ನವದೆಹಲಿ(ನ.11): ಹೊಸ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿ ಜಯ ಸಾಧಿಸಿ ಹುಮ್ಮಸ್ಸಿನಲ್ಲಿರುವ ಭಾರತ ತಂಡ, ಫೆ. 24 ರಿಂದ ತವರಿನಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ಸಜ್ಜಾಗಬೇಕಿದೆ. ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ 2 ಟಿ20 ಮತ್ತು 5 ಏಕದಿನ ಪಂದ್ಯಗಳ ವೇಳಾಪಟ್ಟಿಯನ್ನು ಗುರುವಾರ ಬಿಸಿಸಿಐ ಪ್ರಕಟಿಸಿದೆ. ಫೆ. 24ರಿಂದ ಮಾ. 13 ರವರೆಗೆ ಟಿ20 ಮತ್ತು ಏಕದಿನ ಸರಣಿಯನ್ನು ಆಯೋಜಿಸಲಾಗಿದೆ.

ಫೆ. 24 ಮತ್ತು ಫೆ. 27 ರಂದು 2 ಟಿ20 ಪಂದ್ಯಗಳು ನಡೆಯಲಿವೆ. ಇದರಲ್ಲಿ ಮೊದಲ ಟಿ20 ಪಂದ್ಯಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಿದೆ. ಇನ್ನೂ 2ನೇ ಟಿ20 ಪಂದ್ಯ ವಿಶಾಖಪಟ್ಟಣದಲ್ಲಿ ನಡೆಯಲಿದೆ. 5 ಏಕದಿನ ಪಂದ್ಯಗಳ ಸರಣಿಯಲ್ಲಿ ಮಾ.2 ರಂದು ಹೈದರಾಬಾದ್‌ನಲ್ಲಿ ಮೊದಲ ಪಂದ್ಯ, 2ನೇ ಪಂದ್ಯ ಮಾ. 5ರಂದು ನಾಗ್ಪುರದಲ್ಲಿ, ಮಾ.8ರಂದು ರಾಂಚಿಯಲ್ಲಿ 3ನೇ ಪಂದ್ಯ, ಮಾ. 10 ರಂದು ಮೊಹಾಲಿಯಲ್ಲಿ 4ನೇ ಪಂದ್ಯ ಹಾಗೂ ಮಾ. 13ರಂದು ನವದೆಹಲಿಯಲ್ಲಿ 5ನೇ ಪಂದ್ಯ ನಡೆಯಲಿದೆ.

ಏಕದಿನದಲ್ಲಿ ಭಾರತಕ್ಕೆ ನಂ.1 ಚಾನ್ಸ್..!

ಹಗಲು-ರಾತ್ರಿ ಪಂದ್ಯಗಳು: ಆಸ್ಟ್ರೇಲಿಯಾ ವಿರುದ್ಧ ಭಾರತದಲ್ಲಿ ನಡೆಯಲಿರುವ ಎಲ್ಲ ಟಿ20 ಮತ್ತು ಏಕದಿನ ಪಂದ್ಯಗಳು ಹಗಲು-ರಾತ್ರಿ ಯಲ್ಲಿ ನಡೆಯಲಿವೆ. ಟಿ20 ಪಂದ್ಯಗಳು ಸಂಜೆ 7ಕ್ಕೆ ಆರಂಭವಾಗಲಿವೆ. ಇನ್ನೂ 5 ಏಕದಿನ ಪಂದ್ಯಗಳು ಮಧ್ಯಾಹ್ನ 1.30 ರಿಂದ ಆರಂಭವಾಗಲಿವೆ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಮೇ.30 ರಿಂದ ಇಂಗ್ಲೆಂಡ್‌ನಲ್ಲಿ ಆರಂಭವಾಗಲಿರುವ ವಿಶ್ವಕಪ್ ಟೂರ್ನಿಗೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಭಾರತ ಪ್ರವಾಸ ಕೊನೆಯದ್ದಾಗಿದೆ. ಆದರೆ ಭಾರತಕ್ಕೆ ಆಸೀಸ್ ಸರಣಿ ಅಲ್ಲದೇ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿಯೂ ಆಡಬೇಕಿದೆ.