ಕ್ಸಿಯಾನ್ (ಚೀನಾ): ಭಾರತದ ಗುರುಪ್ರೀತ್ ಸಿಂಗ್ ಹಾಗೂ ಸುನಿಲ್ ಕುಮಾರ್, ಇಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಇದರೊಂದಿಗೆ ಭಾರತದ ಖಾತೆಯಲ್ಲಿ 1 ಚಿನ್ನ, 5 ಬೆಳ್ಳಿ ಹಾಗೂ 8 ಕಂಚಿನೊಂದಿಗೆ 14 ಪದಕಗಳು ಸೇರಿವೆ. 

ಕಳೆದ ಆವೃತ್ತಿಯಲ್ಲಿ ಭಾರತದ ಕುಸ್ತಿಪಟುಗಳು ತೋರಿದ್ದ ಪ್ರದರ್ಶನಕ್ಕಿಂತ ಈ ಬಾರಿ ಉತ್ತಮ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದರೆ. ಶನಿವಾರ ನಡೆದ ಪುರುಷರ ಗ್ರೀಕೋ ರೋಮನ್ ವಿಭಾಗದ 77 ಕೆ.ಜಿ. ಸ್ಪರ್ಧೆಯಲ್ಲಿ ಗುರುಪ್ರೀತ್ ಸಿಂಗ್, ದಕ್ಷಿಣ ಕೊರಿಯಾದ ಕಿಮ್ ಹೆಯನ್ ವೂ ವಿರುದ್ಧ 0-8 ಬೌಟ್‌ಗಳಲ್ಲಿ ಸೋಲು ಕಂಡರು. 2012ರ ಒಲಿಂಪಿಕ್ ಚಿನ್ನ ವಿಜೇತ ಹಾಗೂ 2013ರ ವಿಶ್ವ ಚಾಂಪಿಯನ್ ಕುಸ್ತಿಪಟು ಕಿಮ್ ಹೆಯನ್, ಗುರುಪ್ರೀತ್ ಮಣಿಸಿ ಏಷ್ಯನ್ ಚಾಂಪಿಯನ್‌ಶಿಪ್ ನಲ್ಲಿ ಚಿನ್ನಕ್ಕೆ ಮುತ್ತಿಟ್ಟರು. ಕ್ವಾರ್ಟರ್‌ನಲ್ಲಿ ಗುರುಪ್ರೀತ್, ಕತಾರ್‌ನ ಭಕಿತ್ ಶರೀಫ್ ಎದುರು 10-0 ಬೌಟ್‌ಗಳಲ್ಲಿ, ಸೆಮೀಸ್‌ನಲ್ಲಿ ಕಜಕಸ್ತಾನದ ತಮೆರ್ಲಾನ್ ಶದುಕಯೆವ್ ವಿರುದ್ಧ 6-5 ಬೌಟ್‌ಗಳಲ್ಲಿ ಜಯಿಸಿದರು.

87 ಕೆ.ಜಿ. ವಿಭಾಗದ ಮತ್ತೊಂದು ಫೈನಲ್ ಪಂದ್ಯದಲ್ಲಿ ಸುನಿಲ್ ಕುಮಾರ್, 2 ಬಾರಿ ಏಷ್ಯನ್ ಚಾಂಪಿಯನ್‌ಶಿಪ್ ಚಿನ್ನ ವಿಜೇತ ಹೊಸೈನ್ ನೌರಿ ವಿರುದ್ಧ 0-2 ಬೌಟ್‌ಗಳಲ್ಲಿ ಸೋಲುಂಡರು. ಸೆಮೀಸ್‌ನಲ್ಲಿ ಕಜಕಸ್ತಾನದ ಅಜ್ಮತ್ ವಿರುದ್ಧ ಸುನಿಲ್ ಕುಮಾರ್ ಜಯ ಸಾಧಿಸಿ ಫೈನಲ್‌ಗೇರಿದ್ದರು.