ಪಾಕ್‌ನ ಆರ್ಶದ್‌ ಸೋಲಿಸಿ ಚಿನ್ನ ಗೆದ್ದ ನೀರಜ್‌..! ಹೃದಯ ಗೆದ್ದ ಚೋಪ್ರಾ ತಾಯಿಯ ಮುತ್ತಿನಂತ ಮಾತು..!

ನೀರಜ್ ಚೋಪ್ರಾಗೆ ಕಠಿಣ ಪೈಪೋಟಿ ನೀಡಿದ ಪಾಕಿಸ್ತಾನದ ಅರ್ಶದ್‌ ನದೀಂ ತಮ್ಮ 3ನೇ ಪ್ರಯತ್ನದಲ್ಲಿ 87.82 ಮೀ. ದೂರಕ್ಕೆ ಎಸೆದು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಚೆಕ್‌ ಗಣರಾಜ್ಯದ ಜಾಕುಬ್‌ ವೆಡ್ಲೆಜ್‌ 86.67 ಮೀ. ದೂರಕ್ಕೆ ಜಾವೆಲಿನ್‌ ಎಸೆದು ಕಂಚಿನ ಪದಕ ತಮ್ಮದಾಗಿಸಿಕೊಂಡರು.

Asked About Son Win Over Pakistan Arshad Nadeem Neeraj Chopra Mother Gives Stunning Reply kvn

ಬುಡಾಪೆಸ್ಟ್(ಆ.29): ಚಿನ್ನದ ಹುಡುಗ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಇದೀಗ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸುವ ಮೂಲಕ ತಮ್ಮ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನ ಪುರುಷರ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಜಯಿಸುವ ಮೂಲಕ ಭಾರತೀಯರ ಮನೆಮಾತಾಗಿರುವ ನೀರಜ್ ಚೋಪ್ರಾ, ಇದೀಗ ಮತ್ತೊಮ್ಮೆ ಐತಿಹಾಸಿಕ ಸಾಧನೆ ಮಾಡಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಮೊದಲ ಹಾಗೂ ಏಕೈಕ ಭಾರತೀಯ ಎನ್ನುವ ಹಿರಿಮೆ ಇದೀಗ ನೀರಜ್ ಚೋಪ್ರಾ ಪಾಲಾಗಿದೆ.

ಹೌದು, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಪುರುಷರ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ಇದೇ ಮೊದಲ ಬಾರಿಗೆ ನೀರಜ್ ಚೋಪ್ರಾ, ಮನು ಡಿಪಿ ಹಾಗೂ ಕಿಶೋರ್‌ ಜೆನಾ ಫೈನಲ್‌ಗೇರುವ ಮೂಲಕ ಚಾರಿತ್ರಿಕ ಸಾಧನೆ ಮಾಡಿದ್ದರು. ಆದರೆ ಫೈನಲ್‌ನಲ್ಲಿ ನೀರಜ್ ಚೋಪ್ರಾ ಮಾತ್ರ ಪದಕ ಗೆಲ್ಲಲು ಸಫಲರಾದರು. ಇನ್ನುಳಿದಂತೆ ಡಿ.ಪಿ.ಮನು(6ನೇ ಸ್ಥಾನ), ಕಿಶೋರ್‌ ಜೆನಾ(5ನೇ ಸ್ಥಾನ)ಕ್ಕೆ ತೃಪ್ತಿಪಟ್ಟುಕೊಂಡರು. 

ಚಿನ್ನ ಗೆದ್ದ ನೀರಜ್‌ನ ಬಂಗಾರ ನಡೆ, ಧ್ವಜರಹಿತ ಪಾಕ್‌ನ ಅರ್ಶದ್ ಕರೆದು ತಿರಂಗ ಪಕ್ಕಕ್ಕೆ ನಿಲ್ಲಿಸಿದ ಚೋಪ್ರಾ!

