ಪೆನಾಲ್ಟಿ ಶೂಟೌಟ್'ನಲ್ಲಿ ಕೋಲ್ಕತಾ 4-3 ಗೋಲುಗಳ ಅಂತರದಲ್ಲಿ ಕೇರಳ ತಂಡವನ್ನು ಮಣಿಸುವ ಮೂಲಕ ಎರಡನೇ ಬಾರಿಗೆ ಚಾಂಪಿಯನ್ ಆಯಿತು.
ಕೊಚ್ಚಿ(ಡಿ.18): ಪಂದ್ಯದುದ್ದಕ್ಕೂ ನಡೆದ ರೋಚಕ ಕಾದಾಟದಲ್ಲಿ ಅಟ್ಲಾಟಿಕೊ ಡಿ ಕೋಲ್ಕತಾ ತಂಡ, ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ 1-1(4-3) ಗೋಲುಗಳಿಂದ ಕೇರಳ ಬ್ಲಾಸ್ಟರ್ಸ್ ಎದುರು ಜಯಗಳಿಸಿದೆ. ಇದರೊಂದಿಗೆ ಪ್ರವಾಸಿ ಕೋಲ್ಕತಾ ತಂಡ ಎರಡನೇ ಬಾರಿ ಟ್ರೋಫಿ ಜಯಿಸಿದೆ. ವಿರೋಚಿತ ಸೋಲುಂಡ ಆತಿಥೇಯ ಕೇರಳ ರನ್ನರ್ ಅಪ್‌ಗೆ ತೃಪ್ತಿಪಟ್ಟಿದೆ.
ಇಲ್ಲಿನ ಜವಹಾರ್‌ಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಕೇರಳ ಬ್ಲಾಸ್ಟರ್ಸ್ ಪರ ಮುನ್ಪಡೆ ಆಟಗಾರ ಎಂ.ರಫಿ 37ನೇ ನಿಮಿಷದಲ್ಲಿ ಗೋಲುಗಳಿಸಿದರು. ಅಟ್ಲಾಟಿಕೊ ಡಿ ಕೋಲ್ಕತಾ ತಂಡದ ಪರ ಸೆರೆನೊ 44ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.
ಪಂದ್ಯದ ಪೂರ್ಣಾವಧಿ ಆಟದಲ್ಲಿ ಎರಡು ತಂಡಗಳು ತಲಾ 1 ಗೋಲುಗಳಿಸಿದ ಪರಿಣಾಮ ಪಂದ್ಯ ಡ್ರಾದಲ್ಲಿ ಅಂತ್ಯವಾಗಿತ್ತು. ಫಲಿತಾಂಶಕ್ಕಾಗಿ ಹೆಚ್ಚುವರಿ 30 ನಿಮಿಷಗಳ ಆಟದಲ್ಲಿ ಯಾವುದೇ ಗೋಲುಗಳು ದಾಖಲಾಗಲಿಲ್ಲ. ಹೀಗಾಗಿ ಎರಡು ತಂಡಗಳಿಗೆ ತಲಾ 4 ಪೆನಾಲ್ಟಿ ಶೂಟೌಟ್ ನೀಡಲಾಯಿತು.
ಪಂದ್ಯದ ಆರಂಭದಿಂದಲೂ ಎರಡು ತಂಡಗಳ ಆಟಗಾರರ ನಡುವೆ ಉತ್ತಮ ಪೈಪೋಟಿ ಕಂಡುಬಂತು. ಮೊದಲಾರ್ಧದಲ್ಲಿಯೇ ಗೋಲುಗಳಿಸಿ ಎದುರಾಳಿ ತಂಡದ ಮೇಲೆ ಒತ್ತಡ ಹೇರುವ ಆತಿಥೇಯರ ತಂತ್ರಗಾರಿಕೆಗೆ 37ನೇ ನಿಮಿಷದಲ್ಲಿ ಯಶಸ್ಸು ಸಿಕ್ಕಿತು. ಕೇರಳ ತಂಡದ ಸ್ಟ್ರೈಕರ್ ರಫಿ, ಕೋಲ್ಕತಾದ ರಕ್ಷಣಾ ಕೋಟೆಯನ್ನು ಬೇಸಿದ್ದಲ್ಲದೇ ಗೋಲ್ ಕೀಪರ್ ಅವರನ್ನು ವಂಚಿಸಿ ಗೋಲುಗಳಿಸುವಲ್ಲಿ ಸಫಲರಾದರು. ಇದರೊಂದಿಗೆ ಕೇರಳ ತಂಡ 1-0ಯಿಂದ ಮುನ್ನಡೆ ಸಾಧಿಸಿತು.
ಇದಾದ ಬಳಿಕ ಕೋಲ್ಕತಾ ತಂಡದ ಆಟಗಾರರು ಸಾಕಷ್ಟು ಒತ್ತಡದಲ್ಲಿ ಆಡಿದರು. ಆದರೆ ನಂತರದ 7ನೇ ನಿಮಿಷದಲ್ಲಿ ಮೊದಲ ಅವಧಿಯ ಅಂತ್ಯಕ್ಕೆ ಇನ್ನೊಂದು ನಿಮಿಷ ಬಾಕಿ ಇದ್ದಾಗ ಕೋಲ್ಕತಾದ ಸೆರೆನೊ ಆಕರ್ಷಕ ಗೋಲು ದಾಖಲಿಸಿ 1-1ರಿಂದ ಸಮಬಲ ಸಾಧಿಸಿದರು. ಈ ವೇಳೆ ಕೋಲ್ಕತಾ ಆಟಗಾರರು ನಿಟ್ಟುಸಿರು ಬಿಟ್ಟರು.
ನಂತರ ಪೆನಾಲ್ಟಿ ಶೂಟೌಟ್'ನಲ್ಲಿ ಕೋಲ್ಕತಾ 4-3 ಗೋಲುಗಳ ಅಂತರದಲ್ಲಿ ಕೇರಳ ತಂಡವನ್ನು ಮಣಿಸುವ ಮೂಲಕ ಎರಡನೇ ಬಾರಿಗೆ ಚಾಂಪಿಯನ್ ಆಯಿತು.
