ಮಳೆಯಿಂದಾಗಿ ಪಂದ್ಯದ ಆರಂಭ ವಿಳಂಬಗೊಂಡಿತು. ಬಳಿಕ ಮಳೆ ನಿಂತರೂ ಮೈದಾನ ಸಂಪೂರ್ಣ ಒದ್ದೆಯಾಗಿದ್ದ ಕಾರಣ, ಆಟಗಾರರು ಗಾಯಗೊಳ್ಳುವ ಸಾಧ್ಯತೆ ಹೆಚ್ಚಿದೆ ಎನ್ನುವುದನ್ನು ಅರಿತ ಪಂದ್ಯಾವಳಿ ನಿರ್ದೇಶಕರು ಉಭಯ ತಂಡಗಳ ಕೋಚ್‌ಗಳ ಜತೆ ಚರ್ಚಿಸಿ ಪಂದ್ಯ ರದ್ದುಗೊಳಿಸುವ ತೀರ್ಮಾನ ಕೈಗೊಂಡರು.
ಮಸ್ಕಟ್(ಒಮಾನ್): ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ಹಾಕಿ ತಂಡಗಳು ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ಹಂಚಿಕೊಂಡಿವೆ. ಭಾರೀ ಮಳೆಯಿಂದಾಗಿ ಬಹುನಿರೀಕ್ಷಿತ ಪಂದ್ಯ ರದ್ದಾದ ಕಾರಣ, ಆಯೋಜಕರು ಪ್ರಶಸ್ತಿಯನ್ನು ಹಂಚಲು ನಿರ್ಧರಿಸಿದರು. ಮಳೆಯಿಂದಾಗಿ ಪಂದ್ಯದ ಆರಂಭ ವಿಳಂಬಗೊಂಡಿತು. ಬಳಿಕ ಮಳೆ ನಿಂತರೂ ಮೈದಾನ ಸಂಪೂರ್ಣ ಒದ್ದೆಯಾಗಿದ್ದ ಕಾರಣ, ಆಟಗಾರರು ಗಾಯಗೊಳ್ಳುವ ಸಾಧ್ಯತೆ ಹೆಚ್ಚಿದೆ ಎನ್ನುವುದನ್ನು ಅರಿತ ಪಂದ್ಯಾವಳಿ ನಿರ್ದೇಶಕರು ಉಭಯ ತಂಡಗಳ ಕೋಚ್‌ಗಳ ಜತೆ ಚರ್ಚಿಸಿ ಪಂದ್ಯ ರದ್ದುಗೊಳಿಸುವ ತೀರ್ಮಾನ ಕೈಗೊಂಡರು.
ಟಾಸ್ ಗೆದ್ದು ಟ್ರೋಫಿಯನ್ನು ತವರಿಗೆ ತರುವ ಅವಕಾಶವನ್ನು ಭಾರತ ಪಡೆದುಕೊಂಡಿತು. 2 ವರ್ಷಗಳಿಗೊಮ್ಮೆ ಪಂದ್ಯಾವಳಿ ನಡೆಯಲಿದ್ದು, ಮುಂದಿನ ವರ್ಷ ಟ್ರೋಫಿಯನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಬೇಕಿದೆ. ಟ್ರೋಫಿಯನ್ನು ಭಾರತೀಯರಿಗೆ ನೀಡಿದ ಕಾರಣ, ಚಿನ್ನದ ಪದಕಗಳನ್ನು ಪಾಕಿಸ್ತಾನಿ ಆಟಗಾರರಿಗೆ ವಿತರಿಸಲಾಯಿತು. ಏಷ್ಯನ್ ಹಾಕಿ ಫೆಡರೇಷನ್ ಮುಖ್ಯಸ್ಥ ಡಾಟೊ ತಯ್ಯಾಬ್ ಇಕ್ರಮ್, ಸದ್ಯದಲ್ಲೇ ಭಾರತೀಯ ಆಟಗಾರರಿಗೂ ಚಿನ್ನದ ಪದಕಗಳನ್ನು ಕಳುಹಿಸಿಕೊಡುವುದಾಗಿ ಹೇಳಿದ್ದಾರೆ. ಟೂರ್ನಿಯ 5ನೇ ಆವೃತ್ತಿ ಇದಾಗಿತ್ತು. ಈ ಮೊದಲಿನ ನಾಲ್ಕು ಆವೃತ್ತಿಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ತಲಾ 2 ಬಾರಿ ಪ್ರಶಸ್ತಿ ಗೆದ್ದಿದ್ದವು. 2011, 2016ರಲ್ಲಿ ಭಾರತ ಗೆದ್ದರೆ, 2012, 2013ರಲ್ಲಿ ಪಾಕಿಸ್ತಾನ ಟ್ರೋಫಿ ಜಯಿಸಿತ್ತು. ಟೂರ್ನಿಯಲ್ಲಿ ಭಾರತ ಅಜೇಯವಾಗಿ ಉಳಿಯಿತು.