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಅರ್ಹತಾ ಸುತ್ತಿನಲ್ಲಿ ಒಂದೇ ಎಸೆತಕ್ಕೆ ಫೈನಲ್‌ ಹಾಗೂ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಟಿಕೆಟ್‌ ಪಡೆದುಕೊಂಡಿದ್ದ 25ರ ನೀರಜ್‌, ಭಾನುವಾರ ಮಧ್ಯರಾತ್ರಿ ನಡೆದ ಫೈನಲ್‌ನಲ್ಲಿ ಪಾಕಿಸ್ತಾನದ ಆರ್ಶದ್ ನದೀಂ ಅವರನ್ನು ಹಿಂದಿಕ್ಕಿ 88.17 ಮೀ. ದೂರಕ್ಕೆ ಎಸೆದು ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದರು. ಇದು ಒಂದು ರೀತಿ ಭಾರತ ಹಾಗೂ ಪಾಕಿಸ್ತಾನ ನಡುವೆ ಪದಕ್ಕಾಗಿ ಹೋರಾಟ ಎನ್ನುವಂತೆ ಬಿಂಬಿತವಾಗಿದ್ದರೂ, ಚಿನ್ನದ ಹುಡುಗ ನೀರಜ್ ಚೋಪ್ರಾ, ಪದಕ ಜಯಿಸಿದ ಬಳಿಕ ಪಾಕ್ ಆಟಗಾರನನ್ನು ಅಪ್ಪಿಕೊಂಡರು. ಇದಷ್ಟೇ ಅಲ್ಲದೇ ನೀರಜ್ ಚೋಪ್ರಾ ಚಿನ್ನ ಗೆದ್ದ ಬೆನ್ನಲ್ಲೇ ಕ್ರೀಡಾಂಗಣದಲ್ಲಿ ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿದ್ದಾರೆ. ಆದರೆ ಬೆಳ್ಳಿ ಗೆದ್ದ ಪಾಕಿಸ್ತಾನದ ಅರ್ಶದ್ ನದೀಮ್ ಧ್ವಜ ರಹಿತರಾಗಿದ್ದರು. ನೀರಜ್ ಹಾಗೂ ಜಾಕೂಬ್ ಸಂಭ್ರಮಿಸುತ್ತಿದ್ದರೆ, ಅರ್ಶದ್ ಮಾತ್ರ ಕೆಲ ದೂರಲ್ಲಿ ನಿಂತು ಈ ಸಂಭ್ರಮ ನೋಡುತ್ತಿದ್ದರು. ತಕ್ಷಣವೇ ನೀರಜ್ ಚೋಪ್ರಾ, ಅರ್ಶದ್ ನದೀಮ್‌ನನ್ನು ಹತ್ತಿರಕ್ಕೆ ಕರೆದು ಭಾರತದ ತ್ರಿವರ್ಣ ಧ್ವಜದ ಜತೆ ನಿಲ್ಲಿಸಿಕೊಂಡು ಫೋಟೋಗೆ ಫೋಸ್ ನೀಡುವ ಮೂಲಕ ಕ್ರೀಡೆಗೆ ಗಡಿಯ ಹಂಗಿಲ್ಲ ಎನ್ನುವ ಸುಂದರ ಸಂದೇಶವನ್ನು ಸಾರಿದ್ದರು.

