ಬ್ರಿಸ್ಬೇನ್(ಸೆ.15): ಆತಿಥೇಯ ಬೌಲರ್‌ಗಳ ಬಿರುಸಿನ ದಾಳಿಯ ನಡುವೆಯೂ ಎದೆಗುಂದದೆ ನಿಂತ ಭಾರತ ಎ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹಾರ್ದಿಕ್ ಪಾಂಡ್ಯ(79;112 ಎಸೆತ, 9 ಬೌಂಡರಿ, 1 ಸಿಕ್ಸರ್) ಆಕರ್ಷಕ ಬ್ಯಾಟಿಂಗ್‌ನಿಂದ ಗಮನಸೆಳೆದರು.
ಅಲ್ಲದೇ ಆಸೀಸ್ ಎದುರು, ಭಾರತ ತಂಡವನ್ನು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಿಂದ ಪಾರು ಮಾಡಿದರು. ಇಲ್ಲಿನ ಆಲನ್ ಬಾರ್ಡರ್ ಮೈದಾನದಲ್ಲಿ ಆರಂಭವಾದ 2ನೇ ಅನಧಿಕೃತ ಟೆಸ್ಟ್ ಪಂದ್ಯದ ಮೊದಲ ದಿನವಾದ ಗುರುವಾರ ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ಎ ತಂಡ ಮಂದ ಬೆಳಕಿನ ಕಾರಣದಿಂದ ನಿಗದಿತ ವೇಳೆಗಿಂತ ಬೇಗನೆ ಮುಕ್ತಾಯವಾಯಿತು. ದಿನದಾಂತ್ಯಕ್ಕೆ 9 ವಿಕೆಟ್‌ಗೆ 169 ರನ್‌ಗಳಿಸಿದೆ. ದೊಡ್ಡ ಮೊತ್ತ ಸೇರಿಸುವ ಹುಮ್ಮಸ್ಸಿನಲ್ಲಿ ಕಣಕ್ಕಿಳಿದಿದ್ದ ಪ್ರವಾಸಿ ಭಾರತ ತಂಡಕ್ಕೆ ಆಸೀಸ್ ತಂಡದ ಬೌಲರ್‌ಗಳು ಕಂಟಕವಾದರು. ಆರಂಭದಲ್ಲಿ ನಿರಂತರ ಶೋಷಣೆಗೆ ಒಳಗಾದ ಭಾರತ ಎ ತಂಡ ಒಂದು ಹಂತದಲ್ಲಿ 46ರನ್‌ಗಳಿಗೆ ಪ್ರಮುಖ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಹೆರ್ವಾಡ್ಕರ್ (9), ಫಜಲ್ (0), ಕರುಣ್ ನಾಯರ್ (1), ಮನೀಶ್ ಪಾಂಡೆ (0) ನಾಯಕ ನಮಾನ್ ಓಜಾ (19), ಸಂಜು ಸ್ಯಾಮ್ಸನ್ (13) ಬೇಗನೆ ವಿಕೆಟ್ ಒಪ್ಪಿಸಿದರು. ಈ ವೇಳೆ 7ನೇ ವಿಕೆಟ್‌ಗೆ ಜೊತೆಯಾದ ಹಾರ್ದಿಕ್ ಪಾಂಡ್ಯ ಮತ್ತು ಜಯಂತ್ ಯಾದವ್ ತಂಡದ ಮೊತ್ತವನ್ನು ನಿಧಾನವಾಗಿ ಹೆಚ್ಚಿಸಿದರು. ಈ ಇಬ್ಬರು ಆಟಗಾರರು 22 ಓವರ್‌ಗಳಲ್ಲಿ 78ರನ್‌ಗಳ ಜೊತೆಯಾಟ ನೀಡಿ ತಂಡಕ್ಕೆ ಕೊಂಚ ನೆರವಾದರು. ತಾಳ್ಮೆಯ ಬ್ಯಾಟಿಂಗ್ ಮಾಡಿದ ಜಯಂತ್ (28)ರನ್‌ಗಳಿಸಿ ಔಟ್ ಆದರು. ನಂತರ ಧವಳ್ ಕುಲಕರ್ಣಿ (11), ಶಾರ್ದೂಲ್ ಠಾಕೂರ್ (5) ರನ್‌ಗಳಿಸಿ ಪೆವಿಲಿಯನ್ ಸೇರಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಗಟ್ಟಿಯಾಗಿ ನೆಲೆಯೂರಿದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಆಸೀಸ್ ಬೌಲರ್‌ಗಳನ್ನು ದಿಟ್ಟತನದಿಂದ ಎದುರಿಸಿ ಆಕರ್ಷಕ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾದರು.
ಹಾರ್ದಿಕ್ (79), ವರುಣ್ ಆ್ಯರೋನ್ (0) 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇನ್ನು ಆಸ್ಪ್ರೇಲಿಯಾ ಪರ ಮಾರಕ ಬೌಲಿಂಗ್ ದಾಳಿ ಸಂಘಟಿಸಿದ ಕೇನ್ ರಿಚರ್ಡ್ಸ್ನ್, ಜಾಕ್ಸನ್ ಬಿರ್ಡ್ ತಲಾ 3 ವಿಕೆಟ್ ಪಡೆದು ಮಿಂಚಿದರು.
ಸಂಕ್ಷಿಪ್ತ ಸ್ಕೋರ್
ಭಾರತ ಎ ಮೊದಲ ಇನಿಂಗ್ಸ್ 66 ಓವರ್‌ಗಳಲ್ಲಿ 9 ವಿಕೆಟ್‌ಗೆ 169
(ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ 79, ಜಯಂತ್ 28, ರಿಚರ್ಡ್ಸ್ನ್ 37ಕ್ಕೆ3)