ರೌಂಡ್ ರಾಬಿನ್ ಹಂತದಲ್ಲಿ 4 ಗೆಲುವು, 1 ಡ್ರಾನೊಂದಿಗೆ 13 ಅಂಕಗಳಿಸಿದ್ದ ಭಾರತ, ಸೆಮೀಸ್‌ನಲ್ಲಿ ಜಪಾನ್ ವಿರುದ್ಧ ಗೆದ್ದಿತ್ತು. ರೌಂಡ್ ರಾಬಿನ್ ಹಂತದಲ್ಲಿ ಪಾಕಿಸ್ತಾನ ವಿರುದ್ಧ 3-1 ಗೋಲುಗಳಲ್ಲಿ ಗೆಲುವು ಸಾಧಿಸಿತ್ತು. ನ.28ರಿಂದ ಆರಂಭಗೊಳ್ಳಲಿರುವ ವಿಶ್ವಕಪ್‌ಗೂ ಮುನ್ನ ಭಾರತ ಹಾಗೂ ಪಾಕಿಸ್ತಾನ ತಂಡಗಳಿಗೆ ಇದು ಅಂತಿಮ ಅಂತಾರಾಷ್ಟ್ರೀಯ ಪಂದ್ಯಾವಳಿಯಾಗಿತ್ತು.
ಮಲೇಷ್ಯಾಗೆ ಕಂಚು: ಜಪಾನ್ ವಿರುದ್ಧ 3-4ನೇ ಸ್ಥಾನಗಳಿಗಾಗಿ ನಡೆದ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ 3-2ರ ಗೆಲುವು ಸಾಧಿಸಿದ ಮಲೇಷ್ಯಾ ಕಂಚಿನ ಪದಕ ಗೆದ್ದುಕೊಂಡಿತು. ನಿಗದಿತ 60 ನಿಮಿಷಗಳ ಆಟದ ಮುಕ್ತಾಯಕ್ಕೆ ಉಭಯ ತಂಡಗಳು 2-2ರಲ್ಲಿ ಸಮಬಲ ಸಾಧಿಸಿದ್ದವು.
ಆಕಾಶ್‌ದೀಪ್ ಶ್ರೇಷ್ಠ ಆಟಗಾರ
ಭಾರತದ ಆಕಾಶ್‌ದೀಪ್ ಸಿಂಗ್‌ಗೆ ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ದೊರೆಯಿತು. ಭಾರತದ ಗೋಲ್ ಕೀಪರ್ ಪಿ.ಆರ್.ಶ್ರೀಜೇಶ್ ಶ್ರೇಷ್ಠ ಗೋಲ್‌ಕೀಪರ್ ಪ್ರಶಸ್ತಿಗೆ ಪಾತ್ರರಾದರು. ಪಾಕಿಸ್ತಾನದ ಅಬು ಬಕ್ಕಾರ್‌ಗೆ ಉದಯೋನ್ಮುಖ ಆಟಗಾರ ಪ್ರಶಸ್ತಿ ದೊರೆತರೆ, ಮಲೇಷ್ಯಾದ ಫೈಸಲ್ ಸಾರಿ ಅತಿಹೆಚ್ಚು ಗೋಲು (08) ಗಳಿಸಿದರು. ಭಾರತದ ಪರ ಹರ್ಮನ್‌ಪ್ರೀತ್ ಸಿಂಗ್ (06), ದಿಲ್‌ಪ್ರೀತ್ ಹಾಗೂ ಮನ್‌ದೀಪ್ ಸಿಂಗ್ (05) ಗೋಲು ಬಾರಿಸಿದರು.
