ಏಷ್ಯನ್ ಈಜು ಕೂಟ: ಶ್ರೀಹರಿ ನಟರಾಜ್ ಗೆ 5ನೇ ಚಿನ್ನ
10ನೇ ಏಷ್ಯನ್ ವಯೋ ವರ್ಗ ಈಜು ಚಾಂಪಿಯನ್‌ಶಿಪ್‌ನಲ್ಲಿ ಶ್ರೀಹರಿ ನಟರಾಜ್ 5ನೇ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬೆಂಗಳೂರು[ಸೆ.28]: 10ನೇ ಏಷ್ಯನ್ ವಯೋ ವರ್ಗ ಈಜು ಚಾಂಪಿಯನ್ ಶಿಪ್‌ನಲ್ಲಿ ಭಾರತ ಸ್ಪರ್ಧಿಗಳ ಪದಕಗಳ ಬೇಟೆ 4ನೇ ದಿನವೂ ಮುಂದುವರಿದಿದೆ. ಶುಕ್ರವಾರ ಈಜು ಸ್ಪರ್ಧೆ ಕೊನೆಗೊಂಡಿತು.
ಭಾರತ 15 ಚಿನ್ನ, 19 ಬೆಳ್ಳಿ, 18ಕಂಚಿನೊಂದಿಗೆ 52 ಪದಕ ಗೆದ್ದು ಪಟ್ಟಿಯಲ್ಲಿ 4ನೇ ಸ್ಥಾನ ಪಡೆಯಿತು. 47 ಚಿನ್ನದೊಂದಿಗೆ 79 ಪದಕ ಮುಡಿಗೇರಿಸಿಕೊಂಡ ಜಪಾನ್ ಅಗ್ರಸ್ಥಾನದಲ್ಲಿ ಮುಂದುವರೆಯಿತು. ಸೆ. 29ರಿಂದ ಡೈವಿಂಗ್ ಸ್ಪರ್ಧೆ ನಡೆಯಲಿದೆ.
ಏಷ್ಯನ್ ಈಜು ಕೂಟ: ರಾವತ್ ಮುಡಿಗೆ 4ನೇ ಚಿನ್ನ
ಕೂಟದಲ್ಲಿ ಕರ್ನಾಟಕದ ತಾರಾ ಈಜುಪಟು ಶ್ರೀಹರಿ ನಟರಾಜ್ 5ನೇ ಚಿನ್ನದ ಪದಕ ಗೆದ್ದರು. ಪುರುಷರ 200 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಶ್ರೀಹರಿ ನಟರಾಜ್ 2 ನಿಮಿಷ 04.25 ಸೆ. ಹಾಗೂ ಎಸ್. ಶಿವಾ 2 ನಿಮಿಷ 05.23 ಸೆ.ಗಳಲ್ಲಿ ಗುರಿ ತಲುಪಿ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕಕ್ಕೆ ಮುತ್ತಿಟ್ಟರು. 50 ಮೀ. ಬಟರ್‌ಫ್ಲೈನಲ್ಲಿ ವೀರ್‌ಧವಳ್ ಖಾಡೆ 24.22 ಸೆ.ಗಳಲ್ಲಿ ಗುರಿ ಮುಟ್ಟಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. 4/200 ಮೀ. ಫ್ರೀಸ್ಟೈಲ್ ರಿಲೇಯಲ್ಲಿ ಭಾರತ ತಂಡ 7 ನಿಮಿಷ 41.06ಸೆ. ಗಳಲ್ಲಿ ಗುರಿ ಮುಟ್ಟಿ ಚಿನ್ನ ಜಯಿಸಿತು.
ಏಷ್ಯಾ ಬಾಸ್ಕೆಟ್’ಬಾಲ್: ಭಾರತಕ್ಕೆ ನಾಲ್ಕನೇ ಸೋಲು
ಮಹಿಳೆಯರ 200 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಮಾನ ಪಟೇಲ್ 2 ನಿಮಿಷ 22.87 ಸೆ. ಹಾಗೂ ಸೌಬ್ರಿಟಿ ಮೊಂಡಲ್ 2 ನಿಮಿಷ 23.99 ಸೆ.ಗಳಲ್ಲಿ ಗುರಿ ಮುಟ್ಟಿ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು. 50 ಮೀ. ಬಟರ್‌ಫ್ಲೈನಲ್ಲಿ ದಿವ್ಯಾ ಸತಿಜಾ 28.27 ಸೆ.ಗಳಲ್ಲಿ ಗುರಿ ಮುಟ್ಟಿ ಕಂಚು ಗೆದ್ದರು. 4/200 ಮೀ. ಫ್ರೀಸ್ಟೈಲ್ ರಿಲೇಯಲ್ಲಿ ಭಾರತ 9 ನಿಮಿಷ 15.87 ಸೆ.ಗಳಲ್ಲಿ ಗುರಿ ಮುಟ್ಟಿ ಕಂಚಿನ ಪದಕ ಗೆದ್ದಿತು. ಅಂಡರ್ 15-17 ಬಾಲಕರ 200 ಮೀ. ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಸ್ವದೇಶ್ ಮಂಡಲ್ 2 ನಿಮಿಷ 23.43 ಸೆ.ಗಳಲ್ಲಿ ಗುರಿ ತಲುಪಿ ಕಂಚು ಗೆದ್ದರು.