಲೆಂಡ್ ಕೈವಶ ಮಾಡಿಕೊಳ್ಳುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ದುಕೊಂಡಿತ್ತು. ಮೊದಲ ಇನಿಂಗ್ಸ್’ನಲ್ಲಿ ಆಸ್ಟ್ರೇಲಿಯಾ  179 ರನ್’ಗಳಿಗೆ ಸರ್ವಪತನ ಕಂಡಿತು. ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಜೋಸ್ ಹ್ಯಾಜಲ್’ವುಡ್ ದಾಳಿಗೆ ತತ್ತರಿಸಿ ಕೇವಲ 67 ರನ್’ಗಳಿಗೆ ಮುಗ್ಗರಿಸಿ ಮುಖಭಂಗ ಅನುಭವಿಸಿತು. ಇನ್ನು ಎರಡನೇ ಇನಿಂಗ್ಸ್’ನಲ್ಲಿ ಆಸ್ಟ್ರೇಲಿಯಾ 246 ರನ್ ಬಾರಿಸುವುದರೊಂದಿಗೆ ಇಂಗ್ಲೆಂಡ್’ಗೆ ಗೆಲ್ಲಲು 359 ರನ್’ಗಳ ಗುರಿ ನೀಡಿದೆ.