ಮೆಲ್ಬರ್ನ್‌[ಮೇ.01]: ಆಸ್ಪ್ರೇಲಿಯಾ ಕ್ರಿಕೆಟಿಗ ಜೇಮ್ಸ್‌ ಫೌಕ್ನರ್‌ ಸಲಿಂಗಕಾಮಿ ಎಂದು ಘೋಷಿಸಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ತಾಣಗಳಲ್ಲಿ, ಆಸ್ಪ್ರೇಲಿಯಾ, ಭಾರತ ಸೇರಿದಂತೆ ಹಲವು ದೇಶಗಳ ಮಾಧ್ಯಮಗಳಲ್ಲಿ ಹರಿದಾಡಿತ್ತು. ಆದರೆ ಈ ಸುದ್ದಿ ಹಬ್ಬಲು ಫೌಕ್ನರ್‌ ಮಾಡಿದ ಎಡವಟ್ಟೇ ಕಾರಣ.

ಹೌದು, ಭಾನುವಾರ ಹುಟ್ಟುಹಬ್ಬ ಆಚರಿಸಿಕೊಂಡ ಫೌಕ್ನರ್‌, ತಮ್ಮ ತಾಯಿ ಹಾಗೂ ಸ್ನೇಹಿತನ ಜತೆ ಊಟ ಮಾಡುತ್ತಿರುವ ಫೋಟೋವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿ, ‘ಬಾಯ್‌ಫ್ರೆಂಡ್‌ ಹಾಗೂ ತಾಯಿ ಜತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದೇನೆ’ ಎಂದು ಶೀರ್ಷಿಕೆ ಬರೆದಿದ್ದರು. ಗ್ಲೆನ್‌ ಮ್ಯಾಕ್ಸ್‌ವೆಲ್‌ ಸೇರಿದಂತೆ ಹಲವು ಕ್ರಿಕೆಟಿಗರು ಸಹ ಫೌಕ್ನರ್‌, ಬಹಿರಂಗವಾಗಿ ಸಲಿಂಗಕಾಮಿ ಎಂದು ಒಪ್ಪಿಕೊಂಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಸೋಮವಾರ ಫೌಕ್ನರ್‌ ತಮ್ಮ ಫೋಟೋ ಶೀರ್ಷಿಕೆಯಿಂದ ಆದ ಎಡವಟ್ಟನ್ನು ಸರಿಪಡಿಸಿದ್ದಾರೆ. ‘ನಾನು ಸಲಿಂಗಕಾಮಿ ಅಲ್ಲ. ಫೋಟೋದಲ್ಲಿರುವ ವ್ಯಕ್ತಿ ನನ್ನ ಆಪ್ತ ಸ್ನೇಹಿತ’ ಎಂದು ಆಸೀಸ್‌ ಕ್ರಿಕೆಟಿಗ ಸ್ಪಷ್ಟಪಡಿಸಿದ್ದಾರೆ.

2015ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್’ನಲ್ಲಿ ನ್ಯೂಜಿಲೆಂಡ್ ವಿರುದ್ಧ ಜೇಮ್ಸ್ ಫೌಕ್ನರ್‌ ಪ್ರಮುಖ ಮೂರು ವಿಕೆಟ್ ಕಬಳಿಸುವ ಮೂಲಕ ಆಸ್ಟ್ರೇಲಿಯಾ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೇ ವಿಶ್ವಕಪ್ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಗೌರವಕ್ಕೂ ಫೌಕ್ನರ್ ಭಾಜನರಾಗಿದ್ದರು.