ಇದೀಗ ನೀರಜ್ ಚೋಪ್ರಾ ತಾಯಿ ಕೂಡಾ ಅಂತಹದ್ದೇ ಸಂದೇಶವನ್ನು ಜಗತ್ತಿಗೆ ನೀಡಿದ್ದಾರೆ. ಪತ್ರಕರ್ತರು, ಪಾಕಿಸ್ತಾನದ ಅಥ್ಲೀಟ್ ಸೋಲಿಸಿ ನೀರಜ್ ಚೋಪ್ರಾ ಚಿನ್ನ ಗೆದ್ದಿರುವುದು ನಿಮಗೆ ಹೇಗೆ ಅನಿಸುತ್ತಿದೆ ಎಂದು ನೀರಜ್ ತಾಯಿಯನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನೀರಜ್ ಚೋಪ್ರಾ ತಾಯಿ ಸರೋಜ ದೇವಿ, "ನೋಡಿ, ಎಲ್ಲರೂ ಇಲ್ಲಿ ಚೆನ್ನಾಗಿ ಆಡಲು ಬರುತ್ತಾರೆ. ಇಲ್ಲಿ ಯಾರಾದರೊಬ್ಬರು ಗೆಲ್ಲಲೇಬೇಕು. ಅದು ಪಾಕಿಸ್ತಾನದವರೋ ಅಥವಾ ಹರ್ಯಾಣದವರೋ ಎನ್ನುವುದು ಮುಖ್ಯವಾಗುವುದಿಲ್ಲ" ಎಂದಿದ್ದಾರೆ. ಇನ್ನು ಮುಂದುವರೆದು, "ಇದು ಒಂದು ರೀತಿಯ ಖುಷಿಯ ಸಂಗತಿಯಾಗಿದೆ. ಅದೇ ರೀತಿ ಪಾಕಿಸ್ತಾನದ ಆಟಗಾರನೂ ಪದಕ ಗೆದ್ದಿದ್ದು ನನಗೆ  ಖುಷಿಯನ್ನುಂಟು ಮಾಡಿದೆ" ಎಂದು ಹೇಳಿದ್ದಾರೆ.

ನೀರಜ್ ಚೋಪ್ರಾಗೆ ಕಠಿಣ ಪೈಪೋಟಿ ನೀಡಿದ ಪಾಕಿಸ್ತಾನದ ಅರ್ಶದ್‌ ನದೀಂ ತಮ್ಮ 3ನೇ ಪ್ರಯತ್ನದಲ್ಲಿ 87.82 ಮೀ. ದೂರಕ್ಕೆ ಎಸೆದು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಚೆಕ್‌ ಗಣರಾಜ್ಯದ ಜಾಕುಬ್‌ ವೆಡ್ಲೆಜ್‌ 86.67 ಮೀ. ದೂರಕ್ಕೆ ಜಾವೆಲಿನ್‌ ಎಸೆದು ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಈ ಪದಕ ಇಡೀ ದೇಶಕ್ಕೆ ಅರ್ಪಣೆ, ನಾವು ಕಷ್ಟ ಪಟ್ಟರೇ ಏನುಬೇಕಾದರೂ ಮಾಡುತ್ತೇವೆ: ನೀರಜ್ ಚೋಪ್ರಾ 'ಚಿನ್ನ'ದಂತ ಮಾತು

ಎಲ್ಲದರಲ್ಲೂ ಚಾಂಪಿಯನ್‌!

ನೀರಜ್‌ ವಿಶ್ವದ ಎಲ್ಲಾ ಪ್ರಮುಖ ಕೂಟಗಳಲ್ಲೂ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. 2018ರಲ್ಲಿ ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಅವರು, ಅದೇ ವರ್ಷ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಾಂಪಿಯನ್‌ ಎನಿಸಿಕೊಂಡರು. 2021ರಲ್ಲಿ ಟೋಕಿಯೋ ಒಲಿಂಪಿಕ್ಸ್‌ ಚಿನ್ನ ಗೆದ್ದ ಬಳಿಕ ಕಳೆದ ವರ್ಷ ಡೈಮಂಡ್‌ ಲೀಗ್‌ ಪ್ರಶಸ್ತಿ ತನ್ನದಾಗಿಸಿಕೊಂಡರು. ವಿಶ್ವ ಕೂಟದಲ್ಲಿ ಬಾಕಿ ಇದ್ದ ಸ್ವರ್ಣವನ್ನು ಈ ಬಾರಿ ಕೊರಳಿಗೇರಿಸಿಕೊಂಡರು.

Latest Videos
Follow Us:
Download App:
  • android
  • ios