ನಿಗ್ಬೊ (ಚೀನಾ): ಮಾಜಿ ವಿಶ್ವ ಚಾಂಪಿಯನ್‌ ಭಾರತದ ಮೀರಾಭಾಯಿ ಚಾನು ಶನಿವಾರದಿಂದ ಇಲ್ಲಿ ಆರಂಭಗೊಳ್ಳಲಿರುವ ಏಷ್ಯನ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲುವ ಮೂಲಕ 2020ರ ಟೋಕಿಯೋ ಒಲಿಂಪಿಕ್ಸ್‌ ಅರ್ಹತೆಗೆ ಮತ್ತಷ್ಟುಹತ್ತಿರವಾಗಲು ಎದುರು ನೋಡುತ್ತಿದ್ದಾರೆ. 

ಅಂತಾರಾಷ್ಟ್ರೀಯ ವೇಟ್‌ಲಿಫ್ಟಿಂಗ್‌ ಫೆಡರೇಷನ್‌ ತೂಕ ವಿಭಾಗಗಳಲ್ಲಿ ಕೆಲ ಬದಲಾವಣೆ ಮಾಡಿರುವ ಕಾರಣ, 48 ಕೆ.ಜಿ ಬದಲಿಗೆ ಚಾನು 49 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಪುರುಷರ ವಿಭಾಗದಲ್ಲಿ ಕಿರಿಯರ ಒಲಿಂಪಿಕ್ಸ್‌ ಚಿನ್ನ ವಿಜೇತ ಜೆರಿಮಿ ಲಾಲ್ರಿನುಂಗಾ ಪದಕ ಭರವಸೆ ಎನಿಸಿದ್ದಾರೆ. 16 ವರ್ಷದ ಮಿರೋಜಾಮ್‌ ವೇಟ್‌ಲಿಫ್ಟರ್‌ 62 ಕೆ.ಜಿ ಬದಲಿಗೆ 67 ಕೆ.ಜಿ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ. 

ಈ ಕೂಟದಲ್ಲಿ ಪದಕ ಗೆದ್ದರೆ ನೇರವಾಗಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯದಿದ್ದರೂ, ಇಲ್ಲಿ ಉತ್ತಮ ಪ್ರದರ್ಶನ ತೋರಿದರೆ ಟೋಕಿಯೋ ಗೇಮ್ಸ್‌ಗೆ ಪ್ರವೇಶ ಪಡೆಯುವ ಸಾಧ್ಯತೆ ಹೆಚ್ಚಲಿದೆ. ಭಾರತದಿಂದ ಒಟ್ಟು 11 ವೇಟ್‌ಲಿಫ್ಟರ್‌ಗಳು ಪಾಲ್ಗೊಳ್ಳಲಿದ್ದಾರೆ.